
ತಿರುವನಂತಪುರಂ, 31 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಕೇರಳದ ಮಹಾನ್ ಸಾಮಾಜಿಕ–ಆಧ್ಯಾತ್ಮಿಕ ಚಿಂತಕ ಶ್ರೀ ನಾರಾಯಣ ಗುರು ಸ್ಥಾಪಿಸಿದ ಶಿವಗಿರಿ ಮಠದ ಅಂಗ ಸಂಸ್ಥೆಯಾಗಿರುವ ಗುರು ಧರ್ಮ ಪ್ರಚಾರ ಸಭೆಯ ಕರ್ನಾಟಕ ರಾಜ್ಯಾಧ್ಯಕ್ಷರಾಗಿ ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಅವರ ಆಪ್ತರಾದ ಕೆ.ಗೋಪಿ ಅವರನ್ನು ನೇಮಕ ಮಾಡಲಾಗಿದೆ.
ಈ ಸಂಬಂಧ ನೇಮಕ ಆದೇಶ ಪತ್ರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರಿಂದ ಕೆ.ಗೋಪಿ ಅಧಿಕೃತವಾಗಿ ಸ್ವೀಕರಿಸಿದರು. ಕೇರಳದ ಶಿವಗಿರಿ ಮಠದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದ ವೇದಿಕೆಯ ಮೇಲೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆ.ಗೋಪಿಗೆ ನೇಮಕ ಪತ್ರ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಂಗಳೂರಿನಲ್ಲಿ ಶಿವಗಿರಿ ಮಠದ ಶಾಖಾ ಮಠ ಸ್ಥಾಪನೆಗಾಗಿ ಐದು ಎಕರೆ ಭೂಮಿಯನ್ನು ನೀಡಲಾಗುವುದು ಎಂದು ಘೋಷಣೆ ಮಾಡಿದರು. ಇದು ಕರ್ನಾಟಕದಲ್ಲಿ ನಾರಾಯಣ ಗುರುಗಳ ತತ್ತ್ವ, ಸಾಮಾಜಿಕ ಸಮಾನತೆ ಹಾಗೂ ಮಾನವೀಯ ಮೌಲ್ಯಗಳ ಪ್ರಚಾರಕ್ಕೆ ಮಹತ್ವದ ಹೆಜ್ಜೆಯಾಗಿದೆ ಎಂದು ಅವರು ಹೇಳಿದರು.
ಮಂಗಳೂರಿನಲ್ಲಿ ನಡೆದ ‘ಗುರು–ಗಾಂಧಿ’ ಕಾರ್ಯಕ್ರಮದ ಸಂಚಾಲಕರಾಗಿ ಕೆ.ಗೋಪಿ ಕಾರ್ಯನಿರ್ವಹಿಸಿದ್ದರು. ಸಾಮಾಜಿಕ ಜಾಗೃತಿ, ಸಮಾನತೆ ಮತ್ತು ಸುಧಾರಣಾ ಚಳವಳಿಗಳಲ್ಲಿ ಅವರ ಸಕ್ರಿಯ ಪಾತ್ರವನ್ನು ಗುರುತಿಸಿ ಈ ನೇಮಕ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಕೇರಳದಲ್ಲಿ ಅತ್ಯಂತ ಪ್ರತಿಷ್ಠಿತ ಹಾಗೂ ಪ್ರಭಾವಶಾಲಿ ಸಂಸ್ಥೆಯಾಗಿ ಗುರುತಿಸಿಕೊಂಡಿರುವ ಗುರು ಧರ್ಮ ಪ್ರಚಾರ ಸಭೆಯ ಮೂಲಕ, ಕರ್ನಾಟಕದಲ್ಲಿಯೂ ನಾರಾಯಣ ಗುರುಗಳ ಸಂದೇಶವನ್ನು ವಿಸ್ತರಿಸುವ ಜವಾಬ್ದಾರಿ ಇದೀಗ ಕೆ.ಗೋಪಿ ಅವರ ಮೇಲಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa