
ನವದೆಹಲಿ, 20 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ಎಂಎನ್‌ಆರ್‌ಇಜಿಎ)ಯನ್ನು ದುರ್ಬಲಗೊಳಿಸುವ ಮೂಲಕ ಮೋದಿ ಸರ್ಕಾರ ಬಡ ರೈತರು ಮತ್ತು ಕಾರ್ಮಿಕರ ಹಿತಾಸಕ್ತಿಗಳ ಮೇಲೆ ದಾಳಿ ಮಾಡಿದೆ ಎಂದು ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಆರೋಪಿಸಿದ್ದಾರೆ.
ಕಾಂಗ್ರೆಸ್ ಪಕ್ಷವು ಬೀದಿಗಳಿಂದ ಸಂಸತ್ತಿನವರೆಗೆ ಬಡವರ ಹಕ್ಕುಗಳಿಗಾಗಿ ಹೋರಾಟ ಮುಂದುವರಿಸುತ್ತದೆ ಎಂದು ಅವರು X ನಲ್ಲಿ ಹೇಳಿದ್ದಾರೆ.
ಕಳೆದ 11 ವರ್ಷಗಳಲ್ಲಿ ಮೋದಿ ಸರ್ಕಾರ ಉದ್ದೇಶಪೂರ್ವಕವಾಗಿ ಎಂಎನ್‌ಆರ್‌ಇಜಿಎ ಯೋಜನೆಯನ್ನು ದುರ್ಬಲಗೊಳಿಸಲು ಪ್ರಯತ್ನಿಸಿದೆ ಎಂದು ಸೋನಿಯಾ ಗಾಂಧಿ ಟೀಕಿಸಿದರು.
ಕೋವಿಡ್-19 ಸಾಂಕ್ರಾಮಿಕ ಸಂದರ್ಭದಲ್ಲಿ ಈ ಯೋಜನೆ ಬಡವರಿಗೆ ಜೀವಾಳವಾಗಿತ್ತು ಎಂದು ಅವರು ನೆನಪಿಸಿದರು. ವಿರೋಧ ಪಕ್ಷಗಳನ್ನು ಸಮಾಲೋಚಿಸದೇ ಯೋಜನೆಯ ಸ್ವರೂಪ ಮತ್ತು ನಿರ್ವಹಣೆಯಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಎಂಎನ್‌ಆರ್‌ಇಜಿಎಯನ್ನು ಡಾ. ಮನಮೋಹನ್ ಸಿಂಗ್ ಅವರ ಪ್ರಧಾನಮಂತ್ರಿ ಅವಧಿಯಲ್ಲಿ ಬಡವರಿಗೆ ಸುರಕ್ಷತಾ ಜಾಲವಾಗಿ ಜಾರಿಗೆ ತರಲಾಗಿತ್ತು. ಇದರಿಂದ ಗ್ರಾಮ ಪಂಚಾಯತ್‌ಗಳು ಬಲವರ್ಧನೆಯಾಗಿ, ಮಹಾತ್ಮ ಗಾಂಧಿಯವರ ‘ಗ್ರಾಮ ಸ್ವರಾಜ್’ ಕನಸು ಸಾಕಾರಗೊಳ್ಳುವ ದಿಕ್ಕಿನಲ್ಲಿ ಹೆಜ್ಜೆ ಇಡಲಾಗಿತ್ತು ಎಂದು ಅವರು ಹೇಳಿದರು. ಪ್ರಸ್ತುತ ಸರ್ಕಾರ ಈ ಕಾನೂನನ್ನು ದುರ್ಬಲಗೊಳಿಸುವ ಮೂಲಕ ಗ್ರಾಮೀಣ ಭಾರತದ ಲಕ್ಷಾಂತರ ಕಾರ್ಮಿಕರು ಮತ್ತು ರೈತರ ಹಿತಾಸಕ್ತಿಗೆ ಧಕ್ಕೆಯುಂಟುಮಾಡುತ್ತಿದೆ ಎಂದು ಸೋನಿಯಾ ಗಾಂಧಿ ಎಚ್ಚರಿಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa