
ಕೋಲಾರ, ೧೭ (ಹಿ.ಸ) :
ಆ್ಯಂಕರ್ : ಕೆಜಿಎಫ್ : ೪೪ನೇ ರಾಜ್ಯ ಮಟ್ಟದ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್ ಷಿಪ್-೨೦೨೫ ಕ್ರೀಡಾಕೂಟವನ್ನು, ಕೋಲಾರ ನಗರದಲ್ಲಿ ಡಿ.೨೧, ೨೨ರಂದು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಮಾಸ್ಟರ್ಸ್ ಅಥ್ಲೆಟಿಕ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ವಿ.ಕೃಷ್ಣಾರೆಡ್ಡಿ ಹೇಳಿದರು.
ಕೋಲಾರ ನಗರದಲ್ಲಿ ಜಿಲ್ಲಾ ಮಾಸ್ಟರ್ ಅಥ್ಲೆಟಿಕ್ ಅಸೋಸಿಯೇಷನ್ ವತಿಯಿಂದ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಸೋಸಿಯೇಷನ್ನಿಂದ ಇದೇ ಮೊದಲ ಭಾರಿಗೆ ಕ್ರೀಡಾ ನಡೆಯುತ್ತಿದ್ದು, ಒಟ್ಟು ೨೫ ಜಿಲ್ಲೆಗಳಿಂದ ೭೫೦ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ ಎಂದರು.
ಮಾಸ್ಟರ್ಸ್ ಅಥ್ಲೇಟಿಕ್ಸ್ ಅಸೋಸಿಯೇಷನ್ ಅ ಕರ್ನಾಟಕ ಮತ್ತು ಕೋಲಾರ ಜಿಲ್ಲಾ ಮಾಸ್ಟರ್ಸ್ ಅಥ್ಲೇಟಿಕ್ಸ್ ಅಸೋಸಿಯೇಷನ್ ಸಂಯುಕ್ತಶ್ರಯದಲ್ಲಿ ಇಲ್ಲಿನ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ೨ ದಿನ ನಡೆಯಲಿದ್ದು, ಡಿ.೨೧ರಂದು ಉದ್ಘಾಟನಾ ಸಮಾರಂಭ ಹಮ್ಮಿಕೊಳ್ಳಲಾಗಿದ್ದು, ಶಾಸಕ ಕೊತ್ತೂರು ಜಿ.ಮಂಜುನಾಥ್ ಉದ್ಘಾಟಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್, ಸಂಸದ ಎಂ.ಮಲ್ಲೇಶ್ ಬಾಬು, ಡಿಸಿಪಿ ಡಿ.ದೇವರಾಜ್, ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದರು.
ಸ್ಪರ್ಧೆಗಳಲ್ಲಿ ಭಾಗವಹಿಸಲು ಬರುವ ಕ್ರೀಡಾಪಟುಗಳಿಗೆ ಪುರುಷರಿಗೆ ವೆಂಕಟೇಶ್ವರ ಕಲ್ಯಾಣ ಮಂಟಪ, ಮಹಿಳೆಯರಿಗೆ ಪೊಲೀಸ್ ಭವನ ಹಾಗೂ ಗಣ್ಯರಿಗೆ ಪ್ರವಾಸಿ ಮಂದಿರದಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ. ಈ ಕ್ರೀಡಾ ಕೂಟದಲ್ಲೂ ನಮ್ಮ ಜಿಲ್ಲೆಯೆ ಮೊದಲ ಸ್ಥಾನಗಳಿಸುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಕ್ರಮಕ್ಕೆ ಸುಮಾರು ೨೫ ಲಕ್ಷ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದ್ದು, ಸಾಕಷ್ಟು ಮಂದಿ ದಾನಿಗಳು ಮುಂದೆ ಬಂದು ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಕ್ರೀಡಾಕೂಟ ಯಶಸ್ಸಿಗಾಗಿ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಸಹಕಾರ ನೀಡಿದೆ ಎಂದು ಮಾಹಿತಿ ನೀಡಿದರು.
೨೦೧೩ರತನಕ ಜಿಲ್ಲೆಯಲ್ಲಿ ಅಸೋಸಿಯಯೇಷನ್ ಇರಲಿಲ್ಲ, ಆದರೂ ಸಹ ಅನೇಕ ಕ್ರೀಡಾಪಟುಗಳು ಕ್ರೀಡೆಗಳಲ್ಲಿ ಭಾಗವಹಿಸಿ ಬರುತ್ತಿದ್ದರು. ವಿ.ಮಾರಪ್ಪ, ನಾರಾಯಣಸ್ವಾಮಿ ಅವರ ಬೇರೆ ಜಿಲ್ಲೆಗಳಲ್ಲಿ ಸಂಘ ಇರುವುದನ್ನು ಮನಗಂಡು ಕೋಲಾರದಲ್ಲೂ ಸ್ಥಾಪನೆ ಮಾಡಲು ಮುಂದಾದಾಗ ಪದಾಧಿಕಾರಿಗಳನ್ನು ಆಯ್ಕೆ ಮಾಡಿಕೊಂಡು ಸಂಘ ರಚನೆ ಮಾಡಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಸಂಘ ಸ್ಥಾಪನೆಯಾಗಿ ೮ ವರ್ಷಗಳು ಕಳೆದಿದ್ದು ಕ್ರೀಡಾ ಸ್ಪರ್ಧೆಗಳನ್ನು ಆಯೋಜನೆ ಮಾಡಿಕೊಂಡು ಬರಲಾಗಿದೆ. ಸುಮಾರು ೨೦೦ ಮಂದಿ ಸದಸ್ಯರು ನೋಂದಣಿ ಪಡೆದಿದ್ದಾರೆ.
ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುವ ಕೆಲಸ ಸಂಘ ಮಾಡುತ್ತಿದ್ದು, ವಿಜೇತರಾಗಿ ಬಂದವರಿಗೆ ಅಭಿನಂಧಿಸಿ ಉತ್ತೇಜನ ನೀಡಲಾಗುತ್ತಿದೆ ಎಂದು ತಿಳಿಸಿದರು.
ಪ್ರತ್ಯೇಕ ಕಚೇರಿ ನಿಮಾರ್ಣ ಮಾಡುವ ಗುರಿಹೊಂದಿದ್ದೇವೆ. ಜಿಲ್ಲೆಯೂ ಕ್ರೀಡೆ ಸೇರಿದಂತೆ ವಿವಿಧ ರಂಗಗಳಲ್ಲಿ ಮುಂಚೂಣಿಯಲ್ಲಿದೆ. ವಿಶ್ವ ಮಟ್ಟದಲ್ಲಿ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದವರು ಸರ್.ಎಂ.ವಿಶ್ವೇಶ್ವರಯ್ಯ ಅವರು ಮೊದಲಿಗರು. ಕೆಸಿ ರೆಡ್ಡಿ ರಾಜ್ಯದ ಪ್ರಥಮ ಮುಖ್ಯಮಂತ್ರಿಯಾದರು. ಮಾಸ್ತಿ ಅಯ್ಯಾಂಗಾರ್, ಡಿವಿಜಿ ರಚಿಸಿದ ಮಂಕುತಿಮ್ಮನ ಕಗ್ಗದ ಮೂಲಕ ಗುರುತಿಸಿದ್ದಾರೆ. ಕ್ರೀಡೆಯಲ್ಲಿ ಮಾರಪ್ಪ ಸೇರಿದಂತೆ ಅನೇಕರು ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ ಎಂದರು.
ಹೊಸಕೋಟೆಯಲ್ಲಿ ಇಚೆಗೆ ನಡೆದ ರಾಜ್ಯಮಟ್ಟದ ಕ್ರೀಡೆಯಲ್ಲಿ ಜಿಲೆಯ ಕ್ರೀಡಾಪಟುಗಳು ೧೩೦, ಮೈಸೂರಿನಲ್ಲಿ ಎರಡನೇ ಸ್ಥಾನದಲ್ಲಿ ಇದ್ದೇವೆ. ಮಾರಪ್ಪ ಅವರಿಗೆ ಸರ್ಕಾರದಿಂದ ನಿವೇಶನ ಸೇರಿದಂತೆ ಸಾಧಕ ಪ್ರಶಸ್ತಿಗಳನ್ನು ಕಲ್ಪಿಸಬೇಕು ಎಂದು ಒತ್ತಡ ಹೇರಲಾಗುವುದು. ಜತೆಗೆ ಸ್ವಂತ ಕಟ್ಟಡ ನಿರ್ಮಾಣ ಮಾಡಿದಾಗ ಅದಕ್ಕೆ ಮಾರಪ್ಪ ಕ್ರೀಡಾಭವನ ಎಂದು ನಾಮಕಾರಣ ಮಾಡುವ ಮೂಲಕ ಮತ್ತಷ್ಟು ಕ್ರೀಡಾಪಟುಗಳನ್ನು ಸೃಷ್ಟಿಸಲಾಗುವುದು ಎಂದು ಹೇಳಿದರು.
ಹಿರಿಯ ಕ್ರೀಡಾಪಟು ವಿ.ಮಾರಪ್ಪ ಮಾತನಾಡಿ, ಒಟ್ಟು ೨೫ ಜಿಲ್ಲೆಗಳಿಂದ ೮೦೦ ಮಂದಿ ಪಾಲ್ಗೊಳ್ಳಲಿದ್ದು ಜಿಲ್ಲೆಯಿಂದ ೧೫೦ ಮಂದಿ ಭಾಗಿಯಾಗಲಿದ್ದಾರೆ. ಇಲ್ಲಿ ವಿಜೇತರಾದವರು ಕೇರಳದಲ್ಲಿ ಫೆಬ್ರವರಿಯಲ್ಲಿ ನಡೆಯುವ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಲಿದ್ದಾರೆ ಎಂದರು.
ಸ್ಪರ್ಧೆಯಲ್ಲಿ ೧೦೦ ಮಿ, ೨೦೦ ಮಿ, ೪೦೦ ಮಿ, ೮೦೦ ಮಿ, ಹರ್ಡಲ್ಸ್, ಐಜಂಪ್, ಶಾಟ್ ಪುಟ್, ಜಾವಲಿನ್, ಡಿಸ್ಕಸ್ ಥ್ರೋ, ಟ್ರಿಪಲ್ ಜಂಪ್ ಕ್ರೀಡೆ ನಡೆಯಲಿದ್ದು, ೩೦ರಿಂದ ೯೫ ವರ್ಷದ ವಯೋಮಾನದವರು ಪಾಲ್ಗೊಳ್ಳಬಹುದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಕೆ.ಚಂದ್ರಶೇಖರ್, ಅಸೋಸಿಯೇಷನ್ನ ಜಂಟಿ ಕಾರ್ಯದರ್ಶಿ ಪಿ.ಆಂಜನೇಯರೆಡ್ಡಿ, ಖಜಾಂಜಿ ಕೆ.ಟಿ.ಸುರೇಶ್ ಬಾಬು, ಉಪಾಧ್ಯಕ್ಷರುಗಳಾದ ಗೋಪಾಲಕೃಷ್ಣೇಗೌಡ, ಕಲ್ಲಂಡೂರು ಲೋಕೇಶ್, ಎಂ.ವಿ.ರಘು(ಚಿಟ್ಟಿ) ಡಾ.ಪಿ.ರಾಜ್ಕುಮಾರ್, ಗೌಸ್ ಖಾನ್, ಸಹ ಕಾರ್ಯದರ್ಶಿ ಆರ್.ರವಿ, ಮಹಿಳಾ ಪ್ರತಿನಿಧಿಗಳಾದ ಮಹಾದೇವಿ ಎಸ್.ಪಾಟೀಲ್, ಹೆಚ್. ಶಾಂತಮ್ಮ ಮತ್ತಿತರರು ಹಾಜರಿದ್ದರು.
ಚಿತ್ರ : ಕೋಲಾರ ನಗರದಲ್ಲಿ ಜಿಲ್ಲಾ ಮಾಸ್ಟರ್ ಅಥ್ಲೆಟಿಕ್ ಅಸೋಸಿಯೇಷನ್ ವತಿಯಿಂದ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಮಾಸ್ಟರ್ಸ್ ಅಥ್ಲೆಟಿಕ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ವಿ.ಕೃಷ್ಣಾರೆಡ್ಡಿ ಮಾತನಾಡಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್