ಕುಷ್ಟಗಿ, 05 ಫೆಬ್ರವರಿ (ಹಿ.ಸ.) :
ಆ್ಯಂಕರ್ : `ನನ್ನಿಂದ ಮಗನನ್ನು ಸಾಕಲು ಆಗುವುದಿಲ್ಲ. ಯಾರಾದರೂ ಪುಣ್ಯಾತ್ಮರು ನನ್ನ ಮಗನನ್ನು ಸಾಕಿಕೊಳ್ಳಿ' ಎಂದು ಬರೆದಿದ್ದ ಚೀಟಿಯನ್ನು ಎಂಟು ದಿನಗಳ ಹಸಿಗೂಸಿನ ಕೈಯಲ್ಲಿಟ್ಟು ತಾಯಿಯೊಬ್ಬರು ಕೂಸನ್ನು ಬಿಟ್ಟು ಹೋಗಿರುವ ಘಟನೆ ಬುಧವಾರ ವರದಿಯಾಗಿದೆ.
ಕುಷ್ಟಗಿ-ಹೊಸಪೇಟೆ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕುರಬನಾಳ ಕ್ರಾಸ್ ತಾಯಮ್ಮನ ಗುಡಿ ಪಕ್ಕದ ಅಂಗಡಿ ಎದುರು ಶಿಶುವನ್ನು ತಾಯಿಯೇ ಬಿಟ್ಟು ಹೋಗಿದ್ದು, ದೇವಸ್ಥಾನಕ್ಕೆ ಬಂದಿದ್ದ ಭಕ್ತರು ನವಜಾತ ಶಿಶುವನ್ನು ನೋಡಿ ತಕ್ಷಣ ಹೆದ್ದಾರಿ ಗಸ್ತು ಪೊಲೀಸ್ ಸಿಬ್ಬಂದಿಗೆ ಕರೆ ಮಾಡಿ, ಮಾಹಿತಿ ತಿಳಿಸಿದ್ದಾರೆ.
ಎಎಸ್‍ಐ ಭರಮಪ್ಪ ವಾಲೀಕಾರ ಹಾಗೂ ಚಾಲಕ ಷರ್ಪುದ್ದೀನ್ ಅವರು, ಸ್ಥಳಕ್ಕೆ ಆಗಮಿಸಿ ಗಂಡು ಮಗುವನ್ನು ನೋಡಿ, ಆಸ್ಪತ್ರೆಗೆ ದಾಖಲಿಸಿ, ಆರೋಗ್ಯ ತಪಾಸಣೆ ಮಾಡಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಒಪ್ಪಿಸಿದ್ದಾರೆ.
ಸಿಡಿಪಿಒ ಯಲ್ಲಮ್ಮ ಹಂಡಿ ಮಾತನಾಡಿ, ಕುರುಬನಾಳ ದೇವಸ್ಥಾನದ ಹತ್ತಿರ ಸಿಕ್ಕ ಎಂಟು ದಿನದ ಶಿಶುವನ್ನು ರಕ್ಷಣೆ ಮಾಡಿ ಕೊಪ್ಪಳ ಜಿಲ್ಲಾ ಕೇಂದ್ರದಲ್ಲಿರುವ ದತ್ತು ಸ್ವೀಕಾರ ಕೇಂದ್ರಕ್ಕೆ ಹಸ್ತಾಂತರಿಸಲಾಗುತ್ತದೆ ಎಂದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್