
ಚಿತ್ರದುರ್ಗ, 04 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟ್ರಾಯ್) ವತಿಯಿಂದ ಇದೇ ಡಿ.05ರಂದು ಬೆಳಿಗ್ಗೆ 11ಕ್ಕೆ ಚಿತ್ರದುರ್ಗ ನಗರದ ರಾಷ್ಟ್ರೀಯ ಹೆದ್ದಾರಿ-4ರ ಎಸ್‍ಜೆಎಂ ತಂತ್ರಜ್ಞಾನ ಸಂಸ್ಥೆಯ ಎಸ್‍ಟಿಇಪಿ ಸಭಾಂಗಣದಲ್ಲಿ “ಟೆಲಿಕಾಂ ಗ್ರಾಹಕರ ಸಂಪರ್ಕ” ಕಾರ್ಯಕ್ರಮ ಆಯೋಜಿಸಲಾಗಿದೆ.
ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ ಪ್ರಾದೇಶಿಕ ಕಚೇರಿಯ ಅಧಿಕಾರಿಗಳು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಲಿದ್ದಾರೆ. ಟೆಲಿಕಾಂ ಚಂದಾದಾರರಾಗಿ ತಮ್ಮ ಹಕ್ಕುಗಳು ಮತ್ತು ಕರ್ತವ್ಯಗಳ ಬಗ್ಗೆ ತಿಳಿದುಕೊಳ್ಳಲು ಗ್ರಾಹಕ ಔಟ್ರೀಚ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾರ್ವಜನಿಕರನ್ನು ಆಹ್ವಾನಿಸಲಾಗಿದೆ.
ಕರ್ನಾಟಕವು 70.32 ಮಿಲಿಯನ್ ಮೊಬೈಲ್ ಚಂದಾದಾರರನ್ನು ಹೊಂದಿದೆ ಮತ್ತು 5.88 ಮಿಲಿಯನ್ ಲ್ಯಾಂಡ್‍ಲೈನ್ ಚಂದಾದಾರರನ್ನು ಹೊಂದಿದೆ. ಕರ್ನಾಟಕ ಸೇವಾ ಪ್ರದೇಶದಲ್ಲಿ 4 ಟೆಲಿಕಾಂ ಸೇವಾ ಪೂರೈಕೆದಾರರು ಇದ್ದಾರೆ. ಗ್ರಾಹಕರ ಹಿತಾಸಕ್ತಿ ಕಾಪಾಡಲು ಟ್ರಾಯ್ ಹೊರಡಿಸಿದ ನಿಯಮಗಳ ಬಗ್ಗೆ ಅನೇಕ ಗ್ರಾಹಕರಿಗೆ ತಿಳಿದಿಲ್ಲ. ಗ್ರಾಹಕರ ಕುಂದುಕೊರತೆ ಕಾರ್ಯವಿಧಾನ, ಮೇಲ್ಮನವಿ ಸಲ್ಲಿಸುವ ವಿಧಾನ, ಅದೇ ಸಂಖ್ಯೆಯನ್ನು ಉಳಿಸಿಕೊಳ್ಳುವ ಮೂಲಕ ಮತ್ತೊಂದು ಸೇವಾ ಪೂರೈಕೆದಾರರಿಗೆ ಚಂದಾದಾರಿಕೆಯನ್ನು ಪೋರ್ಟ ಮಾಡುವ ವಿಧಾನ, ಅಪೇಕ್ಷಿಸದ ವಾಣಿಜ್ಯ ಸಂವಹನ ಮತ್ತು ಅನಗತ್ಯ ಕರೆಗಳನ್ನು ನಿಲ್ಲಿಸುವ ವಿಧಾನ ಮತ್ತು ಮೌಲ್ಯವರ್ಧಿತ ಸೇವೆಗಳಿಗೆ ಸಂಬಂಧಿಸಿದ ನಿಯಮಗಳ ಬಗ್ಗೆ ತಿಳಿದಿರಬೇಕು.
ಹೆಚ್ಚುವರಿಯಾಗಿ, ಸೈಬರ್ ಕ್ರೈಮ್, ಸೈಬರ್ ವಂಚನೆಯ ಅಧಿವೇಶನವನ್ನು ಸಹ ಆಯೋಜಿಸಲಾಗಿದೆ. ಕರ್ನಾಟಕ ಪೋಲಿಸ ಇಲಾಖೆಯ ಸೈಬರ್ ಕ್ರೈಮ್ ವಿಭಾಗದ ತಜ್ಞರು ಪ್ರಸ್ತುತ ಪರಿಸ್ಥಿತಿಯಲ್ಲಿ ನಡೆಯುತ್ತಿರುವ ಸೈಬರ್ ವಂಚನೆಗಳ ಬಗ್ಗೆ ಹೆಚ್ಚಿನ ವಿವರಗಳನ್ನು ಹಂಚಿಕೊಳ್ಳಲಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಕೆ.ಮುರಳೀಧರ 09449005588 ಅವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa