ದಿ ಅನ್ ಟೋಲ್ಡ್ ಸ್ಟೋರಿ ಚಲನಚಿತ್ರ ಬಿಡುಗಡೆಗೆ ಸಿದ್ದ
ದಿ ಅನ್ ಟೋಲ್ಡ್ ಸ್ಟೋರಿ ಚಲನಚಿತ್ರ ಬಿಡುಗಡೆಗೆ ಸಿದ್ದ
ಕೋಲಾರ ಕಲಾವಿದರು ನಟಿಸಿರುವ ದಿ ಅನ್ ಟೋಲ್ಡ್ ಸ್ಟೋರಿ ಸಿನಿಮಾದ ಪೋಸ್ಟರ್


ಕೋಲಾರ ೦೬ ಡಿಸೆಂಬರ್ (ಹಿ.ಸ) :

ಆ್ಯಂಕರ್ : ಸ್ಥಳೀಯ ಕಲಾವಿದರಿಂದಲೇ ತಯಾರಿಸಲ್ಪಟ್ಟ ಪಶ್ಚಿಮ ಬಂಗಾಳಿ ಮೂಲದ ನಿರಾಶ್ರಿತರ ನೈಜ ಜೀವನ ಘಟನೆಗಳನ್ನು ಆಧರಿಸಿದ ಕನ್ನಡ ಚಲನಚಿತ್ರ ೧೯೭೯ ದಿ ಅನ್ ಟೋಲ್ಡ್ ಸ್ಟೋರಿ ಬಿಡುಗಡೆಗೆ ಸಿದ್ಧವಾಗಿದೆ ಎಂದು ಚಿತ್ರ ನಿರ್ಮಾಪಕ ಬಿ.ಎಂ.ಶ್ರೀನಿವಾಸ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಕೋಲಾರ ತಾಲ್ಲೂಕಿನ ಬೀರಮಾನಹಳ್ಳಿ ಶ್ರೀನಿವಾಸ್ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಅಥ್ಲೆಟಿಕ್ ಪಟು, ಸದಾ ದೇಹ ದಂಡಿಸುವುದನ್ನೇ ಕಾಯಕವಾಗಿಸಿಕೊಂಡು ಹಲವು ದಾಖಲೆಗಳನ್ನು ಬರೆದ ಇವರು ತಮ್ಮ ತಂದೆ ಮುನಿಯಪ್ಪನವರ ಕನಸಿನಂತೆ ಪ್ರತಿಯೊಬ್ಬ ವ್ಯಕ್ತಿಯೂ ಬುದ್ಧನ ಶಾಂತಿ ಸಂದೇಶವನ್ನು ಮೈಗೂಡಿಸಿಕೊಂಡರೆ ಎಷ್ಟು ದೊಡ್ಡ ವೈರಿಯನ್ನಾದರೂ ಗೆಲ್ಲಬಹುದು ಎಂಬ ಸಂದೇಶ ಸಾರುವ ಕಥೆಯನ್ನೇ ಸಿನಿಮಾಗೆ ಆಯ್ಕೆ ಮಾಡಲಾಗಿದೆ ಎಂದರು.

೧೯೦೪ ರಿಂದ ೧೯೭೯ರ ನಡುವೆ ಪಶ್ಚಿಮ ಬಂಗಾಳದಲ್ಲಿ ನಡೆದ ನಿರಾಶ್ರಿತರ ಜೀವನ ಹೋರಾಟದ ನೈಜ ಘಟನೆಗಳನ್ನು ಆಧರಿಸಿದ ಕಾಲ್ಪನಿಕ ಕಥೆಯನ್ನು ನಿರ್ದೇಶಕ ಪುಷ್ಪರಾಜ್ ರಚಿಸಿ ಸಂಭಾಷಣೆ ಬರೆದಿದ್ದಾರೆ.

ರಾಜ್ಯದ ಬಹುತೇಕ ಜಿಲ್ಲೆಗಳು ತಮ್ಮದೇ ಶೈಲಿಯಲ್ಲಿ ಚಲನಚಿತ್ರಗಳನ್ನು ನೀಡಿವೆ, ಆದರೆ, ಕೋಲಾರ ಜಿಲ್ಲೆಯವರೇ ಇಡೀ ಚಿತ್ರದ ನಿರ್ಮಾಣ ತಂಡದ ಸದಸ್ಯರಾಗಿ ಕೆಲಸ ಮಾಡಿದ್ದಾರೆ. ಇಡೀ ಚಿತ್ರ ಕೋಲಾರ ಜಿಲ್ಲೆಯ ಬೀರಮಾನಹಳ್ಳಿ, ಯರಗೋಳ್, ಕೋಟಿಗಾನಹಳ್ಳಿ, ದೇವರಾಯ ಸಮುದ್ರ, ಶತಶೃಂಗ ಶ್ರೇಣಿಯ ತೇರಹಳ್ಳಿ ಬೆಟ್ಟ, ನಚಿಕೇತ ನಿಲಯದಲ್ಲಿ ಚಿತ್ರೀಕರಣಗೊಂಡಿದೆ.

ನಿರ್ದೇಶಕ ಪುಷ್ಪರಾಜ್ ಮಾತನಾಡಿ, ಚಿತ್ರ ನೈಜ ಘಟನೆಗಳನ್ನು ಆಧರಿಸಿದ ಕಾಲ್ಪನಿಕ ಕಥೆ ಆಗಿದ್ದು, ೧೯೦೪-೧೯೭೯ರ ನಗುವಿನ ಕಾಲಮಾನದಲ್ಲಿ ನಡೆದ ಸತ್ಯ ಘಟನೆಗಳ ಪಿರಿಯಾಡಿಕ್ ಡ್ರಾಮಾ ಇದಾಗಿದೆ. ಆಗಿನ ಕಾಲದಲ್ಲಿ ಪಶ್ಚಿಮ ಬಂಗಾಳದ ವಲಸೆಗಾರ ಜನರ ಬದುಕನ್ನು ಪ್ರತಿಬಿಂಬಿಸುವ ಕಥಾವಸ್ತು ನವ ಸಮಾಜಕ್ಕೆ ಹೊಸ ತಲೆಮಾರಿನ ಯುವಜನರಿಗೆ ಆದರ್ಶಪ್ರಾಯವಾದ ಕಲ್ಪನೆಯನ್ನು ಕಟ್ಟಿಕೊಡುತ್ತದೆ.

ಚಿತ್ರದ ತಾರಾಗಣದಲ್ಲಿ ನಾಯಕ ನಟನಾಗಿ ಹೊಸ ಪರಿಚಯವಾಗಿ ಅರ್ಜು ನಟಿಸಿದ್ದಾರೆ. ಕಥಾನಾಯಕನಾಗಿ ಎಂಥದ್ದೇ ಕಷ್ಟದಲ್ಲೂ ತಾಳ್ಮೆ ಕಳೆದುಕೊಳ್ಳದೆ ಬದುಕುವ ಪಾತ್ರವನ್ನು ಬಹಳ ಚೆನ್ನಾಗಿ ನಿರ್ವಹಿಸಿದ್ದಾರೆ. ಮತ್ತೊಂದು ಮುಖ್ಯಪಾತ್ರದಲ್ಲಿ ಸುಜೀತ್ ನಟಿಸಿದ್ದಾರೆ. ಕಥಾ ನಾಯಕಿಯಾಗಿ ಅಮೃತಗೌಡ ಒಬ್ಬ ಗೃಹಿಣಿ ಪಾತ್ರವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಪೋಷಕ ನಟಿಯಾಗಿ ದುರ್ಗಾ ಬುಡ್ಡಿದೀಪ ಒಬ್ಬ ತರಲೆ ತಮ್ಮನ ಅಕ್ಕನಾಗಿ ಪಾರ್ವತಿ ಎಂಬ ಪಾತ್ರವನ್ನು ಕಣ್ಣು ಕಟ್ಟುವಂತೆ ನೆರವೇರಿಸಿದ್ದಾರೆ. ಇತರೆ ಪ್ರಮುಖ ಪಾತ್ರಗಳಲ್ಲಿ ಪ್ರಶಾವೀಗೌಡ, ಪ್ರೀತಿ, ತಕ್ಷಾರಾಂ, ಮೂಗನ ಪಾತ್ರದಲ್ಲಿ ನಿರಂಜನ್, ಧನುಷ್, ಇದ್ದಾರೆ.

ಚಿತ್ರದ ಛಾಯಾಗ್ರಹಣವನ್ನು ಚಾಲಾಕಿ ಚರಣ್ ಅದ್ಬುತವಾಗಿ ಸಂಗ್ರಹ ಮಾಡಿದ್ದು, ವಸಂತ ಕುಮಾರ್ ಸಂಕಲನ ಮಾಡಿದ್ದಾರೆ. ದೀಪಕ್ ಕೊಂಡೂರ್ ಬಣ್ಣ, ಜಸ್ವಂತ್ ಪಸುಪುಲೇಟಿ, ಮದುಚಿತ್ರ, ಸಂಗೀತ ನಿರ್ದೇಶನದಲ್ಲಿ ಖ್ಯಾತ ಹಿನ್ನೆಲೆ ಗಾಯಕರಾದ ವಿಜಯ ಪ್ರಕಾಶ್, ಚಿತ್ರ, ಖರೀಮುಲ್ಲಾ, ಸರಸ್ವತಿ ಪ್ರಸಾದ್ ನಾಲ್ಕು ಮಧುರವಾದ ಗೀತೆಗಳನ್ನು ಹಾಡಿದ್ದಾರೆ.

ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಮಿಕ್ಸಿಂಗ್ ನಡೆಯುತ್ತಿದ್ದು ಇದೇ ತಿಂಗಳ ಕೊನೆಯಲ್ಲಿ ಸಿನಿಮಾದ ಹಾಡುಗಳು, ಟೀಸರ್, ಟ್ರೈಲರ್ ಬಿಡುಗಡೆ ಆಗಲಿದೆ. ಇಡೀ ಕುಟುಂಬವೇ ಕುಳಿತು ನೋಡಬಹುದಾದ ಅದ್ಬುತ ಕಥೆಯ ಈ ಸಿನಿಮಾ ಮುಂದಿನ ೨೦೨೬ರ ಜನವರಿ ೩೦ಕ್ಕೆ ಬಿಡುಗಡೆ ಮಾಡುವ ನಿರೀಕ್ಷೆಯಿದೆ.

ಚಿತ್ರ : ಕೋಲಾರ ಕಲಾವಿದರು ನಟಿಸಿರುವ ದಿ ಅನ್ ಟೋಲ್ಡ್ ಸ್ಟೋರಿ ಸಿನಿಮಾದ ಪೋಸ್ಟರ್

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande