


ರಾಯಚೂರು, 31 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ವಿಲಿಯಂ ಷೇಕ್ಸ್ಪಿಯರ್ ಅವರು ಸೃಷ್ಠಿಸಿದ ಪಾತ್ರಗಳಿಂದ ಹಾಗೂ ಇಂಗ್ಲಿಷ್ ಸಾಹಿತ್ಯದಿಂದ ಭಾರತದಲ್ಲಿ ಇಂಗ್ಲಿಷ್ ಭಾಷೆ ಕಲಿಕೆಗೆ ಸಾಕಷ್ಟು ಅವಕಾಶವಿದ್ದು ಇಂದಿಗೂ ಅವರ ನಾಟಕಗಳು ಪ್ರಸ್ತುತವಾಗಿವೆ ಎಂದು ಕಲ್ಬುರ್ಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕರು ಮತ್ತು ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾದ ಪ್ರೊ.ಬಸವರಾಜ ಪಿ. ಡೋಣೂರು ಅವರು ತಿಳಿಸಿದ್ದಾರೆ.
ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯದ ಇಂಗ್ಲಿಷ್ ವಿಭಾಗದಿಂದ ಆಯೋಜಿಸಿದ್ದ ಇಂಗ್ಲಿಷ್ ಲಿಟರರಿ ಕ್ಲಬ್ ಉದ್ಘಾಟನೆ ಮತ್ತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಹ್ಯಾಮ್ಲೆಟ್, ಜ್ಯುಲಿಯಸ್ ಸೀಸರ್ ನಾಟಕಗಳ ಅನೇಕ ದೃಷ್ಟಾಂತಗಳನ್ನು ವಿವರಿಸುತ್ತಾ ಇಂಗ್ಲಿಷ್ ಭಾಷೆಯ ಮಹತ್ವ ಹಾಗೂ ಸಾಹಿತ್ಯದ ಅಗಾಧತೆಯನ್ನು ತಮ್ಮ ವಿಶೇಷ ಉಪನ್ಯಾಸದಲ್ಲಿ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ.ಶಿವಾನಂದ ಕೆಳಗಿನಮನಿ ಅವರು, ವಿಲಿಯಂ ಷೇಕ್ಸ್ಪಿಯರ್ ಅವರ ನಾಟಕಗಳು ಬಹುತೇಕವಾಗಿ ನಮ್ಮ ಸಮಾಜದ ಬದುಕನ್ನು ಕಟ್ಟಿಕೊಟ್ಟಿವೆ. ಷೇಕ್ಸ್ಪಿಯರ್‌ರಲ್ಲಿ ಕೂಡ ಗುಣಧರ್ಮ ಮತ್ತು ಮನೋಧರ್ಮದಿಂದ ಕೂಡಿದಂತಹ ವ್ಯಕ್ತಿತ್ವ ಅವರಲ್ಲಿತ್ತು. ಪಾಶ್ಚಾತ್ಯ ಸಾಹಿತ್ಯ ಭಾರತದಲ್ಲಿನ ಸಮಾಜಕ್ಕೆ ಬಹುದೊಡ್ಡ ಬದಲಾವಣೆ ಮತ್ತು ಪರಿವರ್ತನೆ ತಂದುಕೊಟ್ಟಿದೆ. ಸಾಹಿತ್ಯದ ಮುಖಾಂತರ ಅಂತರ0ಗದ ಬದಲಾವಣೆ ಸಾಧ್ಯ. ಇಂಗ್ಲೀಷ್ ಸಾಹಿತ್ಯದಲ್ಲಿ ಷೇಕ್ಸ್ಪಿಯರ್ ಅವರ ಕೊಡುಗೆ ಅಪಾರವಾದುದು, ಅವರು ಬರೆದ ರೋಮಿಯೋ ಆಂಡ್ ಜುಲಿಯಟ್, ಕಿಂಗ್ ಲಿಯರ್, ಒಥೆಲೊ ನಾಟಕಗಳ ದೃಷ್ಟಾಂತಗಳನ್ನು ವಿಶ್ಲೇಷಿಸಿದರು. ಷೇಕ್ಸ್ಪಿಯರ್ ಅವರು ಕೇವಲ ಇಂಗ್ಲಿಷ್ ನಾಟಕಕಾರರಾಗಿ ಉಳಿಯದೇ ತಮ್ಮ ಮಾನವ ಸ್ವಭಾವದ ಸೂಕ್ಷö್ಮ ಚಿತ್ರಣಕ್ಕಾಗಿ ಕನ್ನಡ ಸಾಹಿತ್ಯದಲ್ಲೂ ಹೆಸರುವಾಸಿಯಾಗಿದ್ದಾರೆ. ಈ ಭಾಷೆಯನ್ನು ಸಾಹಿತ್ಯ ಪರವಾಗಿ ಪರಿಪೂರ್ಣವಾಗಿ ಕಲಿಯದೆ ಇದ್ದರೂ ವ್ಯಾಕರಣಾತ್ಮಕವಾಗಿ ಸಂವಹನಕ್ಕೆ ಬೇಕಾಗುವಷ್ಟು ಕಲಿಯುವ ಅಗತ್ಯತೆ ಇದೆ ಎಂದು ಅವರು ಹೇಳಿದರು.
ವಿಶೇಷ ಆಹ್ವಾನಿತರಾಗಿ ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ.ವೆಂಕಟಗಿರಿ ದಳವಾಯಿ ಅವರು, ಭಾಷೆಯಾಗಿ ಕಲಿಯುವುದು ಹೇಗೆ ಮತ್ತು ಜ್ಞಾನವಾಗಿ ಸ್ವೀಕರಿಸುವುದು ಹೇಗೆ ಎಂದು ಕುವೆಂಪು ಅವರು ತಮ್ಮ ಲೇಖನದಲ್ಲಿ ಹೇಳಿದ್ದಾರೆ. ಕನ್ನಡದ ಮೇರು ಸಾಹಿತ್ಯಕ್ಕೆ ಕನ್ನಡಿಗ ಇಂಗ್ಲಿಷ್ ಮೇಷ್ಟುçಗಳು ನೀಡಿದ ಕೊಡುಗೆ ಅಪಾರವಾದದ್ದು. ಜಾಗತಿಕ ಕಾಲದಲ್ಲಿ ಇಂಗ್ಲಿಷ್ ಭಾಷೆ ಕಲಿಕೆ ಅನಿವಾರ್ಯ. ಹೊಸ ತಲೆಮಾರಿನ ಯುವ ಜನತೆಯು ಸಾಹಿತಿಗಳನ್ನು ಆದರ್ಶವಾಗಿಟ್ಟುಕೊಳ್ಳಬೇಕು, ಇಂಗ್ಲಿಷ್ ಅಧಿಕಾರದ ಭಾಷೆಯೂ ಹೌದು ಅವಕಾಶಗಳ ಭಾಷೆಯೂ ಹೌದು ಆ ನಿಟ್ಟಿನಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನವನ್ನು ಇಂಗ್ಲಿಷ್ ಭಾಷೆಯಲ್ಲಿ ಹೊರತಂದರು. ಯಾವುದೇ ಭಾಷೆ ಕಲಿಯಲು ಮಾತೃಭಾಷೆಯ ನೈಪುಣ್ಯತೆ ಮುಖ್ಯ ಎಂದು ನುಡಿದರು.
ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಆಂಗ್ಲ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ಚಾಂದ್‌ಬಾಷ ಅವರು, ಸಾಹಿತ್ಯ ಅಧ್ಯಯನದಲ್ಲಿ ಸಂಶೋಧನಾ ವಿಧಾನಗಳು ಕುರಿತು ವಿಶೇಷ ಉಪನ್ಯಾಸ ನೀಡುತ್ತ ಇಂಗ್ಲಿಷ್ ಸಾಹಿತ್ಯ ಸಂಶೋಧನೆಯು ಪಠ್ಯ ವಿಶ್ಲೇಷತೆ, ಸೈದ್ದಾಂತಿಕ ಚೌಕಟ್ಟುಗಳು, ಜೀವನ ಚರಿತ್ರೆ ಮತ್ತು ಐತಿಹಾಸಿಕ ಸಂದರ್ಭಗಳನ್ನು ಬಳಸಿಕೊಂಡು ಸಾಹಿತ್ಯಕ ಕೃತಿಗಳನ್ನು ಆಳವಾಗಿ ಅಧ್ಯಯನ ಮಾಡುತ್ತದೆ. ಸಂಶೋಧನಾ ವಿಧಾನಗಳಾದ ಸಮಸ್ಯೆ ಸೂತ್ರಿಕರಣ, ಸಾಹಿತ್ಯ ಪರಿಶೀಲನೆ, ದತ್ತಾಂಶ ಸಂಗ್ರಹಣೆ, ವಿಶ್ಲೇಷಣೆ ಮತ್ತು ವರದಿ ಬರೆಯುವಿಕೆ ಹೀಗೆ ವಿವಿಧ ಹಂತಗಳೊAದಿಗೆ ವಿದ್ಯಾರ್ಥಿಗಳು ಉತ್ತಮ ರೀತಿಯಲ್ಲಿ ಅಧ್ಯಯನ ಮಾಡಬೇಕು. ಸಾಹಿತ್ಯ ಸಂಶೋಧನಾ ಗುಣವಾದ ಹಳೆಯ ಕೃತಿಗಳಿಗೆ ಹೊಸ ದೃಷ್ಟಿಕೋನಗಳನ್ನು ನೀಡುವ ಗುರಿಯನ್ನು ಹೊಂದಿರಬೇಕು ಎನ್ನುವ ಉದ್ದೇಶದೊಂದಿಗೆ ವಿದ್ಯಾರ್ಥಿಗಳು ಅಭ್ಯಾಸ ಮಾಡಬೇಕು ಆ ನಿಟ್ಟಿನಲ್ಲಿ ಹೆಚ್ಚು ಓದುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು ಎಂದು ಹೇಳಿದರು.
ವೇದಿಕೆ ಮೇಲೆ ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾದ ಪ್ರೊ.ಪಾರ್ವತಿ ಸಿ.ಎಸ್., ಕಲಾ ನಿಕಾಯದ ಡೀನರಾದ ಡಾ.ಲತಾ.ಎಂ.ಎಸ್. ಕಾರ್ಯಕ್ರಮದಲ್ಲಿ ಉಪಕುಲಸಚಿವರಾದ ಡಾ.ಕೆ.ವೆಂಕಟೇಶ, ವಾಣಿಜ್ಯ ನಿಕಾಯ ಡೀನರಾದ ಪ್ರೊ.ಪಿ.ಭಾಸ್ಕರ್, ಎನ್.ಎಸ್.ಎಸ್ ಅಧಿಕಾರಿಯಾದ ಡಾ.ಜಿ.ಎಸ್.ಬಿರಾದಾರ, ರಾಯಚೂರಿನ ಪ್ರಥಮ ದರ್ಜೆ ಕಾಲೇಜಿನ ಡಾ.ರಾಘವೇಂದ್ರ ನಾಯಕ್, ವಿವಿಯ ಇಂಗ್ಲಿಷ್ ವಿಭಾಗದ ಉಪನ್ಯಾಸಕರಾದ ಅನಿಲ್ ಅಪ್ರಾಳ್, ಡಾ.ಅನಿತಾ, ಡಾ.ಮೊಹ್ಮದ್ ಆಸೀಫ್, ಉಪಸ್ಥಿತರಿದ್ದರು.
ವಿಭಾಗದ ಸಂಯೋಜಕರಾದ ಡಾ.ಆನಂದ ಪ್ರಾಸ್ತಾವಿಕ ಮಾತನಾಡಿದರು, ವಿದ್ಯಾರ್ಥಿಗಳಾದ ಅನ್ನಪೂರ್ಣ ಪ್ರಾರ್ಥಿಸಿದರು, ಇಬ್ರಾಹಿಮ್ ಸ್ವಾಗತಿಸಿದರು, ಅರ್ಚನಾ ನಿರೂಪಿಸಿದರು, ಮಸ್ತಾನ್ ಅಲಿ, ನಾಗರಾಜ್, ರಾಜಶೇಖರ್ ಅತಿಥಿಗಳನ್ನು ಪರಿಚಯಿಸಿದರು. ಪ್ರಸಾದ್ ವಂದಿಸಿದರು, ವಿಭಾಗಗಳ ಅತಿಥಿ ಉಪನ್ಯಾಸಕರು, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್