ವಿಜಯಪುರ, 01 ಏಪ್ರಿಲ್ (ಹಿ.ಸ.) :
ಆ್ಯಂಕರ್ : ನನ್ನ ತಾಳ್ಮೆ ಪರೀಕ್ಷೆ ಮಾಡಬೇಡಿ. ಕಾರ್ಯದಲ್ಲಿ ಅಲಕ್ಷ್ಯತನ, ನಿಷ್ಕಾಳಜಿ ನಾನು ಸಹಿಸುವುದಿಲ್ಲ. ಅಧಿಕಾರಿಗಳು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು. ಯಾವ ಕೆರೆ ಯಾವ ಇಲಾಖೆಗೆ ಸೇರಿದೆ ಎಂಬುದರ ಕುರಿತು ಒಂದು ವಾರದೊಳಗಾಗಿ ಜಿಲ್ಲೆಯಲ್ಲಿರುವ ಎಲ್ಲ ಕೆರೆಗಳ ವರದಿ ನೀಡಿವಂತೆ ವಿಜಯಪುರ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಮಂಗಳವಾರ ಸಂಜೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಿವಿಧ ತಾಲೂಕಾ ತಹಶೀಲ್ದಾರ, ತಾಲೂಕಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು, ಸಣ್ಣ ನೀರಾವರಿ ಇಲಾಖೆ, ಭೂಮಾಪನ ಇಲಾಖೆ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದದ ಮೂಲಕ ಕೆರೆಗಳ ಸಂರಕ್ಷಣೆ ಮತ್ತು ಅಭಿವೃದ್ದಿ ಕುರಿತು ಸಭೆ ನಡೆಸಿದರು.
ಆಯಾ ತಾಲೂಕಿನ ತಹಶೀಲ್ದಾರ, ಭೂಮಾಪನ ಇಲಾಖೆ ಅಧಿಕಾರಿಗಳು, ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಿ ಒತ್ತುವರಿಯಾಗಿರುವ ಕೆರೆಗಳನ್ನು ತೆರವುಗೊಳಿಸಬೇಕು. ಅವಶ್ಯವಿದ್ದಲ್ಲಿ ಪೋಲಿಸ್ ಇಲಾಖೆಯ ಸಹಾಯ ಪಡೆದು ತೆರವಿಗೆ ಕ್ರಮ ವಹಿಸಬೇಕು ಎಂದರು.
ಜಿಲ್ಲೆಯಲ್ಲಿರುವ ಕೆರೆಗಳಿಗೆ ಸಂಬಂಧಿಸಿದಂತೆ ಆರ್.ಟಿ.ಸಿ. ಇಂದೀಕರಣ ಮಾಡಿ, ಕಾಲಂ ನಂ.9 ರಲ್ಲಿ ಯಾವ ಇಲಾಖೆಗೆ ಸೇರಿದ ಕೆರೆ ಎಂಬುದು ಮಾಲೀಕತ್ವವನ್ನು ಸ್ಪಷ್ಟವಾಗಿ ನಮೂದಿಸಬೇಕು. ಒತ್ತುವರಿಯಾಗಿರುವ ಕೆರೆಗಳನ್ನು ತೆರವುಗೊಳಿಸಿ ಸಂರಕ್ಷಣೆಗೆ ಕ್ರಮ ವಹಿಸಬೇಕು.
ಮುದ್ದೇಬಿಹಾಳ ತಾಲೂಕಿನ 33 ಕೆರೆಗಳ ಪೈಕಿ 3 ಕೆರೆಗಳು ಲೋಕೋಪಯೋಗಿ ಇಲಾಖೆಯಿಂದ ಪಂಚಾಯತ್ ರಾಜ್ ಇಲಾಖೆಗೆ ವಿಭಜನೆಯಾಗಿದ್ದರೂ ಸಹ ಆರ್.ಟಿ.ಸಿ.ಯಲ್ಲಿ ಇನ್ನೂ ಹಳೆಯ ಮಾಲೀಕತ್ವ ನಮೂದಾಗಿದ್ದು, ಕೂಡಲೇ ಇಂದೀಕರಣ ಮಾಡಿ ಮಹಾನಗರ ಪಾಲಿಕೆ, ಗ್ರಾಮ ಪಂಚಾಯತ್, ತಾಲೂಕಾ ಪಂಚಾಯತ್ ಪಟ್ಟಣ ಪಂಚಾಯತ್ ಸೇರಿದಂತೆ ಯಾವ ಇಲಾಖೆ ಸೇರಿದೆ ಎಂಬುದನ್ನು ನಮೂದಿಸಬೇಕು.
ಕೆಲವೊಂದು ನಗರ ಸ್ಥಳೀಯ ಸಂಸ್ಥೆಗಳು ಗ್ರಾಮ ಪಂಚಾಯತಿಯಿಂದ ಪಟ್ಟಣ ಪಂಚಾಯತಿಗಳಾಗಿ ಮೇಲ್ದರ್ಜೆಗೇರಿದ್ದು, ಇಂತಹ ಬದಲಾವಣೆಯಾಗಿರುವ, ಆರ್.ಟಿ.ಸಿ.ಯಲ್ಲಿ ಬದಲಾವಣೆ ಮಾಡಿ ನಮೂದಿಸಲು ಕ್ರಮ ವಹಿಸುವಂತೆ ಅವರು ಸೂಚನೆ ನೀಡಿದರು.
ಜಿಲ್ಲೆಯ 266 ಕೆರೆಗಳ ಪೈಕಿ 4 ಕೆರೆಗಳ ಅಳತೆ ಕಾರ್ಯ ಬಾಕಿ ಉಳಿಸಿಕೊಂಡಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು, ಸಮಸ್ಯೆಗಳಿದ್ದಲ್ಲಿ ಪರಿಹರಿಸಿಕೊಂಡು ಭೂಮಾಪನ ಇಲಾಖೆಯಿಂದ ಅಳತೆ ಕಾರ್ಯ ಪೂರ್ಣಗೊಳಿಸಬೇಕು. ಯಾವುದೇ ಬಾಕಿ ಉಳಿಸಿಕೊಳ್ಳಬಾರದು ಎಂದಯ ಸೂಚನೆ ನೀಡಿದರು.
ಈಗಾಗಲೇ ಎಲ್ಲ ಜಿಲ್ಲೆಗಳು ಸಂಪೂರ್ಣ ಅಳತೆ ಕಾರ್ಯಪೂರ್ಣಗೊಳಿಸುವಂತೆ ಸೂಚಿಸಿದ ಅವರು, ಕೆರೆಗಳ ಸಂರಕ್ಷಣೆಗಾಗಿ ಆಯಾ ತಾಲೂಕಾವಾರು ಪ್ರತ್ಯೇಕ ಸಭೆಗಳನ್ನು ನಡೆಸಲಾಗುವುದು. ಈ ಸಭೆಗೆ ಸಂಬಂಧಿಸಿದ ಅಧಿಕಾರಿಗಳು ಎಲ್ಲ ಅಗತ್ಯ ಮಾಹಿತಿಯೊಂದಿಗೆ ಖುದ್ದಾಗಿ ಹಾಜರಿರುವಂತೆ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ, ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ವಿಜಯಕುಮಾರ ಆಜೂರ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಪ್ರಸನ್ನ