
ನವದೆಹಲಿ, 31 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಅಯೋಧ್ಯೆಯಲ್ಲಿ ಶ್ರೀರಾಮ ಲಲ್ಲಾ ಪ್ರಾಣ–ಪ್ರತಿಷ್ಠಾಪನೆಯ ಎರಡನೇ ವಾರ್ಷಿಕೋತ್ಸವದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವು ಗಣ್ಯ ನಾಯಕರು ದೇಶವಾಸಿಗಳಿಗೆ ಹಾರ್ದಿಕ ಶುಭಾಶಯಗಳನ್ನು ಕೋರಿದರು.
ಬುಧವಾರ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಸಂದೇಶ ಹಂಚಿಕೊಂಡ ಪ್ರಧಾನಿ ಮೋದಿ, “ಇಂದು ಅಯೋಧ್ಯೆಯ ಪವಿತ್ರ ಭೂಮಿಯಲ್ಲಿ ರಾಮಲಲ್ಲಾ ಅವರ ಎರಡನೇ ವಾರ್ಷಿಕೋತ್ಸವವನ್ನು ಆಚರಿಸಲಾಗುತ್ತಿದೆ. ಇದು ನಮ್ಮ ನಂಬಿಕೆ ಮತ್ತು ಮೌಲ್ಯಗಳ ದೈವಿಕ ಆಚರಣೆ. ಈ ಪವಿತ್ರ ಸಂದರ್ಭದಲ್ಲಿ ಭಾರತ ಹಾಗೂ ವಿದೇಶಗಳಲ್ಲಿರುವ ಎಲ್ಲಾ ರಾಮಭಕ್ತರ ಪರವಾಗಿ ಭಗವಾನ್ ರಾಮನಿಗೆ ವಂದನೆ ಸಲ್ಲಿಸುತ್ತೇನೆ. ಎಲ್ಲಾ ದೇಶವಾಸಿಗಳಿಗೆ ಅನಂತ ಶುಭಾಶಯಗಳು,” ಎಂದು ಹೇಳಿದರು.
ಮರ್ಯಾದಾ ಪುರುಷೋತ್ತಮ ಶ್ರೀರಾಮನ ಸ್ಫೂರ್ತಿ ಪ್ರತಿಯೊಬ್ಬ ನಾಗರಿಕನಲ್ಲಿಯೂ ಸೇವಾಭಾವ, ಸಮರ್ಪಣೆ ಹಾಗೂ ಸಹಾನುಭೂತಿಯನ್ನು ಮತ್ತಷ್ಟು ಬಲಪಡಿಸಿ, ಸಮೃದ್ಧ ಹಾಗೂ ಸ್ವಾವಲಂಬಿ ಭಾರತ ನಿರ್ಮಾಣಕ್ಕೆ ದೃಢ ಅಡಿಪಾಯವಾಗಲಿ ಎಂದು ಅವರು ಆಶಿಸಿದರು.
ಪ್ರಾಣ–ಪ್ರತಿಷ್ಠಾಪನೆಯ ಎರಡನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಶುಭ ಹಾರೈಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, “ಎರಡು ವರ್ಷಗಳ ಹಿಂದೆ ಇದೇ ಶುಭ ದಿನದಂದು 500 ವರ್ಷಗಳ ಕಾಯುವಿಕೆ ಕೊನೆಗೊಂಡಿತು. ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಶ್ರೀರಾಮ ಜನ್ಮಭೂಮಿ ದೇವಾಲಯದಲ್ಲಿ ರಾಮಲಲ್ಲಾ ಪ್ರಾಣ–ಪ್ರತಿಷ್ಠಾಪನೆ ನೆರವೇರಿತು,” ಎಂದು ಸ್ಮರಿಸಿದರು. ಈ ದೇವಾಲಯವು ಭಗವಾನ್ ಶ್ರೀರಾಮನ ಆದರ್ಶಗಳು ಹಾಗೂ ಜೀವನಮೌಲ್ಯಗಳ ಪುನರುಜ್ಜೀವನದ ಸಂಕೇತವಾಗಿದ್ದು, ಧರ್ಮರಕ್ಷಣೆಯ ಹೋರಾಟ, ಸಾಂಸ್ಕೃತಿಕ ಸ್ವಾಭಿಮಾನ ಮತ್ತು ಪರಂಪರೆಯ ಸಂರಕ್ಷಣೆಗೆ ಅಪ್ರತಿಮ ಸ್ಫೂರ್ತಿಯಾಗಿದೆ ಎಂದು ಅವರು ಹೇಳಿದರು. ಈ ಸಂದರ್ಭದಲ್ಲೇ ರಾಮಜನ್ಮಭೂಮಿ ಚಳವಳಿಯ ಎಲ್ಲ ಹುತಾತ್ಮರಿಗೆ ಗೌರವ ಸಲ್ಲಿಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa