
ತಿರುವನಂತಪುರಂ, 04 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಮಾಜಿ ರಾಷ್ಟ್ರಪತಿ ಆರ್. ವೆಂಕಟರಾಮನ್ ಅವರ ಜಯಂತಿಯ ಅಂಗವಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕೇರಳದ ತಿರುವನಂತಪುರಂನಲ್ಲಿ ಅವರಿಗೆ ಗೌರವ ನಮನ ಸಲ್ಲಿಸಿದರು.
ರಾಷ್ಟ್ರಪತಿಗಳ ಕಾರ್ಯಾಲಯದ ಪ್ರಕಾರ, ರಾಷ್ಟ್ರಪತಿ ಮುರ್ಮು ಅವರು ತಿರುವನಂತಪುರಂನ ಲೋಕ ಭವನದಲ್ಲಿ ಸ್ಥಾಪಿಸಿರುವ ಆರ್. ವೆಂಕಟರಾಮನ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ದೇಶಕ್ಕಾಗಿ ನೀಡಿದ ಅವರ ಅಮೂಲ್ಯ ಕೊಡುಗೆಯನ್ನು ಸ್ಮರಿಸಿದರು.
ಭಾರತದ ಎಂಟನೇ ರಾಷ್ಟ್ರಪತಿಗಳಾದ ಆರ್. ವೆಂಕಟರಾಮನ್ (1987–1992) ಅವರು 1910 ಡಿಸೆಂಬರ್ 4 ರಂದು ತಮಿಳುನಾಡಿನ ರಾಜಮಾಡಂನಲ್ಲಿ ಜನಿಸಿದರು. ವಕೀಲರು, ಸ್ವಾತಂತ್ರ್ಯ ಹೋರಾಟಗಾರರು ಮತ್ತು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾಗಿದ್ದ ಅವರು, ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡ ಹಿನ್ನೆಲೆಯಲ್ಲಿ ಎರಡು ವರ್ಷಗಳ ಕಾಲ ಬಂಧನ ಅನುಭವಿಸಿದ್ದರು.
ಸ್ವಾತಂತ್ರ್ಯೋತ್ತರ ಭಾರತದಲ್ಲಿ, ಅವರು ನಾಲ್ಕು ಬಾರಿ ಲೋಕಸಭಾ ಸದಸ್ಯರು, ಜೊತೆಗೆ ರಕ್ಷಣಾ ಸಚಿವ ಹಾಗೂ ಹಣಕಾಸು ಸಚಿವ ಸ್ಥಾನಗಳನ್ನು ಅಲಂಕರಿಸಿ ಮಹತ್ವದ ಆಡಳಿತಾತ್ಮಕ ಜವಾಬ್ದಾರಿಗಳನ್ನು ನಿರ್ವಹಿಸಿದ್ದರು.
1992ರಲ್ಲಿ ರಾಷ್ಟ್ರಪತಿ ಪದವಿಯಿಂದ ನಿವೃತ್ತರಾಗಿದ್ದ ವೆಂಕಟರಾಮನ್ ಅವರು ಜನವರಿ 27, 2009 ರಂದು ನಿಧನರಾದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa