


ಕಾರವಾರ, 28 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇದೇ ಮೊದಲ ಬಾರಿಗೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿರುವ ಕದಂಬ ನೌಕಾನೆಲೆಗೆ ಆಗಮಿಸಿ, ಅರಬ್ಬಿ ಸಮುದ್ರದಲ್ಲಿ ಭಾರತೀಯ ನೌಕಾಪಡೆಯ ಐಎನ್‌ಎಸ್ ವಾಗ್ಶೀರ್ ಸಬ್‌ಮೆರಿನ್‌ನಲ್ಲಿ ಪ್ರಯಾಣ ನಡೆಸಿದರು. ಈ ಮೂಲಕ ಸಬ್‌ಮೆರಿನ್‌ನಲ್ಲಿ ಪ್ರಯಾಣಿಸಿದ ಭಾರತದ ಎರಡನೇ ರಾಷ್ಟ್ರಪತಿ ಎಂಬ ಅಪೂರ್ವ ದಾಖಲೆಗೆ ಅವರು ಪಾತ್ರರಾದರು.
ಕಾರವಾರದ ಕದಂಬ ನೌಕಾನೆಲೆಗೆ ಆಗಮಿಸಿದ ರಾಷ್ಟ್ರಪತಿ ಮುರ್ಮು ಅವರನ್ನು ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಆತ್ಮೀಯವಾಗಿ ಬರಮಾಡಿಕೊಂಡರು. ಏಷ್ಯಾದ ಅತಿದೊಡ್ಡ ನೌಕಾನೆಲೆ ಎಂಬ ಖ್ಯಾತಿ ಪಡೆದಿರುವ ಕದಂಬ ನೌಕಾನೆಲೆಯ ಫೇಸ್–2 ಕಾಮಗಾರಿಗಳು ಪೂರ್ಣಗೊಂಡಿದ್ದು, ಯುದ್ಧ ಹಡಗುಗಳು ಹಾಗೂ ಸಬ್‌ಮೆರಿನ್‌ಗಳ ಪ್ರಮುಖ ನಿಲ್ದಾಣವಾಗಿ ಇದು ಅಭಿವೃದ್ಧಿಗೊಂಡಿದೆ. ಇದೇ ಪ್ರದೇಶದಲ್ಲಿ ಆಧುನಿಕ ರಿಪೇರಿ ಯಾರ್ಡ್ ನಿರ್ಮಾಣ ಕಾರ್ಯವೂ ಪ್ರಗತಿಯಲ್ಲಿದೆ.
ನೌಕಾನೆಲೆ ಪರಿಶೀಲನೆಯ ನಂತರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಐಎನ್‌ಎಸ್ ವಾಗ್ಶೀರ್ ಸಬ್‌ಮೆರಿನ್‌ನಲ್ಲಿ ಸುಮಾರು ಒಂದು ಗಂಟೆಗಳ ಕಾಲ ಐತಿಹಾಸಿಕ ಸಮುದ್ರ ಪ್ರಯಾಣ ನಡೆಸಿದರು. ಈ ಸಂದರ್ಭದಲ್ಲಿ ರಿಯರ್ ಅಡ್ಮಿರಲ್ ದಿನೇಶ್ ಕುಮಾರ್ ತ್ರಿಪಾಟಿ (ಚೀಫ್ ಆಫ್ ನೇವಲ್ ಸ್ಟಾಫ್), ರಿಯರ್ ಅಡ್ಮಿರಲ್ ವಿಕ್ರಂ ಮೆನನ್ ಸೇರಿದಂತೆ ನೌಕಾಪಡೆಯ ಹಿರಿಯ ಅಧಿಕಾರಿಗಳು ರಾಷ್ಟ್ರಪತಿ ಜೊತೆಗಿದ್ದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa