
ನವದೆಹಲಿ, 15 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ವಾಯು ಮಾಲಿನ್ಯದಿಂದ ಉಂಟಾಗುವ ಸಾವುಗಳು ಮತ್ತು ಅನಾರೋಗ್ಯದ ಕುರಿತು ಕೇಂದ್ರ ಸರ್ಕಾರ ರಾಜ್ಯಸಭೆಯಲ್ಲಿ ನೀಡಿರುವ ಹೇಳಿಕೆ ಆಘಾತಕಾರಿ ಮತ್ತು ಸಂವೇದನಾಶೀಲವಲ್ಲದದ್ದು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ತೀವ್ರವಾಗಿ ಟೀಕಿಸಿದ್ದಾರೆ.
ಈ ಕುರಿತು ರಾಜ್ಯ ಸಭೆಯಲ್ಲಿ ಪತ್ರವೊಂದನ್ನು ಬಿಡುಗಡೆ ಮಾಡಿದ ಅವರು, ಲಭ್ಯವಿರುವ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ವೈಜ್ಞಾನಿಕ ಪುರಾವೆಗಳು ಸರ್ಕಾರದ ಹೇಳಿಕೆಯನ್ನು ಸಂಪೂರ್ಣವಾಗಿ ನಿರಾಕರಿಸುತ್ತವೆ ಎಂದು ಹೇಳಿದ್ದಾರೆ.
ಡಿಸೆಂಬರ್ 9 ರಂದು ರಾಜ್ಯ ಸಭೆಯಲ್ಲಿ ಕೇಂದ್ರ ಸರ್ಕಾರ, “ವಾಯು ಮಾಲಿನ್ಯವೇ ಸಾವು ಅಥವಾ ಅನಾರೋಗ್ಯಕ್ಕೆ ಏಕೈಕ ಕಾರಣ ಎಂದು ಸಾಬೀತುಪಡಿಸುವ ನಿರ್ದಿಷ್ಟ ದತ್ತಾಂಶ ದೇಶದಲ್ಲಿ ಲಭ್ಯವಿಲ್ಲ” ಎಂದು ಹೇಳಿಕೊಂಡಿದೆ. ಇದು ಗಂಭೀರ ಕಳವಳಕಾರಿ ವಿಷಯವಾಗಿದ್ದು, ಇದೇ ರೀತಿಯ ಹೇಳಿಕೆಯನ್ನು ಜುಲೈ 29, 2024 ರಲ್ಲಿಯೂ ಸರ್ಕಾರ ನೀಡಿತ್ತು ಎಂದು ಜೈರಾಮ್ ರಮೇಶ್ ಗಮನ ಸೆಳೆದರು.
ಸಾರ್ವಜನಿಕವಾಗಿ ಲಭ್ಯವಿರುವ ವೈಜ್ಞಾನಿಕ ಅಧ್ಯಯನಗಳನ್ನು ಉಲ್ಲೇಖಿಸಿದ ಅವರು, ದಿ ಲ್ಯಾನ್ಸೆಟ್ನಲ್ಲಿ ಜುಲೈ 2024ರಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಭಾರತದಲ್ಲಿನ ಒಟ್ಟು ಸಾವುಗಳಲ್ಲಿ ಶೇಕಡಾ 7.2 ರಷ್ಟು ವಾಯು ಮಾಲಿನ್ಯಕ್ಕೆ ಸಂಬಂಧಿಸಿದೆ. ಅಲ್ಲದೆ, ಕೇವಲ 10 ನಗರಗಳಲ್ಲಿ ಪ್ರತಿ ವರ್ಷ ಸುಮಾರು 34,000 ಸಾವುಗಳು ವಾಯು ಮಾಲಿನ್ಯದಿಂದ ಸಂಭವಿಸುತ್ತಿವೆ ಎಂದು ತಿಳಿಸಿದ್ದಾರೆ.
ಮುಂಬೈ ಮೂಲದ ಅಂತಾರಾಷ್ಟ್ರೀಯ ಜನಸಂಖ್ಯಾ ವಿಜ್ಞಾನ ಸಂಸ್ಥೆಯ ಅಧ್ಯಯನವನ್ನು ಉಲ್ಲೇಖಿಸಿ, ರಾಷ್ಟ್ರೀಯ ಸುತ್ತುವರಿದ ವಾಯು ಗುಣಮಟ್ಟದ ಮಾನದಂಡಗಳನ್ನು ಮೀರಿರುವ ಜಿಲ್ಲೆಗಳಲ್ಲಿ ವಾಸಿಸುವ ವಯಸ್ಕರಲ್ಲಿ ಅಕಾಲಿಕ ಮರಣದ ಅಪಾಯ ಶೇಕಡಾ 13 ರಷ್ಟು ಹೆಚ್ಚಾಗುತ್ತದೆ, ಮಕ್ಕಳಲ್ಲಿ ಮರಣ ಪ್ರಮಾಣವು ಬಹುತೇಕ ದ್ವಿಗುಣಗೊಳ್ಳುತ್ತದೆ ಎಂದು ಅವರು ಹೇಳಿದರು.
ದಿ ಲ್ಯಾನ್ಸೆಟ್ ಪ್ಲಾನೆಟರಿ ಹೆಲ್ತ್ ಹಾಗೂ ವಾಷಿಂಗ್ಟನ್ ವಿಶ್ವವಿದ್ಯಾಲಯದ ವರದಿಗಳ ಪ್ರಕಾರ, ಭಾರತದಲ್ಲಿ ಪ್ರತಿವರ್ಷ 15 ರಿಂದ 20 ಲಕ್ಷ ಸಾವುಗಳು ವಾಯು ಮಾಲಿನ್ಯಕ್ಕೆ ಸಂಬಂಧಿಸಿವೆ ಮತ್ತು ಪರಿಸ್ಥಿತಿ ದಿನೇದಿನೇ ಗಂಭೀರವಾಗುತ್ತಿದೆ ಎಂದು ಜೈರಾಮ್ ರಮೇಶ್ ಎಚ್ಚರಿಸಿದರು.
2009ರಲ್ಲಿ ನಿಗದಿಪಡಿಸಿದ ವಾಯು ಗುಣಮಟ್ಟದ ಮಾನದಂಡಗಳನ್ನು ತುರ್ತಾಗಿ ನವೀಕರಿಸಿ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದ ಅವರು, 2017ರಲ್ಲಿ ಆರಂಭಿಸಲಾದ ರಾಷ್ಟ್ರೀಯ ಶುದ್ಧ ಗಾಳಿ ಕಾರ್ಯಕ್ರಮ (NCAP) ಮತ್ತು ಶ್ರೇಣೀಕೃತ ಪ್ರತಿಕ್ರಿಯೆ ಕ್ರಿಯಾ ಯೋಜನೆ (GRAP)ಗಳಿಗೆ ಮೂಲಭೂತ ಹಾಗೂ ಪರಿಣಾಮಕಾರಿ ಸುಧಾರಣೆಗಳನ್ನು ತಕ್ಷಣ ಕೈಗೊಳ್ಳಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa