ಕಿಡಿಗೇಡಿತನ ಮಾಡಿದರೆ ಜೈಲು ಗ್ಯಾರಂಟಿ : ಎಸ್ಪಿ ರೋಹನ್ ಜಗದೀಶ್
ಗದಗ, 31 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಹೊಸ ವರ್ಷವನ್ನು ಸಂಭ್ರಮ, ಸಂತಸದಿಂದ ಬರಮಾಡಿಕೊಳ್ಳಲು ಮುದ್ರಣಕಾಶಿ ಗದಗ ಸಜ್ಜಾಗಿದೆ. ನಗರದ ಪ್ರಮುಖ ವೃತ್ತಗಳು, ವಾಣಿಜ್ಯ ಪ್ರದೇಶಗಳು, ಬಸ್ ನಿಲ್ದಾಣ, ರೈಲು ನಿಲ್ದಾಣ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಸಂಭ್ರಮದ ವಾತಾವರಣ ನಿರ್ಮಾಣಗೊಂಡಿದೆ. ಆದರೆ ಸಂಭ್ರ
ಫೋಟೋ


ಗದಗ, 31 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಹೊಸ ವರ್ಷವನ್ನು ಸಂಭ್ರಮ, ಸಂತಸದಿಂದ ಬರಮಾಡಿಕೊಳ್ಳಲು ಮುದ್ರಣಕಾಶಿ ಗದಗ ಸಜ್ಜಾಗಿದೆ. ನಗರದ ಪ್ರಮುಖ ವೃತ್ತಗಳು, ವಾಣಿಜ್ಯ ಪ್ರದೇಶಗಳು, ಬಸ್ ನಿಲ್ದಾಣ, ರೈಲು ನಿಲ್ದಾಣ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಸಂಭ್ರಮದ ವಾತಾವರಣ ನಿರ್ಮಾಣಗೊಂಡಿದೆ. ಆದರೆ ಸಂಭ್ರಮದ ಹೆಸರಿನಲ್ಲಿ ಕಿಡಿಗೇಡಿತನ, ಕಾನೂನು ಉಲ್ಲಂಘನೆಗೆ ಅವಕಾಶ ಇಲ್ಲ ಎಂದು ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಅವರು ಕಠಿಣ ಎಚ್ಚರಿಕೆ ನೀಡಿದ್ದಾರೆ.

ಹೊಸ ವರ್ಷ ಆಚರಣೆ ವೇಳೆ ಯಾರ ಸಂತಸದಿಂದಲೂ ಬೇರೆಯವರಿಗೆ ತೊಂದರೆ ಆಗಬಾರದು. ಸಾರ್ವಜನಿಕ ಶಾಂತಿ, ಸುವ್ಯವಸ್ಥೆ ಕಾಪಾಡುವುದು ಎಲ್ಲರ ಜವಾಬ್ದಾರಿ ಎಂದು ಎಸ್ಪಿ ರೋಹನ್ ಜಗದೀಶ್ ಸ್ಪಷ್ಟಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯಿಂದ ಜಿಲ್ಲೆಯಾದ್ಯಂತ ಕಟ್ಟುನಿಟ್ಟಿನ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಜಿಲ್ಲೆಯ ಪ್ರಮುಖ ವೃತ್ತಗಳು, ಪ್ರವಾಸಿ ಸ್ಥಳಗಳು, ಬಾರ್-ಹೋಟೆಲ್‌ಗಳು, ಮನರಂಜನಾ ಕೇಂದ್ರಗಳು ಹಾಗೂ ಜನಸಂದಣಿ ಹೆಚ್ಚಿರುವ ಪ್ರದೇಶಗಳಲ್ಲಿ ಸಿಸಿ ಕ್ಯಾಮರಾ ಕಣ್ಗಾವಲು ಹೆಚ್ಚಿಸಲಾಗಿದೆ. ಅಲ್ಲದೆ, ಪೊಲೀಸ್ ಪ್ಯಾಟ್ರೋಲಿಂಗ್ ವ್ಯವಸ್ಥೆ ಬಲಪಡಿಸಲಾಗಿದೆ.

ಹೊಸ ವರ್ಷಾಚರಣೆ ಭದ್ರತೆಗೆ 4 ಡಿವೈಎಸ್ಪಿ, 16 ಇನ್ಸಪೆಕ್ಟರ್‌ಗಳು, 30ಕ್ಕೂ ಹೆಚ್ಚು ಪಿಎಸ್ಐ, 50ಕ್ಕೂ ಅಧಿಕ ಎಎಸ್ಐ ಹಾಗೂ 700ರಿಂದ 800ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಜೊತೆಗೆ ಎರಡು ಕೆಎಸ್‌ಆರ್‌ಪಿ ತುಕಡಿಗಳು ಹಾಗೂ ಎಂಟು ಜಿಲ್ಲಾ ಶಸ್ತ್ರಸಜ್ಜಿತ ಮೀಸಲು ಪಡೆಗಳನ್ನು ಭದ್ರತಾ ಕರ್ತವ್ಯಕ್ಕೆ ಬಳಸಲಾಗುತ್ತಿದೆ. ಪರಿಸ್ಥಿತಿಯ ಮೇಲೆ ನಿಗಾ ಇಡಲು ಮೂರು ಡ್ರೋನ್ ಕ್ಯಾಮರಗಳನ್ನೂ ಬಳಸಲಾಗುತ್ತಿದೆ.

ಡ್ರಂಕ್ ಅಂಡ್ ಡ್ರೈವ್ ಪ್ರಕರಣಗಳ ಮೇಲೆ ವಿಶೇಷ ನಿಗಾ ವಹಿಸಲಾಗಿದ್ದು, ಕುಡಿದು ವಾಹನ ಚಲಾಯಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಬೈಕ್ ತ್ರಿಬಲ್ ರೈಡ್, ಹೆಲ್ಮೆಟ್ ಧರಿಸದೇ ವಾಹನ ಚಾಲನೆ, ಅತಿವೇಗ, ಸ್ಟಂಟ್ ಮಾಡುವವರ ವಿರುದ್ಧ ಪ್ರಕರಣ ದಾಖಲಿಸುವುದು ಖಚಿತ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ನಿಯಮ ಉಲ್ಲಂಘಿಸಿದರೆ ಕನಿಷ್ಠ 10 ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತದೆ. ಕಳೆದ ಎರಡು ದಿನಗಳಲ್ಲೇ 300ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಲಾಗಿದೆ.

ಜನರ ಜೀವನ ಅಮೂಲ್ಯವಾಗಿದ್ದು, ಅಪಘಾತಗಳು ಹಾಗೂ ಅಹಿತಕರ ಘಟನೆಗಳನ್ನು ತಪ್ಪಿಸುವ ಉದ್ದೇಶದಿಂದಲೇ ಈ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಎಸ್ಪಿ ತಿಳಿಸಿದರು. ಬಾರ್ ಮತ್ತು ಹೋಟೆಲ್‌ಗಳಿಗೆ ಸಹ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದ್ದು, ಅನುಮತಿ ಇಲ್ಲದೆ ಯಾವುದೇ ಕಾರ್ಯಕ್ರಮ, ಈವೆಂಟ್‌ಗಳನ್ನು ಆಯೋಜಿಸುವಂತಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ನ್ಯೂಸನ್ಸ್ ಮಾಡಿದರೆ ತಕ್ಷಣವೇ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಲಾಗುತ್ತದೆ ಎಂದು ಎಸ್ಪಿ ರೋಹನ್ ಜಗದೀಶ್ ಖಡಕ್ ಸಂದೇಶ ನೀಡಿದ್ದಾರೆ.

ಹೊಸ ವರ್ಷವನ್ನು ಜವಾಬ್ದಾರಿಯಿಂದ, ಶಾಂತಿಯುತವಾಗಿ ಆಚರಿಸುವಂತೆ ಗದಗ ಜಿಲ್ಲೆಯ ನಾಗರಿಕರಲ್ಲಿ ಪೊಲೀಸ್ ಇಲಾಖೆ ಮನವಿ ಮಾಡಿದೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande