ವಿಜಯಪುರ, 13 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಶಾಸಕ ಯತ್ನಾಳ್ ಅವರು ಒಂದು ಧರ್ಮದ ಹಾಗೂ ಧರ್ಮದ ಗುರುಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವುದನ್ನು ನಿಲ್ಲಿಸಬೇಕು ಎಂದು ಬೃಹತ್ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ಸಲಹೆ ನೀಡಿದರು.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಪಾಟೀಲ್, ಯತ್ನಾಳ್ ಅವರು ಶಾಸಕರು ಸಾರ್ವಜನಿಕ ಜೀವನದಲ್ಲಿ ಇರುವಂಥವರು. ಒಬ್ಬ ಜನಪ್ರತಿನಿಧಿ ಆಗಿ ಒಂದು ಧರ್ಮದ ಬಗ್ಗೆ ಕೀಳಾಗಿ ಮಾತನಾಡುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.
ಯತ್ನಾಳ್ ಅವರ ಕೊಲೆ ಯತ್ನ ಪ್ರಕರಣದ ಬಗ್ಗೆ ಮಾತನಾಡಿದ ಸಚಿವರು, ಯತ್ನಾಳ್ ಅವರ ನಿವಾಸದ ಮೇಲೆ ದಾಳಿ ಮಾಡಿದ್ದು ಅಪರಾಧ. ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಈ ವಿಚಾರವಾಗಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಎರಡು ಪ್ರಕರಣದ ಕುರಿತು ತನಿಖೆ ನಡೆಸುವಂತೆ ಸೂಚನೆ ನೀಡಿದ್ದೇನೆ ಎಂದರು.
ಯತ್ನಾಳ್ ಅವರ ವರ್ತನೆ ಬಗ್ಗೆ ಅಸಮಾಧಾನವಾಗಿದೆ ಎಂದ ಸಚಿವರು, ಪೈಗಂಬರ್ ಅವರ ಬಗ್ಗೆ ಬಾಯಿಗೆ ಬಂದಂತೆ ಮಾತಾಡುವುದನ್ನು ಯತ್ನಾಳ್ ಅವರು ನಿಲ್ಲಿಸಲಿ ಎಂದರು.
ರಾಜಕಾರಣದಲ್ಲಿ ಟೀಕೆ ಟಿಪ್ಪಣಿಗಳು ಸರ್ವೆ ಸಾಮಾನ್ಯ. ಆದರೆ ಯಾವೊಬ್ಬ ರಾಜಕಾರಣಿ ಜನಪ್ರತಿನಿಧಿ ಒಂದು ಕೋಮಿನ ವಿರುದ್ಧ ನಿರಂತರವಾಗಿ ಹರಿಹಾಯುವುದನ್ನು ನಾನು ನೋಡಿಲ್ಲ. ಆದರೆ ಈ ನಿಟ್ಟಿನಲ್ಲಿ ಯತ್ನಾಳ್, ಅತಿರೇಕದ ಮಾತುಗಳು ಸಹಜವಾಗಿಯೇ ಆ ಧರ್ಮಕ್ಕೆ ನೋವುಂಟು ಮಾಡುತ್ತದೆ. ಹಾಗಾಗಿ ಇನ್ನು ಮೇಲಾದರು ಈ ರೀತಿ ಮಾತನಾಡುವುದನ್ನು ಯತ್ನಾಳ್ ನಿಲ್ಲಿಸಲಿ ಎಂದರು.
ಇನ್ನು ಯತ್ನಾಳ್ ಅವರ ಮೇಲೆ ದಾಳಿ ವಿಚಾರವನ್ನು ಗಂಭೀರವಾಗಿ ಪಡೆದಿದ್ದು ಅವರಿಗೆ ಸೂಕ್ತ ಭದ್ರತೆ ನೀಡುವಂತೆ ಪೊಲೀಸರಿಗೆ ಸೂಚನೆ ನೀಡಿದ್ದೇನೆ ಎಂದರು.
ಹಿಂದೂಸ್ತಾನ್ ಸಮಾಚಾರ್ / jyothi deshpande