

ಗದಗ, 04 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಚಿನ್ನ ಬೆಳ್ಳಿ ದರ ಗಗನಕ್ಕೇರುತ್ತಿರುವ ಸಂದರ್ಭದಲ್ಲಿ, “ಒಂದೇ ಸಲ ಕನ್ನ ಹಾಕಿದ್ರೆ ಲಕ್ಷಾಂತರ ರೂಪಾಯಿ ಕಮಾಯಿ ಸಿಗುತ್ತದೆ ಎಂದು ದೂರದ ಗುಜರಾತ್‌ನಿಂದ ಗದಗಕ್ಕೆ ಬಂದಿದ್ದ ಕಿಲಾಡಿ ಕಳ್ಳನ ಕೃತ್ಯಕ್ಕೆ ಕೊನೆಗೂ ಪೊಲೀಸರು ತೆರೆ ಎಳೆದಿದ್ದಾರೆ. ಬಂಗಾರದ ಅಂಗಡಿ ಕಳ್ಳತನ ನಡೆದ ಕೇವಲ ಆರು ಗಂಟೆಯಲ್ಲೇ, ಸುಮಾರು 80 ಲಕ್ಷ 45 ಸಾವಿರ ರೂಪಾಯಿ ಮೌಲ್ಯದ ಆಭರಣಗಳನ್ನು ವಶಕ್ಕೆ ಪಡೆಯಲಾಗಿದೆ.
ಗದಗ ನಗರದ ತೋಂಟದಾರ್ಯ ಮಠದ ಬಳಿಯಿರುವ ಶಾಂತದುರ್ಗಾ ಜ್ಯುವೆಲರ್ಸ್ ಅಂಗಡಿಯಲ್ಲಿ ಡಿಸೆಂಬರ್ 03ರ ರಾತ್ರಿ ಕಳ್ಳತನ ನಡೆದಿತ್ತು. ಬೆಳಿಗ್ಗೆ ಅಂಗಡಿ ತೆರೆದ ಮಾಲೀಕರಿಗೆ ದೃಶ್ಯ ಕಂಡದ್ದೇ ಶಾಕ್ ಲಾಕರ್ ಸಮೇತ ಎಲ್ಲಾ ವಿನ್ಯಾಸಿತ ಆಭರಣಗಳು ಕಳ್ಳನ ಪಾಲಾಗಿದ್ದವು.
ಅಂಗಡಿ ಮಾಲೀಕರು ತಕ್ಷಣವೇ ಗದಗ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ರು. ಪ್ರಕರಣದ ಗಂಭೀರತೆ ಅರಿತ ಎಸ್ಪಿ ರೋಹನ್ ಜಗದೀಶ್, ಮಾರ್ಗದರ್ಶನದಲ್ಲಿ ನಾಲ್ಕೈದು ವಿಶೇಷ ತಂಡಗಳನ್ನು ರಚಿಸಿ ತನಿಖೆ ಆರಂಭಿಸಲಾಯಿತು.
ಸಿಸಿಟಿವಿ ಕಣ್ಗಾವಲು – ಕಳ್ಳನ ಚಲನೆಯನ್ನು ಟ್ರ್ಯಾಕ್ ಮಾಡಿದ ಪೊಲೀಸರು
ಪೊಲೀಸರು ಅಂಗಡಿ ಸುತ್ತಮುತ್ತ ಹಾಗೂ ಬಸ್ ನಿಲ್ದಾಣ ಪ್ರದೇಶದ ಸಿಸಿಟಿವಿ ದೃಶ್ಯಗಳನ್ನು ಜಾಗ್ರತೆಯಿಂದ ವಿಶ್ಲೇಷಿಸಿದರು. ಆರೋಪಿಯು ಬಸ್ ನಿಲ್ದಾಣದ ಬಳಿ ಇರುವ ನಂದಿನಿ ಅಂಗಡಿಯಲ್ಲಿ ನೀರು ಖರೀದಿಸಿದ್ದ ದೃಶ್ಯ, ಹಾಗೂ ಗದಗ ಹೊಸ ಬಸ್ ನಿಲ್ದಾಣದಿಂದ ಹೊರಟಿದ್ದ ಮಾಹಿತಿಯನ್ನು ಆಧರಿಸಿ ಪೊಲೀಸರು ತಕ್ಷಣವೇ ಮಹಾರಾಷ್ಟ್ರ ಪೊಲೀಸರಿಗೆ ಸಂಪರ್ಕಿಸಿದರು. ಮಹಾರಾಷ್ಟ್ರ ಪೊಲೀಸರ ಸಹಕಾರದೊಂದಿಗೆ ಸುಮಾರು 600 ಕಿಲೋಮೀಟರ್ ದೂರ ಹೋಗಿ ಆರೋಪಿಯನ್ನು ಕೇವಲ ಆರು ಗಂಟೆಗಳಲ್ಲೇ ವಶಕ್ಕೆ ಪಡೆಯುವಲ್ಲಿ ತಂಡ ಯಶಸ್ವಿಯಾಯಿತು.
ಗುಜರಾತ್ ಮೂಲದ ಕಿಲಾಡಿ – ಐದು ದಿನ ‘ಸ್ಕೆಜ್’ ಹಾಕಿದ ಆರೋಪಿಯ ಪ್ಲಾನ್
ವಶಕ್ಕೆ ಸಿಕ್ಕ ಆರೋಪಿ ಮಹಮ್ಮದ್ ಹುಸೇನ್ ಸಿದ್ಧಿಕಿ, ಗುಜರಾತ್‌ನ ಅಹಮದಾಬಾದ್ ಮೂಲದವನು. ಟೀ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದ ಇವನು, ಜೂಜಾಟ ಮತ್ತು ಕುಟುಂಬ ಜವಾಬ್ದಾರಿಯಿಂದಾಗಿ ದೊಡ್ಡ ಪ್ರಮಾಣದಲ್ಲಿ ಸಾಲ ಮಾಡಿಕೊಂಡಿದ್ದ. ತೊಂದರೆಗಳಿಂದ ಹೊರಬರಲು ದೊಡ್ಡ ಕಳ್ಳತನ ಮಾಡುವ ಯೋಜನೆಯೊಂದಿಗೆ ಗದಗಕ್ಕೆ ಆಗಮಿಸಿದ್ದಾನೆ.
ಆಧಾರ ಕಾರ್ಡ್ ಹಾಗೂ ಇತರ ದಾಖಲೆಗಳನ್ನು ಕೂಡ ಚೂರು ಮಾಡಿ ಎಲ್ಲೆಂದರಲ್ಲಿ ಎಸೆದು ಹೋಗಿದ್ದ. ಯಾವುದೇ ಸುಳಿವು ಸಿಗಬಾರದು ಎಂಬ ನಿಟ್ಟಿನಲ್ಲಿ ಬಟ್ಟೆಗಳು ಸೇರಿದಂತೆ ಉಪಯೋಗಿಸಿದ ಸಾಮಗ್ರಿಗಳೆಲ್ಲಾ ಬೇರೆ ಬೇರೆ ಕಡೆಗಳಲ್ಲಿ ಬಿಸಾಕಿದ್ದ.
ಪೊಲೀಸರ ಸಿನೆಮೀಯ ರೀತಿಯ ಕಾರ್ಯಾಚರಣೆಯಿಂದ ಒಂದೂ ಗ್ರಾಂ ಆಭರಣವೂ ಕಳೆದು ಹೋದಿಲ್ಲವೆಂಬುದು ಗಮನಾರ್ಹವಾಗಿದ್ದು, ಎಸ್ಪಿ ರೋಹನ್ ಜಗದೀಶ್ ಅವರು ಸಿಬ್ಬಂದಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕಳ್ಳತನದಿಂದ ನಡುಗಿದ್ದ ಶಾಂತದುರ್ಗಾ ಜ್ಯುವೆಲರ್ಸ್ ಮಾಲೀಕರು ತಮ್ಮ ಲಕ್ಷಾಂತರ ಮೌಲ್ಯದ ಆಭರಣಗಳು ಒಂದೂ ಕಡಿಮೆಯಾಗದೆ ಬಂದು ಸೇರಿದ್ದಕ್ಕೆ ಪೊಲೀಸರ ಕಾರ್ಯಕ್ಕೆ ಕೃತಜ್ಞತೆ ಸಲ್ಲಿಸಿದರು.
ಚಿನ್ನ–ಬೆಳ್ಳಿ ದರ ಏರಿಕೆಯಿಂದ ಕಳ್ಳತನದ ಘಟನೆಗಳು ಹೆಚ್ಚುತ್ತಿವೆ. ಆದರೆ ಗದಗ ಪೊಲೀಸರು ಈ ಪ್ರಕರಣದಲ್ಲಿ ತೋರಿಸಿದ ಚಾಕಚ್ಚಲತೆ, ತ್ವರಿತ ನಿರ್ಧಾರ ಮತ್ತು ನಿಖರ ಕಾರ್ಯಾಚರಣೆ ಖಾಕಿಯ ಗೌರವ ಮತ್ತು ಭರವಸೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಈ ಪ್ರಕರಣ ಗದಗ ಪೊಲೀಸರ ವೃತ್ತಿಪರತೆ, ಬುದ್ಧಿವಂತಿಕೆ ಮತ್ತು ವೇಗದ ಕೆಲಸಕ್ಕೆ ಮತ್ತೊಬ್ಬ ನಿದರ್ಶನವಾಗಿದ್ದು, ಮೆಚ್ಚುಗೆಗೆ ಪಾತ್ರವಾಗಿದೆ.
ಹಿಂದೂಸ್ತಾನ್ ಸಮಾಚಾರ್ / lalita MP