
ಬೆಳಗಾವಿ, 20 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ರಾಜ್ಯ ಸರ್ಕಾರ ರೈತ ಪರ ಸರಕಾರವಾಗಿದ್ದು, ಕಬ್ಬು ಬೆಳೆಯುವ ಪ್ರದೇಶದಲ್ಲಿ ಮಣ್ಣಿನ ಆರೋಗ್ಯ ಮತ್ತು ನೀರಿನ ಸಮಗ್ರ ನಿರ್ವಹಣೆಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಭೂಮಿ ಜೀವದ ತೊಟ್ಟಿಲು, ಇಂತಹ ಜೀವದ ತೊಟ್ಟಿಲನ್ನು ಬಂಜೆ ಮಾಡಬಾರದು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.
ಬೆಳಗಾವಿ ತಾಲೂಕಿನ ಹುದಲಿ ಗ್ರಾಮದಲ್ಲಿನ ಬೆಳಗಾಂ ಶುಗರ್ಸ ಹತ್ತಿರ ಖಾಸಗಿ ಜಮೀನಿನಲ್ಲಿ ಜಿಲ್ಲಾಡಳಿತ, ಜಿಲ್ಲಾಪಂಚಾಯತ್ ಬೆಳಗಾವಿ, ಕೃಷಿ ಇಲಾಖೆ ಹಾಗೂ ಸಕ್ಕರೆ ಕಾರ್ಖಾನೆಗಳ ಸಂಯುಕ್ತ ಆಶ್ರಯದಲ್ಲಿ ಶನಿವಾರ ಜರುಗಿದ ಬೆಳಗಾವಿ, ಬಾಗಲಕೋಟ, ವಿಜಯಪುರ, ಕಲಬುರಗಿ ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಕಬ್ಬು ಬೆಳೆಯುವ ಪ್ರದೇಶದಲ್ಲಿ ಮಣ್ಣಿನ ಆರೋಗ್ಯ ಮತ್ತು ನೀರಿನ ಸಮಗ್ರ ನಿರ್ವಹಣೆ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ರೈತರು ರಸಗೊಬ್ಬರ ಬಳಕೆಯನ್ನು ಕಡಿಮೆ ಮಾಡಬೇಕಾಗಿದೆ. ರಸಗೊಬ್ಬರ ಬಳಕೆಯಿಂದ ಹೆಚ್ವಿನ ಇಳುವರಿ ಬರುತ್ತದೆ ಎಂಬ ತಪ್ಪು ಕಲ್ಪನೆಯಿಂದ ಹೊರಬರಬೇಕಾಗಿದೆ. ಭಾರತ ಕೃಷಿ ಪ್ರಧಾನ ರಾಷ್ಟ್ರವಾಗಿದ್ದು ಪ್ರತಿಶತ 90 ಕೃಷಿ ಮೇಲೆಯೇ ಅವಲಂಬಿತವಾಗಿದೆ. ರೈತರಿಗೆ ಬೇಕಾದ ಸಹಾಯ ಮಾಡುವುದು ಸರಕಾರಗಳ ಜವಾಬ್ದಾರಿಯಾಗಿದೆ ಎಂದರು.
ನೀರಿನ ನಿರ್ವಹಣೆ ಕುರಿತು ಪ್ರತಿಯೊಬ್ಬರು ತಿಳಿದುಕೊಂಡು ನೀರನ್ನು ಮಿತವಾಗಿ ಬಳಸಬೇಕು. ಈ ಕುರಿತು ಕೃಷಿ ಇಲಾಖೆ ಪ್ರತಿ ರೈತರ ಹತ್ತಿರ ಹೋಗಿ ಇಲಾಖೆಯಿಂದ ಪರಿಚಯಿಸಲಾಗುವ ಹೊಸ ತಳಿಗಳ ಕುರಿತು ಮಾಹಿತಿ ನೀಡಬೇಕು. ಕಳೆದ ಆಯವ್ಯಯಲ್ಲಿ ಘೋಷಿಸಿದಂತೆ ಕಾರ್ಯಕ್ರಮವನ್ನು ಜಾರಿಗೊಳಿಸಲಾಗಿದೆಎಂದು ತಿಳಿಸಿದರು.
ರೈತರು ಕೃಷಿಯಲ್ಲಿ ತಂತ್ರಜ್ಞಾನ ಅಳವಡಿಸಿಕೊಳ್ಳುವುದರ ಮೂಲಕ ಉತ್ತಮ ಇಳುವರಿ ಜೊತೆಗೆ ಹೆಚ್ಚಿನ ಆದಾಯ ಪಡೆಯಲು ಮುಂದಾಗಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರಕಾರವು ಸಬ್ಸಿಡಿ ಮೂಲಕ ಹೊಸ ಯಂತ್ರೋಪಕರಣಗಳನ್ನು ವಿತರಿಸುತ್ತಿದೆ.
ರಾಜ್ಯದಲ್ಲಿಯೇ ಮಂಡ್ಯ ಜಿಲ್ಲೆಯಲ್ಲಿ ಹೆಚ್ಚು ವ್ಯವಸಾಯ ಮಾಡಲಾಗುತ್ತಿದೆ. ಅಲ್ಲಿನ ರೈತರು ಕೃಷಿ ಇಲಾಖೆಯಿಂದ ಜಾರಿಯಲ್ಲಿರುವ ಸಾಕಷ್ಟು ಯೋಜನೆಗಳನ್ನು ಪಡೆದು ಅಭಿವೃದ್ಧಿಪರ ಕೃಷಿ ಮಾಡುತ್ತಿದ್ದಾರೆ. ಕೃಷಿ ಇಲಾಖೆ ಅಧಿಕಾರಿ, ಸಿಬ್ಬಂದಿಗಳು ಕ್ಷೇತ್ರಗಳಿಗೆ ಭೇಟಿ ನೀಡಿ ರೈತರಿಗೆ ಹೊಸ ಹೊಸ ತಂತ್ರಜ್ಞಾನ ಬಳಕೆ, ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳುವ ಕುರಿತು ಜಾಗೃತಿ ಮೂಡಿಸಬೇಕು. ಕೃಷಿಯನ್ನು ಲಾಭದಾಯಕವ್ನಾಗಿಸಿ ರೈತರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿಸಲು ರಾಜ್ಯ ಸರಕಾರ ಸದಾ ಬದ್ಧವಾಗಿದೆ ಎಂದು ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ ಅವರು ಹೇಳಿದರು.
ಕೃಷಿ ಸಚಿವರಾದ ಎನ್.ಚಲುವರಾಯಸ್ವಾಮಿ ಅವರು ಮಾತನಾಡಿ, ರಾಜ್ಯದ ಕಬ್ಬು ಬೆಳೆಗಾರರಿಗೆ ಅನುಕೂಲವಾಗಬೇಕು. ಬೆಳೆಯಲ್ಲಿ ಆಧುನಿಕ ತಂತ್ರಜ್ಞಾನ ಬಳಸಿಕೊಳ್ಳುವುದರ ಮೂಲಕ ಉತ್ತಮ ಆದಾಯ ಪಡೆಯಬೇಕೆನ್ನುವ ಉದ್ದೇಶದಿಂದ ಕಬ್ಬು ಬೆಳೆಯುವ ಪ್ರದೇಶದಲ್ಲಿ ಮಣ್ಣಿನ ಆರೋಗ್ಯ, ನೀರಿನ ಸಮಗ್ರ ನಿರ್ವಹಣೆ ಯೋಜನೆಯನ್ನು ಜಾರಿಗೊಳಿಸಲಾಗಿದೆ.
ರೈತರಿಗೆ ಅನುಕೂಲವಾಗುವ ಎಲ್ಲ ಯೋಜನೆಗಳನ್ನು ನೀಡುವ ಮೂಲಕ ರೈತರಿಗೆ ಬೆಂಬಲಿಸುವ ಕಾರ್ಯ ಸಿದ್ಧರಾಮಯ್ಯನವರ ನೇತೃತ್ವದ ನಮ್ಮ ಸರಕಾರ ಮಾಡುತ್ತಿದೆ. ಕಡಿಮೆ ನೀರು, ಖರ್ಚಿನಲ್ಲಿ ಉತ್ತಮ ಇಳುವರಿ ತೆಗೆಯಬಹುದಾದ ತಳಿಗಳನ್ನು ಪರಿಚಯಿಸುವುದರ ಮೂಲಕ ರೈತರು ಉತ್ತಮ ಆದಾಯ ಪಡೆಯಬಹುದಾದ ಕಾರ್ಯಕ್ರಮ ರೂಪಿಸಲಾಗಿದೆ.
ಕಬ್ಬು ಕಟಾವು ಯಂತ್ರಗಳನ್ನು ಸಬ್ಸಿಡಿ ಮೂಲಕ ವಿತರಿಸುತ್ತಿರುವುದು ರಾಷ್ಟ್ರಕ್ಕೆ ಮಾದರಿಯಾಗಿದೆ. ಇಂತಹ ಯೋಜನೆಗಳ ಮೂಲಕ ಕೃಷಿ ಕಾರ್ಮಿಕರ ಕೊರತೆ ನೀಗಿಸುವುದರ ಜೊತೆಗೆ ಉತ್ತಮ ಆದಾಯ ಪಡೆಯಬಹುದಾಗಿದೆ ಎಂದು ಚಲುವರಾಯಸ್ವಾಮಿ ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಅವರು, ರಾಜ್ಯ ಸರಕಾರವು ರೈತರು ವೈಜ್ಞಾನಿಕ ಪದ್ದತಿಯನ್ನು ಅಳವಡಿಸಿಕೊಳ್ಳುವ ಮೂಲಕ ದುಪ್ಪಟ್ಟು ಆದಾಯ ಪಡೆಯಲು ಅನುಕೂಲವಾಗುವಂತೆ ಸರಕಾರ ಅನೇಕ ಯೋಜನೆ ಹಾಗೂ ಸೌಲಭ್ಯಗಳನ್ನು ನೀಡುವುದರ ಮೂಲಕ ಕೃಷಿ ಕ್ಷೇತ್ರದಲ್ಲಿ ಬದಲಾವಣೆಯನ್ನು ತರಲಾಗಿದೆ ಎಂದು ತಿಳಿಸಿದರು.
ಬೇರೆ ರಾಷ್ಟ್ರಗಳಲ್ಲಿ ಕಡಿಮೆ ಭೂಮಿಯಲ್ಲಿ ಉತ್ತಮ ಇಳುವರಿ ಪಡೆಯುತ್ತಿದ್ದು, ಅದೇ ರೀತಿ ನಮ್ಮ ರೈತರ ಭೂಮಿಯಲ್ಲಿಯೂ ವೈಜ್ಞಾನಿಕ ಕೃಷಿ ಪದ್ಧತಿ ಅಳವಡಿಸಿಕೊಂಡು ಉತ್ತಮ ಆದಾಯ ಪಡೆಯುವುದರ ಮೂಲಕ ಸ್ವಾವಲಂಬಿಗಳಾಗಬೇಕು ಎನ್ನುವುದು ರಾಜ್ಯ ಸರಕಾರದ ಮಹತ್ವಾಕಾಂಕ್ಷೆಯಾಗಿದೆ. ಈ ನಿಟ್ಟಿನಲ್ಲಿ ಸರಕಾರವು ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದು ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಚಿವ ಜಾರಕಿಹೊಳಿ ಕರೆ ನೀಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ ಅವರು ಮಾತನಾಡಿ, ಕಾಲ ಬದಲಾದಂತೆ ರೈತರು ಕೂಡ ಕೃಷಿಯಲ್ಲಿ ಬದಲಾವಣೆ ತಂದುಕೊಳ್ಳಬೇಕು. ಈ ನಿಟ್ಟಿನಲ್ಲಿ ಸರಕಾರದಿಂದ ಅನೇಕ ಸೌಲಭ್ಯಗಳನ್ನು ನೀಡುತ್ತಿದ್ದು ರೈತರು ಇದರ ಸದುಪಯೋಗ ಪಡೆದು ಕೊಂಡು ಉತ್ತಮ ಇಳುವರಿ ಹಾಗೂ ಆದಾಯ ಪಡೆದುಕೊಳ್ಳಬೇಕು. ರೈತರಿಗೆ ಇರುವಂತಹ ಸೌಲಭ್ಯ ಹಾಗೂ ಯೋಜನೆಗಳ ಕುರಿತು ಹಳ್ಳಿ ಹಳ್ಳಿಗಳಿಗೆ ಭೇಟಿ ನೀಡಿ ಮಾಹಿತಿ ನೀಡುವ ಕಾರ್ಯ ಅಧಿಕಾರಿಗಳಿಂದ ಆಗಬೇಕು ಎಂದರು.
ಸಕ್ಕರೆ ಸಚಿವರಾದ ಶಿವಾನಂದ ಪಾಟೀಲ ಅವರು, ದೇಶದಲ್ಲಿ ನಾಲ್ಕು ನೂರಕ್ಕೂ ಹೆಚ್ಚು ಸಕ್ಕರೆ ಕಾರ್ಖಾನೆಗಳಿದ್ದು, ಅಂದಾಜು ಐದು ಕೋಟಿಗಿಂತ ಅಧಿಕ ಜನರು ಕಬ್ಬು ಬೆಳೆಯುತ್ತಿದ್ದಾರೆ. ರೈತರು ಬೆಳೆದ ಬೆಳೆಗೆ ಯೋಗ್ಯ ದರ ದೊರಕದಿದ್ದರೆ ಅನಾನುಕೂಲವಾಗುತ್ತದೆ. ಆದ್ದರಿಂದ ಉತ್ತಮ ದರ ಒದಗಿಸುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ ಎಂದರು.
ದೇಶದಲ್ಲಿ ಉತ್ತರಪ್ರದೇಶ, ಮಹಾರಾಷ್ಟ್ರ ಹಾಗೂ ಕರ್ನಾಟಕ ಈ ಮೂರು ರಾಜ್ಯಗಳು ಅತೀ ಹೆಚ್ಚು ಸಕ್ಕರೆ ಉತ್ಪಾದಿಸುತ್ತಿವೆ. ಇಲ್ಲಿ ಉತ್ಪಾದಿಸಲಾಗುವ ಸಕ್ಕರೆಗೆ ಆಂತರಿಕ ಮಾರುಕಟ್ಟೆಗಿಂತ ಹೊರ ರಾಷ್ಟ್ರಗಳಿಗೆ ಸಕ್ಕರೆ ರಫ್ತು ಮಾಡಿದಲ್ಲಿ ಉತ್ತಮ ಆದಾಯ ಪಡೆದುಕೊಳ್ಳಬಹುದಾಗಿದೆ ಎಂದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa