
ನವದೆಹಲಿ, 21 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ವಿದ್ಯುತ್ ವಾಹನಗಳು (ಇವಿಗಳು) ಪರಿಸರ ಸಂರಕ್ಷಣೆಗೂ ಉದ್ಯೋಗ ಸೃಷ್ಟಿಗೂ ಉತ್ತೇಜನ ನೀಡುತ್ತಾ ಭಾರತದ ಅಭಿವೃದ್ಧಿಯ ಗಾಥೆಯನ್ನು ವೇಗಗೊಳಿಸುತ್ತಿವೆ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಭೂ ವಿಜ್ಞಾನ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್ ಹೇಳಿದರು.
ಭಾರತ್ ಮಂಟಪದಲ್ಲಿ ನಡೆದ ಎಲೆಕ್ಟ್ರಿಕ್ ವೆಹಿಕಲ್ (ಇವಿ) ಎಕ್ಸ್‌ಪೋದಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಸ್ವಚ್ಛ ಸಾರಿಗೆ ಮತ್ತು ಯುವ ಉದ್ಯಮಶೀಲತೆಯ ದೃಷ್ಟಿಕೋನವನ್ನು ಒತ್ತಿ ಹೇಳಿದರು. ಇವಿ ವಲಯದಲ್ಲಿನ ಅವಕಾಶಗಳ ಬಗ್ಗೆ ಯುವಜನರಲ್ಲಿ ಜಾಗೃತಿ ಮೂಡಿಸುವುದು ಮತ್ತು ವ್ಯಾಪಕ ಪ್ರವೇಶ ಕಲ್ಪಿಸುವುದು ಅಗತ್ಯವಿದೆ ಎಂದರು.
ಹಸಿರು ಹಾಗೂ ಸುಸ್ಥಿರ ಭವಿಷ್ಯ, ಶುದ್ಧ ಇಂಧನಕ್ಕೆ ಸಮಗ್ರ ದೃಷ್ಟಿಕೋನ ಮತ್ತು ಜಾಗತಿಕ ಮಟ್ಟದಲ್ಲಿ ಭಾರತದ ಬೆಳೆಯುತ್ತಿರುವ ಪಾತ್ರವು ವಿದ್ಯುತ್ ಚಲನಶೀಲತೆಯ ಪ್ರಮುಖ ಸ್ತಂಭಗಳಾಗಿವೆ ಎಂದು ಅವರು ಹೇಳಿದರು.
ವಿದ್ಯುತ್ ಚಲನಶೀಲತೆ ಕೇವಲ ಸಾರಿಗೆ ಅಥವಾ ಪರಿಸರ ಸಮಸ್ಯೆಯಲ್ಲ, ಉದ್ಯಮಶೀಲತೆ, ಉದ್ಯೋಗ ಮತ್ತು ಜೀವನೋಪಾಯಕ್ಕೆ ಶಕ್ತಿಶಾಲಿ ಎಂಜಿನ್ ಆಗಿ ರೂಪುಗೊಳ್ಳುತ್ತಿದೆ ಎಂದರು.
ಆಂಬ್ಯುಲೆನ್ಸ್‌ಗಳು, ಇ-ರಿಕ್ಷಾಗಳು, ಪ್ರಯಾಣಿಕ ಹಾಗೂ ವಾಣಿಜ್ಯ ವಾಹನಗಳಂತಹ ಹಲವು ಕ್ಷೇತ್ರಗಳಲ್ಲಿ ಇವಿಗಳ ಬಳಕೆ ವೇಗವಾಗಿ ಹೆಚ್ಚುತ್ತಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭ ಮೇಕ್ ಇನ್ ಇಂಡಿಯಾ ಇವಿ ಉತ್ಪನ್ನಗಳು, ಘಟಕಗಳು ಮತ್ತು ಕ್ಲೀನ್ ಮೊಬಿಲಿಟಿ ತಂತ್ರಜ್ಞಾನಗಳನ್ನು ವೀಕ್ಷಿಸಿ ಸಂಬಂಧಿಸಿದವರೊಂದಿಗೆ ಸಂವಾದ ನಡೆಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa