
ನವದೆಹಲಿ, 15 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಚೆನ್ನೈನಲ್ಲಿ ನಡೆದ SDAT ಸ್ಕ್ವಾಷ್ ವಿಶ್ವಕಪ್‌ನಲ್ಲಿ ಭಾರತೀಯ ಸ್ಕ್ವಾಷ್ ತಂಡ ಮೊದಲ ಬಾರಿಗೆ ಚಾಂಪಿಯನ್ ಪಟ್ಟವನ್ನು ಗೆದ್ದುಕೊಂಡಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅಭಿನಂದನೆ ಸಲ್ಲಿಸಿದ್ದಾರೆ.
ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಭಾರತ, ಹಾಂಗ್ ಕಾಂಗ್ ತಂಡವನ್ನು 3–0 ಅಂತರದಿಂದ ಮಣಿಸಿ ಇತಿಹಾಸ ನಿರ್ಮಿಸಿತು. ಈ ಗೆಲುವಿನೊಂದಿಗೆ ಭಾರತ ಮೊದಲ ಬಾರಿಗೆ ಸ್ಕ್ವಾಷ್ ವಿಶ್ವಕಪ್ ಕಿರೀಟವನ್ನು ತನ್ನದಾಗಿಸಿಕೊಂಡಿದೆ.
ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ ನಲ್ಲಿ ಪ್ರತಿಕ್ರಿಯಿಸಿರುವ ಪ್ರಧಾನಿ ನರೇಂದ್ರ ಮೋದಿ, “ಮೊದಲ ಬಾರಿಗೆ ವಿಶ್ವಕಪ್ ಗೆದ್ದ ಭಾರತೀಯ ಸ್ಕ್ವಾಷ್ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು. ಜೋಶ್ನಾ ಚಿನ್ನಪ್ಪ, ಅಭಯ್ ಸಿಂಗ್, ವೇಲವನ್ ಸೆಂಥಿಲ್ ಕುಮಾರ್ ಮತ್ತು ಅನಾಹತ್ ಸಿಂಗ್ ಅವರು ಅಪಾರ ಸಮರ್ಪಣೆ ಮತ್ತು ದೃಢಸಂಕಲ್ಪವನ್ನು ಪ್ರದರ್ಶಿಸಿದ್ದಾರೆ. ಈ ಸಾಧನೆ ಇಡೀ ರಾಷ್ಟ್ರವನ್ನು ಹೆಮ್ಮೆಪಡುವಂತೆ ಮಾಡುತ್ತದೆ ಹಾಗೂ ಯುವಕರಲ್ಲಿ ಸ್ಕ್ವಾಷ್ ಕ್ರೀಡೆಗೆ ಉತ್ತೇಜನ ನೀಡುತ್ತದೆ” ಎಂದು ಪ್ರಶಂಸಿಸಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ತಂಡವನ್ನು ಅಭಿನಂದಿಸಿ,
“ಮೊದಲ ಬಾರಿಗೆ ಸ್ಕ್ವಾಷ್ ವಿಶ್ವಕಪ್ ಗೆದ್ದು ಭಾರತೀಯ ತಂಡ ದೇಶಕ್ಕೆ ಐತಿಹಾಸಿಕ ಸಾಧನೆಯನ್ನು ತಂದುಕೊಟ್ಟಿದೆ. ಅತ್ಯಂತ ಕಠಿಣ ಎದುರಾಳಿಗಳನ್ನು ಸೋಲಿಸುವಲ್ಲಿ ತೋರಿದ ಅದಮ್ಯ ಕ್ರೀಡಾ ಮನೋಭಾವ ಮತ್ತು ಉನ್ನತ ಕೌಶಲ್ಯ ಮುಂದಿನ ಪೀಳಿಗೆಯ ಕ್ರೀಡಾಪಟುಗಳಿಗೆ ಪ್ರೇರಣೆಯಾಗಲಿದೆ” ಎಂದು ಹೇಳಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa