
ಉದಯಪುರ, 26 ಫೆಬ್ರವರಿ (ಹಿ.ಸ.) :
ಆ್ಯಂಕರ್ : ತೆಲುಗು ಮತ್ತು ಕನ್ನಡ ಚಿತ್ರರಂಗದ ಜನಪ್ರಿಯ ಜೋಡಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ರಾಜಸ್ಥಾನದ ಉದಯಪುರದಲ್ಲಿ ಅದ್ಧೂರಿಯಾಗಿ ವಿವಾಹವಾಗಿದ್ದಾರೆ.
ಬೆಳಗ್ಗೆ 8 ಗಂಟೆಗೆ ನಡೆದ ಶುಭ ಮುಹೂರ್ತದಲ್ಲಿ ‘ವಿರೋಶ್’ ಜೋಡಿ ಸಪ್ತಪದಿ ತುಳಿದು ಹೊಸ ಜೀವನಕ್ಕೆ ಕಾಲಿಟ್ಟಿದೆ. ಮದುವೆಗೆ ಕುಟುಂಬಸ್ಥರು ಹಾಗೂ ಆಪ್ತರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು.
ಹಲವಾರು ವರ್ಷಗಳಿಂದ ಪ್ರೀತಿಯಲ್ಲಿ ಇದ್ದ ಈ ಜೋಡಿ ಇತ್ತೀಚೆಗಷ್ಟೇ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಇದೀಗ ಅದ್ಧೂರಿ ಮದುವೆ ಮೂಲಕ ವಿವಾಹ ಜೀವನಕ್ಕೆ ಪ್ರವೇಶಿಸಿದೆ. ಮೂರು ದಿನಗಳ ಕಾಲ ಹಳದಿ, ಮೆಹಂದಿ, ಸಂಗೀತ ಸೇರಿದಂತೆ ವಿವಿಧ ಶಾಸ್ತ್ರಗಳು ನೆರವೇರಿದ್ದು, ಸಂಪ್ರದಾಯಬದ್ಧವಾಗಿ ಮದುವೆ ನಡೆದಿದೆ.
ಆಂಧ್ರದ ದೇವರಕೊಂಡ ಸಮುದಾಯದ ಸಂಪ್ರದಾಯದಂತೆ ಮುಂಜಾನೆ ಮದುವೆ ನಡೆದಿದ್ದು, ಸಂಜೆ ಕೊಡವ ಸಂಪ್ರದಾಯದಂತೆ ಮತ್ತೊಂದು ಶಾಸ್ತ್ರ ನೆರವೇರಲಿದೆ ಎಂದು ತಿಳಿದುಬಂದಿದೆ. ಮದುವೆ ಸಮಾರಂಭಕ್ಕೆ ತೆಲಗು ನಟ ರವಿತೇಜ, ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ, ನಟಿ ಆಶಿಕಾ ರಂಗನಾಥ್ ಸೇರಿದಂತೆ ಆಪ್ತರು ಭಾಗಿಯಾಗಿದ್ದಾರೆ.
ಮಾರ್ಚ್ 4ರಂದು ಆರತಕ್ಷತೆ ನಡೆಯಲಿದ್ದು, ಸ್ಯಾಂಡಲ್ವುಡ್ನ ಶಿವರಾಜ್ ಕುಮಾರ್, ಯಶ್, ಕಿಚ್ಚ ಸುದೀಪ್ ಸೇರಿದಂತೆ ಹಲವರು ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಮಿತ ಅತಿಥಿಗಳು, ಆಯ್ದ ಆಹಾರ ವ್ಯವಸ್ಥೆ ಹಾಗೂ ಕಟ್ಟುನಿಟ್ಟಿನ ಯೋಜನೆಯೊಂದಿಗೆ ನಡೆದ ಈ ಮದುವೆ ಈ ವರ್ಷದ ಅತ್ಯಂತ ಚರ್ಚಿತ ಹಾಗೂ ಅದ್ಧೂರಿ ತಾರಾ ಮದುವೆಯಾಗಿ ಹೊರಹೊಮ್ಮಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa