ರಾಯಚೂರು, 01 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಜಿಲ್ಲೆಯಲ್ಲಿ ತಾಯಿ ಮತ್ತು ಮಕ್ಕಳ ಮರಣ ಪ್ರಮಾಣ ತಗ್ಗಿಸುವ ಉದ್ದೇಶದಿಂದ ಆರೋಗ್ಯ ಇಲಾಖೆಯು ತೆಗೆದುಕೊಳ್ಳಬೇಕಾದ ಲಸಿಕೆ, ಆರೋಗ್ಯ ಕ್ರಮಗಳ ಬಗ್ಗೆ ಕರೆ ಮಾಡಿ ಮಾಹಿತಿ ನೀಡುವ ಕಿಲ್ಕಾರಿ ಎಂಬ ಉಚಿತ ಮೊಬೈಲ್ ಆರೋಗ್ಯ ಸೇವೆಯನ್ನು ಜಾರಿಗೆ ತಂದಿದೆ. ಜಿಲ್ಲೆಯ ಅಂದಾಜು 42 ಸಾವಿರ ಗರ್ಭಿಣಿಯರು, ಮಕ್ಕಳಿಗೆ ಇದರಿಂದ ಅನುಕೂಲವಾಗಲಿದೆ.
ಪ್ರತಿವರ್ಷ ರಾಯಚೂರು ಜಿಲ್ಲೆಯಲ್ಲಿ ಅಂದಾಜು 42 ರಿಂದ 45 ಸಾವಿರ ಗರ್ಭಿಣಿಯರು ದಾಖಲಾಗುತ್ತಾರೆ. ಈ ಸಂದರ್ಭದಲ್ಲಿ ನಾನಾ ಕಾರಣಗಳಿಗೆ ತಾಯಿ ಮತ್ತು ನವಜಾತ ಶಿಶುಗಳ ಮರಣ ಸಂಭವಿಸುವ ಸಾಧ್ಯತೆ ಇರುತ್ತದೆ. ಅದನ್ನು ತಪ್ಪಿಸಲು ಸರಕಾರವು ಕಿಲ್ಕಾರಿ ಸೇವೆ ಜಾರಿಗೆ ತರಲಾಗಿದೆ. ತನ್ಮೂಲಕ ಗರ್ಭಧಾರಣೆ, ಗರ್ಭಿಣಿ ತಾಯಿ ಮತ್ತು ಮಗುವಿನ ಆರೋಗ್ಯದ ಮಾಹಿತಿಯನ್ನು ನೇರವಾಗಿ ಕುಟುಂಬಗಳ ಮೊಬೈಲ್ ಫೆÇೀನ್‍ಗೆ ತಲುಪಿಸಲಾಗುತ್ತದೆ.
ಕಿಲ್ಕಾರಿ ಕಾರ್ಯಕ್ರಮವು ಮೊಬೈಲ್ ಆಧಾರಿತ ಸೇವೆಯಾಗಿದ್ದು, ಇದು 2016ರ ಜನವರಿ 15ರಂದು ಡಿಜಿಟಲ್ ಇಂಡಿಯಾ ಉಪಕ್ರಮದ ಭಾಗವಾಗಿ ಹೊಸ ಮತ್ತು ಹಾಲಿ ಗರ್ಭಿಣಿಯರಿಗಾಗಿ ಪ್ರಾರಂಭಿಸಲ್ಪಟ್ಟಿದೆ. ಹೊಸ ಮತ್ತು ನಿರೀಕ್ಷಿತ ತಾಯಂದಿರಿಗೆ ಪ್ರಮುಖ ಆರೋಗ್ಯ ಮಾಹಿತಿಯನ್ನು ನೇರವಾಗಿ ತಲುಪಿಸಲು ಮೊಬೈಲ್ ತಂತ್ರಜ್ಞಾನ ಬಳಸಿಕೊಳ್ಳಲಾಗುತ್ತದೆ.
ಕಿಲ್ಕಾರಿ ಎಂದರೇನು? ಕಿಲ್ಕಾರಿಯು ಗರ್ಭಿಣಿ, ಬಾಣಂತಿಯರಿಗೆ ತಂದಿರುವ ಉಚಿತ ಆರೋಗ್ಯ ಮಾಹಿತಿ ನೀಡುವ ಮೊಬೈಲ್ ಸೇವೆಯಾಗಿದೆ. ಈ ಉಚಿತ ಸೇವೆಯು ಗರ್ಭಧಾರಣೆಯ 4ನೇ ತಿಂಗಳಿನಿಂದ ಮಗುವಿನ ಮೊದಲ ಜನ್ಮದಿನದವರೆಗಿನ ಅವಧಿಯಲ್ಲಿ ತಾಯಿಯ ಆರೋಗ್ಯದ ಬಗ್ಗೆ ಹಾಗೂ ಮಕ್ಕಳಿಗೆ ನೀಡುವ ಲಸಿಕೆಗಳ ಬಗ್ಗೆ ಮಾಹಿತಿಯನ್ನು ಮುಂಚಿತವಾಗಿ ಕರೆಗಳ ಮೂಲಕ ತಿಳಿಸಲಾಗುತ್ತದೆ.
ಕಿಲ್ಕಾರಿ ನೋಂದಣಿ ಹೇಗೆ? ಗರ್ಭಧಾರಣೆಯ ಅಥವಾ ಮಗುವಿನ ಜನನದ ವಿವರಗಳನ್ನು ಆಶಾ ಕಾರ್ಯಕರ್ತೆ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ, ಸಮುದಾಯ ಆರೋಗ್ಯ ಅಧಿಕಾರಿ ಅಥವಾ ಹತ್ತಿರದ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಮೋಬೈಲ್ ಸಂಖ್ಯೆ ನೀಡಿ ನೋಂದಾಯಿಸಿಕೊಳ್ಳಬೇಕು. ನಂತರ ಈ ಮಾಹಿತಿಯನ್ನು ಆರ್.ಸಿ.ಹೆಚ್ (ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ) ಪೋರ್ಟಲ್‍ನಲ್ಲಿ ನಮೂದಿಸಲಾಗುತ್ತದೆ.
ಗರ್ಭಿಣಿಯರು ಪಾಲಿಸಬೇಕಾದ ಅಂಶಗಳು: ಆರೋಗ್ಯ ಇಲಾಖೆಗೆ ತಾವು ಚಾಲ್ತಿಯಲ್ಲಿರುವ ಸೂಕ್ತ ಮೊಬೈಲ್ ಸಂಖ್ಯೆಯನ್ನು ನೀಡಬೇಕು ಅಲ್ಲದೆ ತಮ್ಮ ಮೊಬೈಲ್‍ನಲ್ಲಿ ಕಿಲ್ಕಾರಿ ದೂರವಾಣಿ ಸಂಖ್ಯೆ: 0124-4451660 ಅನ್ನು ಸೇವ್ ಮಾಡಬೇಕು. ಹಾಗೂ ಈ ಸಂಖ್ಯೆಯಿಂದ ಕರೆಗಳು ಬಂದಾಗ ಸ್ವೀಕಾರ ಮಾಡಬೇಕು. ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ಫಲಾನುಭವಿಗಳು ತಮ್ಮ ಮೊಬೈಲ್ ಸಂಖ್ಯೆ ನೀಡಿ ನೊಂದಾಯಿಸಿಕೊಳ್ಳಬೇಕು. ನಂತರ ಈ ಮಾಹಿತಿ ಆರ್.ಸಿ.ಹೆಚ್ ಪೋರ್ಟ್‍ಲಗೆ ನಮೂದಿಸಲಾಗುತ್ತದೆ. ನಂತರ ಉಚಿತವಾದ ಕಿಲ್ಕಾರಿ ಕರೆ ಸ್ವೀಕರಿಸಲು ಸಾಧ್ಯವಾಗುತ್ತದೆ.
ಗರ್ಭಧಾರಣೆ ಅವಧಿಗೆ ಸಂಬಂಧಿಸಿದ ಆರೋಗ್ಯ ಮಾಹಿತಿ ಮತ್ತು ಮಗು ಜನಿಸಿದ ನಂತರ 9 ತಿಂಗಳವರೆಗೆ ಹಾಕಿಸಬೇಕಾದ 12 ಲಸಿಕೆ ಬಗ್ಗೆ ಮುಂಚಿತವಾಗಿ ಕರೆ ಮೂಲಕ ತಿಳಿಸಲಾಗುತ್ತದೆ. ಕಿಲ್ಕರಿ ಸಂಖ್ಯೆಯನ್ನು ಮೊಬೈಲ್‍ನಲ್ಲಿ ಇರಿಸಿಕೊಳ್ಳಬೇಕು. ಒಂದು ವೇಳೆ ಕರೆ ಬಾರದಿದ್ದರೆ ಅಥವಾ ಮಾಹಿತಿಯನ್ನು ಮತ್ತೊಮ್ಮೆ ಕೇಳಲು ಬಯಸಿದರೆ ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 14423ಗೆ ಕರೆ ಮಾಡಬೇಕು. ಸಾಕಷ್ಟು ಫಲಾನುಭವಿಗಳು ತಮ್ಮ ಪ್ರಿ-ರಿಕಾರ್ಡೆಡ್ ಕರೆಗಳು ಬಂದಾಗ ಸ್ವೀಕರಿಸುವುದಿಲ್ಲ. ಅಥವಾ ಆರೋಗ್ಯ ಇಲಾಖೆಗೆ ಯಾರೋದೋ ಮೊಬೈಲ್ ನಂಬರ ನೀಡಿರುತ್ತಾರೆ. ಹಾಗಾಗಂದಂತೆ ಸಾರ್ವಜನಿಕರು ನೋಡಿಬೇಕು. ಈ ಯೋಜನೆಯ ಸದುಪಯೋಗ ತಪ್ಪದೇ ಪಡೆದುಕೊಂಡು ತಾಯಿ ಮತ್ತು ಶಿಶುವಿನ ಮರಣದ ಪ್ರಮಾಣ ಕಡಿಮೆ ಮಾಡಬೇಕು.
ಯಾವ್ಯಾವ ಸಂದೇಶ ಬರುತ್ತದೆ? ಗರ್ಭಧಾರಣೆಯ ಅವಧಿಗೆ ಸಂಬಂಧಿಸಿದ ಆರೋಗ್ಯ ಮಾಹಿತಿ, ಮಗು ಜನಿಸಿದ ನಂತರ, ಶಿಶುವಿನ ವಯಸ್ಸಿಗೆ ಸಂಬಂಧಿಸಿದ ಆರೋಗ್ಯ ಮಾಹಿತಿ ಮತ್ತು ಸಲಹೆ ನೀಡಲಾಗುತ್ತದೆ. ಇದಲ್ಲದೇ ಫ್ಯಾಮಿಲಿ ಪ್ಲಾನಿಂಗ್ ಬಗ್ಗೆಯೂ ಮಾಹಿತಿಗಳನ್ನು ತಿಳಿಸಿಕೊಡಲಾಗುತ್ತದೆ.
ತಾಯಿ ಮತ್ತು ಶಿಶು ಮರಣ ಸಂಭವಿಸುವ ಸಾಧ್ಯತೆಯನ್ನು ತಡೆಗಟ್ಟುವ ಉದ್ದೇಶದಿಂದ ಸರ್ಕಾರವು ಆರೋಗ್ಯ ಇಲಾಖೆ ವತಿಯಿಂದ ಕಿಲ್ಕಾರಿ ಎಂಬ ಉಚಿತ ಮೊಬೈಲ್ ಆರೋಗ್ಯ ಸೇವೆ ಜಾರಿಗೆ ತಂದಿದ್ದು, ಈ ಯೋಜನೆಯನ್ನು ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು. -ಸುರೇಂದ್ರ ಬಾಬು, ಡಿಹೆಚ್‍ಓ ರಾಯಚೂರು
ತಾಯಿ ಮತ್ತು ಶಿಶು ಮರಣದ ದರ ಕಡಿಮೆ ಮಾಡಲು ಹಾಗೂ ಗರ್ಭಿಣಿ ತಾಯಂದಿರಿಗೆ ಗುಣಮಟ್ಟದ ಆರೈಕೆ ಮಾಹಿತಿ ಒದಗಿಸಲು ಸರ್ಕಾರವು ಕಿಲ್ಕಾರಿ ಸೇವೆ ಆರಂಭಿಸಿದ್ದು, ಜಿಲ್ಲೆಯ ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕು. -ಡಾ.ನಂದಿತಾ, ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿಗಳು ರಾಯಚೂರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್