
ಕೋಲ್ಕತ್ತಾ, 20 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಪಶ್ಚಿಮ ಬಂಗಾಳದಲ್ಲಿ ಆಡಳಿತದಲ್ಲಿರುವ ತೃಣಮೂಲ ಕಾಂಗ್ರೆಸ್ (ಟಿಎಂಸಿ) ವಿರುದ್ಧ ಪ್ರಧಾನಿ ನರೇಂದ್ರ ಮೋದಿ ತೀವ್ರ ವಾಗ್ದಾಳಿ ನಡೆಸಿದ್ದು, ರಾಜ್ಯದ ಇಂದಿನ ಪರಿಸ್ಥಿತಿಯನ್ನು “ಮಹಾ ಜಂಗಲ್ ರಾಜ್” ಎಂದು ಕರೆದಿದ್ದಾರೆ.
ಭ್ರಷ್ಟಾಚಾರ, ಸ್ವಜನಪಕ್ಷಪಾತ ಮತ್ತು ಓಲೈಕೆ ರಾಜಕೀಯದಿಂದ ಬಂಗಾಳದ ಅಭಿವೃದ್ಧಿ ಸಂಪೂರ್ಣವಾಗಿ ಸ್ಥಗಿತಗೊಂಡಿದೆ ಎಂದು ಅವರು ಆರೋಪಿಸಿದರು.
ನಾಡಿಯಾ ಜಿಲ್ಲೆಯ ತಾಹೆರ್‌ಪುರದಲ್ಲಿ ಆಯೋಜಿಸಿದ್ದ ರ್ಯಾಲಿಯನ್ನು ಉದ್ದೇಶಿಸಿ ಫೋನ್ ಮೂಲಕ ಮಾತನಾಡಿದ ಪ್ರಧಾನಿ, ಹವಾಮಾನದ ಕಾರಣ ಸ್ಥಳಕ್ಕೆ ಬರಲಾಗದೆ ಹೋದ ಹಿನ್ನೆಲೆಯಲ್ಲಿ ಜನರಿಗೆ ಕ್ಷಮೆಯಾಚಿಸಿದರು. ಈ ವೇಳೆ ಬೆಳಿಗ್ಗೆ ನಡೆದ ರೈಲು ಅಪಘಾತ ಹಾಗೂ ಪ್ರತಿಕೂಲ ಹವಾಮಾನದಿಂದ ಗಾಯಗೊಂಡ ಬಿಜೆಪಿ ಕಾರ್ಯಕರ್ತರ ಬಗ್ಗೆ ದುಃಖ ವ್ಯಕ್ತಪಡಿಸಿ, ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದರು.
ಕೇಂದ್ರ ಸರ್ಕಾರವು ಬಂಗಾಳದ ನಿರ್ಲಕ್ಷಿತ ಪ್ರದೇಶಗಳಿಗೆ ಆಧುನಿಕ ಸಂಪರ್ಕ ಕಲ್ಪಿಸಲು ಶ್ರಮಿಸುತ್ತಿದೆ ಎಂದು ಮೋದಿ ಹೇಳಿದರು. ಬರಜಗುಲಿ–ಕೃಷ್ಣನಗರ ಚತುಷ್ಪಥ ರಸ್ತೆ ಯೋಜನೆಯಿಂದ ಉತ್ತರ 24 ಪರಗಣ, ನಾಡಿಯಾ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಿಗೆ ಲಾಭವಾಗಲಿದೆ ಎಂದು ತಿಳಿಸಿದರು. ಇವು ಆರ್ಥಿಕ ಚಟುವಟಿಕೆ ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸಲಿವೆ ಎಂದು ಹೇಳಿದರು.
ನಾಡಿಯಾದ ಐತಿಹಾಸಿಕ ಮಹತ್ವವನ್ನು ಉಲ್ಲೇಖಿಸಿದ ಪ್ರಧಾನಿ, ಚೈತನ್ಯ ಮಹಾಪ್ರಭು ಹಾಗೂ ‘ವಂದೇ ಮಾತರಂ’ ಗೀತೆಯ ನೆಲವೆಂದು ಬಂಗಾಳವನ್ನು ಸ್ಮರಿಸಿದರು. ದೇಶವು ವೇಗದ ಅಭಿವೃದ್ಧಿಯನ್ನು ಬಯಸುತ್ತಿದ್ದು, ಬಿಹಾರದಲ್ಲಿ ಎನ್‌ಡಿಎಗೆ ದೊರೆತ ಭರ್ಜರಿ ಗೆಲುವು ಅದರ ಸಂಕೇತವಾಗಿದೆ ಎಂದು ಹೇಳಿದರು. ಬಿಹಾರದಲ್ಲಿ ‘ಜಂಗಲ್ ರಾಜ್’ ತಿರಸ್ಕೃತವಾಗಿದ್ದು, ಈಗ ಬಂಗಾಳವೂ ‘ಮಹಾ ಜಂಗಲ್ ರಾಜ್’ ಅನ್ನು ತೊಡೆದುಹಾಕಬೇಕಿದೆ ಎಂದು ಹೇಳಿದರು.
ಬಂಗಾಳಕ್ಕೆ ಹಣವೂ ಇದೆ, ಯೋಜನೆಗಳೂ ಇವೆ, ಆದರೆ ಟಿಎಂಸಿ ಸರ್ಕಾರ ‘ಕಮಿಷನ್ ಮತ್ತು ಕಡಿತ’ಗಳಲ್ಲಿ ಮುಳುಗಿ ಸಾವಿರಾರು ಕೋಟಿ ರೂಪಾಯಿ ಅಭಿವೃದ್ಧಿ ಯೋಜನೆಗಳನ್ನು ತಡೆಹಿಡಿದಿದೆ ಎಂದು ಮೋದಿ ಆರೋಪಿಸಿದರು. ಒಳನುಸುಳುವಿಕೆ ವಿಚಾರದಲ್ಲಿ ಬಿಜೆಪಿ ಧ್ವನಿ ಎತ್ತಿದಾಗ ಟಿಎಂಸಿ ಅಸಹನೆ ತೋರುತ್ತಿದೆ ಎಂದು ಟೀಕಿಸಿದರು.
ರಾಜ್ಯದ ವೇಗದ ಅಭಿವೃದ್ಧಿಗಾಗಿ ‘ಡಬಲ್ ಎಂಜಿನ್ ಸರ್ಕಾರ’ಕ್ಕೆ ಅವಕಾಶ ನೀಡುವಂತೆ ಬಂಗಾಳದ ಜನತೆಗೆ ಪ್ರಧಾನಿ ಕರೆ ನೀಡಿದರು. ಬಂಗಾಳದ ವೈಭವವನ್ನು ಪುನರ್‌ಸ್ಥಾಪಿಸಲು ಬಿಜೆಪಿ ಸಂಪೂರ್ಣ ಶಕ್ತಿಯಿಂದ ಕೆಲಸ ಮಾಡಲಿದೆ ಎಂದು ಅವರು ಭರವಸೆ ನೀಡಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa