ನವದೆಹಲಿ, 21 ಮಾರ್ಚ್ (ಹಿ.ಸ.) :
ಆ್ಯಂಕರ್ : ಸ್ಮಾರ್ಟ್ ಫೋನ್ ನೋಡಿದರೆ ಹಸುಗೂಸು ಅಳು ನಿಲ್ಲಿಸಿ ಕಣ್ಣರಳಿಸುತ್ತದೆ. ತುದಿ ಬೆರಳಲ್ಲಿ ಜಗತ್ತನ್ನೇ ಆಳುವಂಥ ಈ ಒಂದು ತಾಂತ್ರಿಕ ಉದ್ಯಮವನ್ನು ಭಾರತ ಇಂದು ಸ್ಮಾರ್ಟ್ ಆಗಿಯೇ ಆಳುತ್ತಿದೆ. ವಿಶ್ವಕ್ಕೇ ಸ್ಮಾರ್ಟ್ ಫೋನ್ ಪೂರೈಸಿ ಜಾಗತಿಕ ಹಿರಿಮೆಗೆ ಪಾತ್ರವಾಗುತ್ತಿದೆ.
ಮೂರು ದಶಕದ ಹಿಂದೆ ಕೇವಲ ಸ್ಥಿತಿವಂತರ ಬಳಿ ಇರುತ್ತಿದ್ದ ಮೊಬೈಲ್ ಗಳು ಇಂದು ಜನಸಾಮಾನ್ಯರ ಕೈಯಲ್ಲಿವೆ. ಸರ್ವರಲ್ಲೂ ಸ್ಮಾರ್ಟ್ ಫೋನ್ ಶೋಭಿಸುತ್ತಿವೆ. ಒಂದೆರೆಡು ದಶಕದ ಹಿಂದೆ ಮೊಬೈಲ್ ಅನ್ನು ಚೀನೀ ಸೆಟ್ ಎಂದೇ ಕರೆಯಲಾಗುತ್ತಿತ್ತು. ಆದರೀಗ ಕಾಲ ಬದಲಾಗಿದೆ. ಗುಣಮಟ್ಟ, ಬೆಲೆ, ಆಕರ್ಷಕ ವಿನ್ಯಾಸದಲ್ಲಿ 'ಮೇಡ್ ಇನ್ ಇಂಡಿಯಾ' ಎಂದು ವಿದೇಶಿಗರೂ ಹೆಮ್ಮೆಪಡುವಂತೆ ಬಲಿಷ್ಠವಾಗಿ ಬೆಳೆದಿದೆ ಭಾರತದ ಸ್ಮಾರ್ಟ್ ಫೋನ್ ಉದ್ಯಮ.
ತಾಂತ್ರಿಕವಾಗಿ ಮುಂದುವರಿದ ಇಂದಿನ 21ನೇ ಶತಮಾನದಲ್ಲಿ ಭಾರತ ಜಗತ್ತಿನಲ್ಲೇ ಸ್ಮಾರ್ಟ್ ಆಗಿ ಕಂಗೊಳಿಸುತ್ತಿದೆ. ಐ ಫೋನ್, ಸ್ಮಾರ್ಟ್ ಫೋನ್ ತಯಾರಿಕೆ ಮತ್ತು ರಫ್ತು ವಲಯದಲ್ಲಿ ಜಾಗತಿಕ ಕೇಂದ್ರವಾಗಿ ಗುರುತಿಸಿಕೊಂಡಿದೆ. ವಿಶ್ವದ ದೊಡ್ಡಣ್ಣ ಅಮೇರಿಕಾ, ಚೀನೀ ಕ್ರಾಂತಿಯ ಚೀನಾಕ್ಕೂ ರಫ್ತು ಮಾಡುತ್ತಿದೆ ಈಗ.
2014-15 ರಲ್ಲಿ ಭಾರತ ಕೇವಲ ಶೇ.25ರಷ್ಟು ಮಾತ್ರ ಮೊಬೈಲ್ ಉತ್ಪಾದಿಸಿ ದೇಶಿಯ ಬೇಡಿಕೆ ಪೂರೈಸಿಕೊಳ್ಳಲಷ್ಟೇ ಶಕ್ತವಾಗಿತ್ತು. ಆದರೀಗ ವಿಶ್ವಕ್ಕೇ ರವಾನಿಸುವಷ್ಟು ಬೃಹತ್ತಾಗಿ ಬೆಳೆದಿದೆ. 2015ರಲ್ಲಿ US $ 3 ಬಿಲಿಯನ್ ಆಗಿದ್ದ ಭಾರತದ ಸ್ಮಾರ್ಟ್ ಫೋನ್ ಉತ್ಪಾದನೆ ಮೌಲ್ಯ 2025ರ ವೇಳೆಗೆ $ 50 ಶತಕೋಟಿಗೆ ಜಿಗಿದಿದೆ. ಉತ್ಪಾದನೆ ಜತೆಗೆ ರಫ್ತಿನಲ್ಲೂ 91 ಪ್ರತಿಶತ ಹೆಚ್ಚಳ ಕಂಡಿದೆ.
ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆ ಗಾತ್ರ 2023ರಲ್ಲಿ USD 41.31 ಶತಕೋಟಿ ಮೌಲ್ಯದ್ದಾಗಿತ್ತು. ಆದರೀಗ ಬಹು ವಿಸ್ತರಣೆ ಕಂಡಿದೆ. 2032ರ ವೇಳೆಗೆ USD 77.23 ಶತಕೋಟಿ ತಲುಪುವ ನಿಟ್ಟಿನಲ್ಲಿ ಬೃಹತ್ತಾಗಿ ಬೆಳೆಯುತ್ತಿದೆ. ಇದೇ ಪ್ರಗತಿಯಲ್ಲಿ ಸಾಗಿದರೆ ಭವಿಷ್ಯದಲ್ಲಿ ಭಾರತದ ಐ ಫೋನ್, ಸ್ಮಾರ್ಟ್ ಫೋನ್ ಗಳು ವಿಶ್ವವನ್ನೇ ಅವರಿಸಲಿವೆ.
*ಅಂದಾಜು ಮೀರಿದ ರಫ್ತು:*
ಪ್ರಸ್ತುತ ಆರ್ಥಿಕ ವರ್ಷದಲ್ಲಿ ಆಗಲೇ ಭಾರತದ ಸ್ಮಾರ್ಟ್ ಫೋನ್ ರಫ್ತು ಅಂದಾಜು ಮೀರಿ ವಿದೇಶಿ ಮಾರುಕಟ್ಟೆಗಳಿಗೆ ಲಗ್ಗೆಯಿಟ್ಟಿದೆ. ₹ 1,82,448 ಕೋಟಿ (US$ 21 ಬಿಲಿಯನ್) ದಾಟಿದೆ. ಇಂಡಿಯಾ ಸೆಲ್ಯುಲರ್ & ಎಲೆಕ್ಟ್ರಾನಿಕ್ಸ್ ಅಸೋಸಿಯೇಷನ್ ಪ್ರಕಾರ 2024ನೇ ಹಣಕಾಸು ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ.54ರಷ್ಟು ರಫ್ತು ಹೆಚ್ಚಳವಾಗಿದೆ.
ಆಪಲ್ ಇಂಕ್ ₹ 1,25,000 ಕೋಟಿ (US$ 14.39 ಬಿಲಿಯನ್) ಕೊಡುಗೆ ನೀಡಿದ್ದರೆ, ಐಫೋನ್ ರಫ್ತು ಒಟ್ಟು ಸ್ಮಾರ್ಟ್‌ಫೋನ್ ರಫ್ತಿನ ಶೇ.70ರಷ್ಟಿದೆ. 2025ರ ಮೊದಲ ತ್ರೈಮಾಸಿಕದಲ್ಲಿ, ಸ್ಮಾರ್ಟ್ ಫೋನ್ ರಫ್ತು ₹ 42,137 ಕೋಟಿ (US$ 4.85 ಬಿಲಿಯನ್) ತಲುಪಿದೆ. ಕಳೆದ ವರ್ಷಕ್ಕಿಂತ ಶೇ 30ರಷ್ಟು ಹೆಚ್ಚಳ ಕಂಡಿದೆ.
ಅರ್ಧ ವಾರ್ಷಿಕದ ವೇಳೆಗೆ ₹ 72,979 ಕೋಟಿ (US$ 8.4 ಬಿಲಿಯನ್) ಮೌಲ್ಯದ ಸ್ಮಾರ್ಟ್ ಫೋನ್ ರಫ್ತು ನಿರೀಕ್ಷೆಯಿದ್ದು, ಆಗಲೇ ಮೊದಲ ತ್ರೈಮಾಸಿಕ ಅವಧಿಯಲ್ಲೇ ಮೊಬೈಲ್ ರಫ್ತು ಅತ್ಯಂತ ಪ್ರಬಲವಾಗಿದೆ. ಪ್ರತಿ ತಿಂಗಳು ₹17,376 ಕೋಟಿ (US$ 2 ಬಿಲಿಯನ್) ಅನ್ನು ಮೀರಿದೆ. ಈ ಮೂರು ತಿಂಗಳಲ್ಲಿ ಒಟ್ಟು ₹ 59,078 ಕೋಟಿ (US$ 6.8 ಬಿಲಿಯನ್) ಮೌಲ್ಯದ ಸ್ಮಾರ್ಟ್ ಫೋನ್ ಗಳು ಭಾರತದಿಂದ ರಫ್ತಾಗಿವೆ.
*ಯುಎಸ್, ಯುರೋಪ್ ಪ್ರಮುಖ ಮಾರುಕಟ್ಟೆ:* ಮೇಡ್ ಇನ್ ಇಂಡಿಯಾ ಸ್ಮಾರ್ಟ್ ಫೋನ್ ಮತ್ತು ಐ ಫೋನ್ ಗಳಿಗೆ ಯುಎಸ್ ಮತ್ತು ಯುರೋಪ್ ಪ್ರಮುಖ ಮಾರುಕಟ್ಟೆಗಳಾಗಿವೆ. ಶೇ.50–55 ರಷ್ಟು ಫೋನ್ ಗಳನ್ನು ಯುಎಸ್ ಖರೀದಿಸುತ್ತಿದೆ. ಆತ್ಮನಿರ್ಭಾರ ಭಾರತದಲ್ಲಿ ದಾಖಲೆಯ ಐಫೋನ್ ಉತ್ಪಾದನೆಯಿಂದಾಗಿ ಮೊಬೈಲ್ ಫೋನ್ ರಫ್ತು ಅಧಿಕ ಪ್ರಮಾಣದಲ್ಲಿ ಅಂದರೆ ಶೇ.54ಕ್ಕಿಂತ ಹೆಚ್ಚು ಏರಿಕೆ ಕಂಡಿದೆ.
*US $ 58.71 ಬಿಲಿಯನ್ ತಲುಪುವ ನಿರೀಕ್ಷೆ:*
ಭಾರತದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಐಫೋನ್ ಉತ್ಪಾದನೆ ಆಗುತ್ತಿದ್ದು, ದೇಶೀಯವಾಗಿ ಶೇ.99ರಷ್ಟು ಬೇಡಿಕೆಯನ್ನು ಪೂರೈಸಿಯೂ ರಫ್ತು ವಲಯದಲ್ಲಿ ಭಾರತ ತನ್ನ ಹೆಜ್ಜೆ ಗುರುತು ಮೂಡಿಸಿದೆ. ಭಾರತದ ಮೊಬೈಲ್ ಉತ್ಪಾದನೆ ₹ 5,10,000 ಕೋಟಿ (US $ 58.71 ಬಿಲಿಯನ್) ತಲುಪುವ ನಿರೀಕ್ಷೆಯಿದ್ದು, ಇದು ಜಾಗತಿಕ ಉತ್ಪಾದನಾ ಕೇಂದ್ರವಾಗಿ ಭಾರತದ ಸ್ಥಾನವನ್ನು ಬಲಪಡಿಸುತ್ತದೆ ಎನ್ನುತ್ತಾರೆ ಇಂಡಿಯಾ ಸೆಲ್ಯುಲರ್ ಮತ್ತು ಎಲೆಕ್ಟ್ರಾನಿಕ್ಸ್ ಅಸೋಸಿಯೇಷನ್ ಅಧ್ಯಕ್ಷ ಪಂಕಜ್ ಮೊಹಿಂದ್ರೂ.
2021ರಲ್ಲಿ ಕೇಂದ್ರ ಸರ್ಕಾರ ಮೊಬೈಲ್ ಉತ್ಪಾದನೆ-ಸಂಬಂಧಿತ ಪ್ರೋತ್ಸಾಹಕ ಯೋಜನೆ ಪರಿಚಯಿಸಿದಾಗಿನಿಂದ ಭಾರತದ ಸ್ಮಾರ್ಟ್ ಫೋನ್, ಐ ಫೋನ್ ಉತ್ಪಾದನೆ ಈಗ ಊಹಿಸಲಾರದಷ್ಟು ಅಂದರೆ ಶೇ.680ರಷ್ಟು ಹೆಚ್ಚಳವನ್ನು ಸೂಚಿಸುತ್ತಿದೆ. ಉತ್ಪಾದನೆ ವಲಯದಲ್ಲಿ ದೇಶದ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳು ಈಗ ತೈಲ ಉತ್ಪನ್ನಗಳನ್ನು ಮೀರಿಸಿದೆ. ಅಂತೆಯೇ ರಫ್ತು ಹೆಚ್ಚಳದಲ್ಲೂ ಐತಿಹಾಸಿಕ ಯಶಸ್ಸನ್ನು ಪ್ರತಿಬಿಂಬಿಸುತ್ತಿದೆ.
ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ ಆಪಲ್‌ನ ಪ್ರಮುಖ ಪೂರೈಕೆದಾರವಾಗಿ ಉಳಿದಿದ್ದರೂ, ಫಾಕ್ಸ್‌ಕಾನ್ ಮತ್ತು ಟಾಟಾ ಗ್ರೂಪ್ ಕೊಡುಗೆಗಳೊಂದಿಗೆ ಭಾರತದ ಉತ್ಪಾದನೆ ವಿಸ್ತರಿಸಿದೆ. ಆಪಲ್ ಇಂಕ್ ಐಫೋನ್‌ಗಳನ್ನು ಮೀರಿ ಉತ್ಪಾದನೆ ಮತ್ತು ರಫ್ತು ಬೆಳವಣಿಗೆಯ ನಿರೀಕ್ಷೆಯಲ್ಲಿದೆ ಭಾರತದ ಸ್ಮಾರ್ಟ್ ಫೋನ್ ಉದ್ಯಮ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa