ಭ್ರಷ್ಟಾಚಾರದ ವಿರುದ್ಧ ಉಪಲೋಕಾಯುಕ್ತ ಬಿ. ವೀರಪ್ಪ ಗುಡುಗು
ಭ್ರಷ್ಟಾಚಾರದ ವಿರುದ್ಧ ಉಪಲೋಕಾಯುಕ್ತ ಬಿ. ವೀರಪ್ಪ ಗುಡುಗು
ಚಿತ್ರ : ಕೋಲಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಎರಡು ದಿನಗಳ ಉಪಲೋಕಾಯುಕ್ತ ಬಿ. ವೀರಪ್ಪ ಸಾರ್ವಜನಿಕ ದೂರು ವಿಚಾರಣೆ ಹಾಗೂ ಬಾಕಿ ದೂರು ವಿಲೇವಾರಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.


ಕೋಲಾರ, ೧೭ (ಹಿ.ಸ) :

ಆ್ಯಂಕರ್ : ಕೆಜಿಎಫ್ : ಭ್ರಷ್ಟಾಚಾರದಿಂದ ಭಾರತವು ಅಭಿವೃದ್ಧಿಯಲ್ಲಿ ಸೊರಗುತ್ತಿದೆ. ಅಧಿಕಾರಿಗಳು ಸಾರ್ವಜನಿಕರಿಂದ ಯಾವುದೇ ರೀತಿಯ ದೂರುಗಳು ಬಾರದಂತೆ ಕೆಲಸ ನಿರ್ವಹಿಸಬೇಕೆಂದು ನ್ಯಾಯಮೂರ್ತಿ ಹಾಗೂ ಉಪಲೋಕಾಯುಕ್ತ ಬಿ. ವೀರಪ್ಪ ಅವರು ಅಭಿಪ್ರಾಯ ಪಟ್ಟರು.

ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಎರಡು ದಿನಗಳ ಉಪಲೋಕಾಯುಕ್ತರಿಂದ ಸಾರ್ವಜನಿಕ ದೂರು ವಿಚಾರಣೆ ಹಾಗೂ ಬಾಕಿ ದೂರು ವಿಲೇವಾರಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

ಭ್ರಷ್ಟ ವ್ಯವಸ್ಥೆ ಹಾಗೂ ಅಧಿಕಾರಿಗಳ ವಿಳಂಬ ಧೋರಣೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ, ಕಾಲಮಿತಿಯಲ್ಲಿ ಸಾರ್ವಜನಿಕರು ಲೊಕಾಯುಕ್ತರಿಗೆ ನೀಡಲಾದ ದೂರುಗಳ ತ್ವರಿತ ವಿಲೇವಾರಿಗೆ ಕ್ರಮ ಕೈಗೊಳ್ಳಲು ಸೂಚನೆ ನೀಡಿದರು.

ಭಾರತಕ್ಕೆ ಸ್ವಾತಂತ್ರ್ಯ ಬಂದು ೭೯ ವರ್ಷಗಳಾಗಿದ್ದರೂ, ಭ್ರಷ್ಟಾಚಾರ ಎಂಬ ’ಭೂತ’ ಇಂದಿಗೂ ದೇಶವನ್ನು ಕಾಡುತ್ತಿದೆ ಎಂದು ಅವರು ವಿಷಾದಿಸಿದರು. ಈ ಪಿಡುಗನ್ನು ತೊಲಗಿಸಿದರೆ ಭಾರತ ಜಗತ್ತಿನಲ್ಲೇ ನಂಬರ್ ಒನ್ ದೇಶವಾಗಲಿದೆ ಎಂದು ಆಶಯ ವ್ಯಕ್ತಪಡಿಸಿದರು.

ಸರ್ಕಾರಿ ಅಧಿಕಾರಿಗಳು ಪಡೆಯುವ ಸಂಬಳ ಸಾರ್ವಜನಿಕರ ತೆರಿಗೆಯ ಹಣ ಎಂಬುದನ್ನು ಮರೆಯಬಾರದು. ಸರ್ಕಾರಿ ಕೆಲಸವೆಂದರೆ ಅದು ಸಾರ್ವಜನಿಕ ಸೇವೆಗೆ ಸಿಕ್ಕ ಪರವಾನಗಿಯೇ ಹೊರತು, ಲಂಚ ಪಡೆಯಲು ಸಿಕ್ಕ ಅವಕಾಶವಲ್ಲ ಎಂದು ಕಟುವಾಗಿ ಎಚ್ಚರಿಸಿದರು.

ಭ್ರಷ್ಟಾಚಾರಕ್ಕೆ ಆಸ್ಪದ ನೀಡದ ಪ್ರಾಮಾಣಿಕ ಅಧಿಕಾರಿಗಳಿಗೆ ತೊಂದರೆ ಎದುರಾದರೆ, ಲೋಕಾಯುಕ್ತ ಸಂಸ್ಥೆ ಅವರ ಬೆನ್ನಿಗೆ ನಿಲ್ಲಲಿದೆ ಎಂದು ಭರವಸೆ ನೀಡಿದರು.

ಚುನಾವಣೆ ಸಂದರ್ಭದಲ್ಲಿ ಹಣಕ್ಕೆ ಮತ ಮಾರಿಕೊಳ್ಳುವುದು ಇಂದಿಗೂ ಜೀವಂತವಾಗಿರುವ ’ಗುಲಾಮಗಿರಿ’ಯ ಸಂಕೇತವಾಗಿದೆ. ಇದರಿಂದಾಗಿ ಸಮರ್ಥ ನಾಯಕರು ಆಯ್ಕೆಯಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಮಾಹಿತಿ ಹಕ್ಕು ಕಾಯ್ದೆಯನ್ನು ಕೆಲವು ವ್ಯಕ್ತಿಗಳು ಪ್ರಾಮಾಣಿಕ ಅಧಿಕಾರಿಗಳನ್ನು ಬ್ಲ್ಯಾಕ್ಮೇಲ್ ಮಾಡಲು ಬಳಸಿಕೊಳ್ಳುತ್ತಿರುವುದು ಆತಂಕಕಾರಿ ವಿಷಯವಾಗಿದೆ ಎಂದು ಅವರು ಗಮನ ಸೆಳೆದರು.

ಲೋಕಾಯುಕ್ತಕ್ಕೆ ಬರುವ ಸುಮಾರು ೨೫,೦೦೦ ಪ್ರಕರಣಗಳಲ್ಲಿ ೭,೦೦೦ ದಿಂದ ೮,೦೦೦ ಪ್ರಕರಣಗಳು ಸುಳ್ಳು ದೂರುಗಳಾಗಿರುತ್ತವೆ. ಇಂತಹ ಸುಳ್ಳು ದೂರುದಾರರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಜನಸೇವೆಯೇ ಜನಾರ್ದನ ಸೇವೆ ಎಂದು ಸಾರಿದ ಅವರು, ಅಧಿಕಾರಿಗಳು ಆತ್ಮಸಾಕ್ಷಿಗೆ ಅನುಗುಣವಾಗಿ ಕೆಲಸ ಮಾಡಬೇಕು ಮತ್ತು ಸಾರ್ವಜನಿಕರ ದೂರುಗಳನ್ನು ವಿಳಂಬ ಮಾಡದೆ ವಿಲೇವಾರಿ ಮಾಡಬೇಕು ಎಂದು ತಾಕೀತು ಮಾಡಿದರು.

ಉಪಲೋಕಾಯುಕ್ತರು ೧೦ ಸುಮೋಟೊ ಪ್ರಕರಣ ಸೇರಿದಂತೆ ಒಟ್ಟು ೧೧೬ ಪ್ರಕರಣಗಳನ್ನು ಬುಧವಾರ ವಿಲೇವಾರಿ ಮಾಡಲಾಯಿತು. ಉಳಿದ ೧೨೮ ಪ್ರಕರಣಗಳನ್ನು ಗುರುವಾರ ವಿಲೇವಾರಿ ಮಾಡಲಾಗುವುದು ಎಂದು ಅವರು ತಿಳಿಸಿದರು.

ಈ ಸಭೆಯಲ್ಲಿ ಕೋಲಾರ ಜಿಲ್ಲಾಧಿಕಾರಿ ಡಾ. ಎಂ. ಆರ್. ರವಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ. ಪ್ರವೀಣ್ ಪಿ. ಬಾಗೇವಾಡಿ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ. ಬಿ. ನಿಖಿಲ್, ಜಿಲ್ಲಾ ಕಾನೂನು ಸೇವೆಗಳು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಆರ್. ನಟೇಶ್, ಜಿಲ್ಲಾ ಅರಣ್ಯ ಸಂರಕ್ಷಣಾ ಅಧಿಕಾರಿ ಸರಿನಾ ಸಿಕ್ಕಲಿಗಾರ್, ಉಪವಿಭಾಗಾಧಿಕಾರಿ ಡಾ|| ಮೈತ್ರಿ ಕೋಲಾರ ಲೋಕಾಯುಕ್ತ ವರಿಷ್ಟಾಧಿಕಾರಿ ಅಂತೋನಿ ಜಾನ್, ಎಲ್ಲಾ ತಾಲ್ಲೂಕು ತಹಶೀಲ್ದಾರ್ಗಳು, ಎಲ್ಲಾ ಇಲಾಖೆಯ ಹಿರಿಯ ಅಧಿಕಾರಿಗಳು, ದೂರುದಾರರು, ಸಾರ್ವಜನಿಕರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಚಿತ್ರ : ಕೋಲಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಎರಡು ದಿನಗಳ ಉಪಲೋಕಾಯುಕ್ತ ಬಿ. ವೀರಪ್ಪ ಸಾರ್ವಜನಿಕ ದೂರು ವಿಚಾರಣೆ ಹಾಗೂ ಬಾಕಿ ದೂರು ವಿಲೇವಾರಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande