ಅಂಬೇಡ್ಕರ್ ಜಯಂತಿಯಲ್ಲಿ ಶಾಸಕ ಕೊತ್ತೂರು ಮಂಜುನಾಥ್ ವಿರುದ್ಧ ಪ್ರತಿಭಟನೆ
ಅಂಬೇಡ್ಕರ್ ಜಯಂತಿಯಲ್ಲಿ ಶಾಸಕ ಕೊತ್ತೂರು ಮಂಜುನಾಥ್ ವಿರುದ್ಧ ಪ್ರತಿಭಟನೆ
ಕೊತ್ತೂರು ಜಿ ಮಂಜುನಾಥ್


ಕೋಲಾರ, ೧೪ ಏಪ್ರಿಲ್ (ಹಿ.ಸ) :

ಆ್ಯಂಕರ್ : ಕೋಲಾರದಲ್ಲಿ ಸೋಮವಾರ ನಡೆದ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಕೊತ್ತೂರು ಮಂಜುನಾಥ್ ವಿರುದ್ಧ ದಲಿತ ಕಾರ್ಯಕರ್ತರು ದಿಕ್ಕಾರ ಕೂಗಿದರು. ಕೊತ್ತೂರು ಮಂಜುನಾಥ್ ದಲಿತರನ್ನು ವಂಚಿಸಿ ಮೀಸಲಾತಿಯನ್ನು ಕಬಳಿಸಿದ್ದಾರೆ. ಅವರು ವೇದಿಕೆಯಿಂದ ಹೊರ ಹೋಗುವಂತೆ ಘೋಷಣೆಗಳನ್ನು ಹಾಕಿದರು.

ದಿಢೀರನೇ ಘೋಷಣೆಗಳು ಹಾಕಿದ ಕಾರಣ ಕಾರ್ಯಕ್ರಮದಲ್ಲಿ ಗೊಂದಲ ಉಂಟಾಯಿತು. ವೇದಿಕೆಯ ಬಳಿ ಆಗಮಿಸಿದ ಕಾರ್ಯಕರ್ತರು ಕೊತ್ತೂರು ಮಂಜುನಾಥ್ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಲು ನೈತಿಕತೆ ಹೊಂದಿಲ್ಲ. ಆದ್ದರಿಂದ ಅವರು ಕಾರ್ಯಕ್ರಮದಿಂದ ನಿರ್ಗಮಿಸುವಂತೆ ಒತ್ತಾಯಿಸಿದರು.

ಪೊಲೀಸರು ಮಧ್ಯ ಪ್ರವೇಶ ಮಾಡಿ ಪ್ರತಿಭಟನೆ ಮಾಡಿದವರನ್ನು ತಡೆದರು. ಕಾರ್ಯಕ್ರಮದಲ್ಲಿ ಪ್ರತಿಭಟನೆ ಮಾಡುವುದನ್ನು ನಿರೀಕ್ಷಿಸದ ಮಂಜುನಾಥ್ ದಿಢೀರನೇ ಅವರ ವಿರುದ್ಧ ಘೋಷಣೆಗಳನ್ನು ಹಾಕಿದ ಕಾರಣ ಪೆಚ್ಚಾಗಿ ಕುಳಿತರು. ಇಡೀ ಕಾರ್ಯಕ್ರಮದ ಉದ್ದಕ್ಕೂ ಸಪ್ಪೆ ಮೋರೆ ಹಾಕಿಕೊಂಡು ಕುಳಿತಿದ್ದರು. ಘೋಷಣೆಗಳನ್ನು ಹಾಕಿದರೂ ಅವರನ್ನೂ ಯಾರೂ ಸಮರ್ಥಿಸಲಿಲ್ಲ.

ಮುಳಬಾಗಿಲು ಮೀಸಲು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ವಿಧಾನಸಭೆಗೆ ಆಯ್ಕೆಯಾಗಿದ್ದ ಕೊತ್ತೂರು ಮಂಜುನಾಥ್ ಬುಡ್ಗ ಜಂಗಮ ಪರಿಶಿಷ್ಟ ಜಾತಿಗೆ ಸೇರಿಲ್ಲ. ಬದಲಾಗಿ ಅವರು ಹಿಂದುಳಿದ ವರ್ಗಗಳ ಬೈರಾಗಿ ಜಾತಿಗೆ ಸೇರಿದವರು ಎಂದು ಕೋಲಾರ ಜಿಲ್ಲಾ ಜಾತಿ ಸಿಂಧುತ್ವ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿಗಳು ನೀಡಿದ್ದ ವರದಿಯನ್ನು ರಾಜ್ಯ ಹೈಕೋರ್ಟ್ ಎತ್ತಿ ಹಿಡಿದಿತ್ತು. ಅಲ್ಲದೆ ಅವರ ವಿರುದ್ಧ ಮುಳಬಾಗಲು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣ ತನಿಖೆ ನಡೆಸುವಂತೆ ಕಳೆದ ವರ್ಷ ಹೈಕೋರ್ಟ್ ನ್ಯಾಯಮೂರ್ತಿ ನಾಗಪ್ರಸನ್ನ ಆದೇಶ ಮಾಡಿದ್ದರು.

ಕಳೆದ ೨೦೧೩ರಲ್ಲಿ ಕೊತ್ತೂರು ಮಂಜುನಾಥ್ ಮುಳಬಾಗಿಲು ಮೀಸಲು ವಿಧಾನಸಭಾ ಕ್ಷೇತ್ರದಿಂದ ಬುಡ್ಗ ಜಂಗಮ ಜಾತಿ ಪ್ರಮಾಣ ಪತ್ರ ನೀಡಿ ಚುನಾವಣೆಗೆ ಸ್ಪರ್ಧಿಸಿ ಆಯ್ಕೆಯಾಗಿದ್ದರು. ಕೊತ್ತೂರು ಮಂಜುನಾಥ್ ಬಡ್ಗ ಜಂಗಮ ಜಾತಿಗೆ ಸೇರಿಲ್ಲ ಎಂದು ಪರಾಜಿತ ಅಭ್ಯರ್ಥಿಗಳಾದ ಮುನಿಆಂಜಿನಪ್ಪ ಹಾಗೂ ಇತರರು ರಾಜ್ಯ ಹೈಕೋರ್ಟ್ನಲ್ಲಿ ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ರಾಜ್ಯ ಹೈಕೋರ್ಟ್ ಮಂಜುನಾಥ್ ರವರನ್ನು ಅನರ್ಹಗೊಳಿಸಿ ೨೦೧೮ರಲ್ಲಿ ಆದೇಶ ಮಾಡಿತ್ತು.

ಈ ಆದೇಶದ ವಿರುದ್ಧ ಕೊತ್ತೂರು ಮಂಜುನಾಥ್ ಹೈಕೊರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಮೇಲ್ಮನವಿಯನ್ನು ವಜಾಗೊಳಿಸಿದ ಹೈ ಕೋರ್ಟ್ ಕೋಲಾರ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ನೀಡಿದ್ದ ವರದಿಯನ್ನು ಎತ್ತಿ ಹಿಡಿಯಿತು. ಅಲ್ಲದೆ, ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ತನಿಖೆ ನಡೆಸುವಂತೆ ಹೈಕೋರ್ಟ್ ಏಕ ಸದಸ್ಯ ಪೀಠದ ನ್ಯಾಯಾಧೀಶ ನಾಗಪ್ರಸನ್ನ ಆದೇಶ ಮಾಡಿದ್ದರು.

ನ್ಯಾಯಮೂರ್ತಿ ನಾಗಪ್ರಸನ್ನ ಮಾಡಿದ್ದ ಆದೇಶವನ್ನು ಪ್ರಶ್ನೆ ಮಾಡಿ ಕೊತ್ತೂರು ಮಂಜುನಾಥ್ ಸುಪ್ರಿಂ ಕೋರ್ಟಿಗೆ ವಿಶೇಷ ಮೇಲ್ಮನವಿ ಸಲ್ಲಿಸಿದ್ದಾರೆ.

ಚಿತ್ರ : ಕೊತ್ತೂರು ಜಿ ಮಂಜುನಾಥ್

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande