ಹೆಂಡತಿ ಮತ್ತು ಮಗಳನ್ನು ಕೊಲೆಗೈದ ಅಪರಾಧಿಗೆ ಜೀವಾವಧಿ ಶಿಕ್ಷೆ
ಕೊಪ್ಪಳ, 19 ಫೆಬ್ರವರಿ (ಹಿ.ಸ.) : ಆ್ಯಂಕರ್ : ಕೊಪ್ಪಳ ನಗರ ಪೋಲಿಸ್ ಠಾಣೆ ವ್ಯಾಪ್ತಿಯ ಕೊಪ್ಪಳದ ಹಮಾಲರ ಕಾಲೋನಿಯಲ್ಲಿರುವ ಅಪರಾಧಿ ಸುಲೇಮಾನ ಅನ್ಸಾರಿ ತಂದೆ ಅಹ್ಮದಹುಸೇನ ಅನ್ಸಾರಿ ಈತನು ತನ್ನ ಹೆಂಡತಿಯಾದ ಮುನ್ನಿಬೇಗಂ ಈಕೆಯ ಶೀಲದ ಮೇಲೆ ಸಂಶಯಪಟ್ಟು ಮತ್ತು ವರದಕ್ಷಿಣೆ ಕಿರುಕುಳ ನೀಡಿ ಮನೆಯ ಮೇಲ್ಗಡ
ಹೆಂಡತಿ ಮತ್ತು ಮಗಳನ್ನು ಕೊಲೆಗೈದ ಅಪರಾಧಿಗೆ ಜೀವಾವಧಿ ಶಿಕ್ಷೆ


ಕೊಪ್ಪಳ, 19 ಫೆಬ್ರವರಿ (ಹಿ.ಸ.) :

ಆ್ಯಂಕರ್ : ಕೊಪ್ಪಳ ನಗರ ಪೋಲಿಸ್ ಠಾಣೆ ವ್ಯಾಪ್ತಿಯ ಕೊಪ್ಪಳದ ಹಮಾಲರ ಕಾಲೋನಿಯಲ್ಲಿರುವ ಅಪರಾಧಿ ಸುಲೇಮಾನ ಅನ್ಸಾರಿ ತಂದೆ ಅಹ್ಮದಹುಸೇನ ಅನ್ಸಾರಿ ಈತನು ತನ್ನ ಹೆಂಡತಿಯಾದ ಮುನ್ನಿಬೇಗಂ ಈಕೆಯ ಶೀಲದ ಮೇಲೆ ಸಂಶಯಪಟ್ಟು ಮತ್ತು ವರದಕ್ಷಿಣೆ ಕಿರುಕುಳ ನೀಡಿ ಮನೆಯ ಮೇಲ್ಗಡೆ ಇರುವ ರೂಮಿನಲ್ಲಿ ತಲೆ ದಿಂಬಿನಿಂದ ಮುನ್ನಿಬೆಗಂ ಹಾಗೂ ತನ್ನ ಎರಡು ತಿಂಗಳ ಹೆಣ್ಣು ಮಗು ರಾಹಿನ್ ಪರ್ವಿನ್ ಇವರನ್ನು ಆಪಾಧಿತನು ಉಸಿರುಗಟ್ಟಿಸಿ (ಇಬ್ಬರನ್ನು) ಕೊಲೆ ಮಾಡಿದ ಅಪರಾಧ ಸಾಭಿತಾಗಿದೆ ಎಂದು ಕೊಪ್ಪಳದ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು, ಈ ಅಪರಾಧಿಗೆ ಜೀವಾವಧಿ ಶಿಕ್ಷೆ ಹಾಗೂ 1,05,000 ದಂಡ ವಿಧಿಸಿರುತ್ತಾರೆ.

ಕೊಪ್ಪಳ ನಗರ ಪೋಲಿಸ್ ಠಾಣೆ ವ್ಯಾಪ್ತಿಯ ಕೊಪ್ಪಳ ಹಮಾಲರ ಕಾಲೋನಿಯಲ್ಲಿ ಅಪರಾಧಿ ಸುಲೇಮಾನ ಅನ್ಸಾರಿ ಈತನು ತನ್ನ ಹೆಂಡತಿಯಾದ ಮೃತ ಮುನ್ನಿಬೇಗಂ ಇವಳ ಶೀಲದ ಮೇಲೆ ಸಂಶಯಪಡುತ್ತಾ, ತನ್ನ ಹೆಂಡತಿಗೆ ತವರು ಮನೆಯಿಂದ ಆಟೋ ಖರೀದಿಸಲು ಒಂದು ಲಕ್ಷ ರೂಪಾಯಿ ವರದಕ್ಷಿಣೆ ಹಣ ತರುವಂತೆ ಕಿರುಕುಳ ನೀಡಿ, ಅವಾಚ್ಯ ಶಬ್ದಗಳಿಂದ ಬೈದು ಹೊಡಿ ಬಡಿ ಮಾಡಿ ಮಾನಸಿಕ ಮತ್ತು ದೈಹಿಕವಾಗಿ ಹಿಂಸೆ ಮಾಡುತ್ತಾ ಬಂದಿರುತ್ತಾನೆ.

ಆದರೂ ಕೂಡ ಅಪರಾಧಿಯು ತನಗೆ ರೂ. 50,000 ಹಣ, ಎರಡು ತೊಲೆ ಬಂಗಾರ ಹಾಗೂ ಒಂದು ಟಾಟಾ ಎ.ಸಿ ವಾಹನ ಕೊಡಿಸಿರುವುದಿಲ್ಲ ಹಾಗೂ ನೀನು ಮನೆ ಕೆಲಸ ಸರಿಯಾಗಿ ಮಾಡುತ್ತಿಲ್ಲ ಅಂತಾ ತನ್ನ ಹೆಂಡತಿಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ನೀಡಿ, ತನ್ನ ಹೆಂಡತಿಯ ಶೀಲದ ಮೇಲೆ ವಿನಾ ಕಾರಣ ಸಂಶಯ ವ್ಯಕ್ತಪಡಿಸಿ ದಿ: 02-08-2016 ರಂದು ಮೃತ ಮುನ್ನಿಬೇಗಂ ಇವರ ಅಣ್ಣನ ಮನೆಯ ಮೇಲ್ಗಡೆ ಇರುವ ರೂಮಿನಲ್ಲಿ ತಲೆ ದಿಂಬಿನಿಂದ ಮುನ್ನಿಬೇಗಂ ಹಾಗೂ ಆಕೆಯ ಎರಡು ತಿಂಗಳ ಹೆಣ್ಣು ಮಗು ರಾಹಿನ್ ಪರ್ವಿನ್ ಇವರನ್ನು ಅಪರಾಧಿಯು ಉಸಿರುಗಟ್ಟಿಸಿ ಕೊಲೆ ಮಾಡಿದ್ದು, ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 126/2016, ಕಲಂ: 498[ಎ], 304[ಬಿ], 302 ಐಪಿಸಿ & ಕಲಂ: 3, 4 ಡಿ.ಪಿ ಕಾಯ್ದೆ ಅಡಿಯಲ್ಲಿ ತನಿಖಾಧಿಕಾರಿಗಳಾದ ಕಟ್ಟಮನಿ ಎಸ್.ಬಿ., ಡಿವೈ.ಎಸ್.ಪಿ ಉಪ-ಅಧೀಕ್ಷಕರು ಕೊಪ್ಪಳ ಇವರು ತನಿಖೆಯಲ್ಲಿ ಆರೋಪಗಳು ಸಾಭಿತಾಗಿದ್ದರಿಂದ ಆರೋಪಿತರ ವಿರುದ್ದ ದೋಷಾರೋಪಣೆ ಪಟ್ಟಿಯನ್ನು ಮಾನ್ಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಸಲ್ಲಿಸಿರುತ್ತಾರೆ.

ಈ ಪ್ರಕರಣದಲ್ಲಿ ಕೊಪ್ಪಳ ಹಮಾಲರ ಕಾಲೋನಿಯಲ್ಲಿರುವ ಅಪರಾಧಿ ಸುಲೇಮಾನ ಅನ್ಸಾರಿ ತಂದೆ ಅಹ್ಮದಹುಸೇನ ಅನ್ಸಾರಿ ಇತನ ಮೇಲಿರುವ ಆರೋಪಗಳು ಸಾಭೀತಾಗಿವೆ ಎಂದು ದಿ: 04-02-2026 ರಂದು ಮಾನ್ಯ ಕೊಪ್ಪಳದ ಗೌರವಾನ್ವಿತ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸಿ.ಚಂದ್ರಶೇಖರ ಅವರು, ಅಪರಾಧಿಗೆ ಜೀವಾವಧಿ ಶಿಕ್ಷೆ ಹಾಗೂ ರೂ. 1,05,000 ಗಳ ದಂಡ ವಿಧಿಸಿದ್ದಾರೆ.

ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಅಂಬಣ್ಣ ಟಿ ಮತ್ತು ಸರ್ಕಾರಿ ಅಭಿಯೋಜಕರಾದ ಬಂಡಿ ಅಪರ್ಣಾ ಎಂ. ಅವರು ಸರ್ಕಾರದ ಪರವಾಗಿ ಪ್ರಕರಣ ನಡೆಸಿ ವಾದ ಮಂಡಿಸಿರುತ್ತಾರೆ. ಈ ಪ್ರಕರಣದಲ್ಲಿನ ಕೊಪ್ಪಳ ನಗರ ಪೊಲೀಸರಾದ ಸೂರ್ಯಕಾಂತ ಸಿಹೆಚ್‍ಸಿ-183, ಸಂಗಮೇಶ ಸಿಹೆಚ್‍ಸಿ-252, ಲತೀಫ್ ಸಿಹೆಚ್‍ಸಿ-15, ಗವಿಸಿದ್ದಪ್ಪ ಸಿಪಿಸಿ-156, ಮಂಜುನಾಥ ಸಿಪಿಸಿ-605 ಇವರು ಸಾಕ್ಷಿದಾರರನ್ನು ಸರಿಯಾದ ಸಮಯಕ್ಕೆ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ ಎಂದು ಕೊಪ್ಪಳದ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದ ಸರ್ಕಾರಿ ಅಭಿಯೋಜಕರ ಕಾರ್ಯಾಲಯದ ತಿಳಿಸಿದೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande