ಮೂರು ದೇಶಗಳಿಗೆ ಪ್ರಧಾನಿ ಮೋದಿ ಪ್ರವಾಸ
ನವದೆಹಲಿ, 15 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಭಾರತದ ದ್ವಿಪಕ್ಷೀಯ ಮತ್ತು ಜಾಗತಿಕ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಜೋರ್ಡಾನ್, ಇಥಿಯೋಪಿಯಾ ಹಾಗೂ ಓಮನ್ ದೇಶಗಳಿಗೆ ಮೂರು ರಾಷ್ಟ್ರಗಳ ಅಧಿಕೃತ ಭೇಟಿಗೆ ಇಂದು ಹೊರಟಿದ್ದಾರೆ. ನಿರ್ಗಮನ ಪೂರ್ವ ಹೇಳ
Pm tour


ನವದೆಹಲಿ, 15 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಭಾರತದ ದ್ವಿಪಕ್ಷೀಯ ಮತ್ತು ಜಾಗತಿಕ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಜೋರ್ಡಾನ್, ಇಥಿಯೋಪಿಯಾ ಹಾಗೂ ಓಮನ್ ದೇಶಗಳಿಗೆ ಮೂರು ರಾಷ್ಟ್ರಗಳ ಅಧಿಕೃತ ಭೇಟಿಗೆ ಇಂದು ಹೊರಟಿದ್ದಾರೆ.

ನಿರ್ಗಮನ ಪೂರ್ವ ಹೇಳಿಕೆಯಲ್ಲಿ, ಈ ಮೂರು ರಾಷ್ಟ್ರಗಳು ಭಾರತದೊಂದಿಗೆ ಪ್ರಾಚೀನ ನಾಗರಿಕತೆಯ ಬಾಂಧವ್ಯ ಮತ್ತು ಸಮಕಾಲೀನ ಪಾಲುದಾರಿಕೆಯನ್ನು ಹಂಚಿಕೊಂಡಿವೆ ಎಂದು ಪ್ರಧಾನಿ ತಿಳಿಸಿದರು.

ಈ ಪ್ರವಾಸವು ರಾಜತಾಂತ್ರಿಕ, ವ್ಯಾಪಾರ, ಆರ್ಥಿಕ ಹಾಗೂ ಜನಸಂಪರ್ಕ ಸಂಬಂಧಗಳನ್ನು ಹೊಸ ಹಂತಕ್ಕೆ ಕೊಂಡೊಯ್ಯಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಧಾನಿಯವರ ಪ್ರವಾಸದ ಮೊದಲ ಹಂತವಾಗಿ ಅವರು ಜೋರ್ಡಾನ್ ರಾಜಧಾನಿ ಅಮ್ಮನ್‌ಗೆ ಭೇಟಿ ನೀಡಲಿದ್ದಾರೆ. ರಾಜ ಅಬ್ದುಲ್ಲಾ II ಇಬ್ನ್ ಅಲ್ ಹುಸೇನ್ ಅವರ ಆಹ್ವಾನದ ಮೇರೆಗೆ ನಡೆಯುವ ಈ ಭೇಟಿ, ಭಾರತ–ಜೋರ್ಡಾನ್ ರಾಜತಾಂತ್ರಿಕ ಸಂಬಂಧಗಳ 75ನೇ ವಾರ್ಷಿಕೋತ್ಸವದ ಸ್ಮರಣಾರ್ಥ ಮಹತ್ವ ಪಡೆದುಕೊಂಡಿದೆ. ಈ ವೇಳೆ ಪ್ರಧಾನಿ ರಾಜ ಅಬ್ದುಲ್ಲಾ II, ಪ್ರಧಾನಿ ಜಾಫರ್ ಹಸನ್ ಹಾಗೂ ಕ್ರೌನ್ ಪ್ರಿನ್ಸ್ ಅಲ್ ಹುಸೇನ್ ಬಿನ್ ಅಬ್ದುಲ್ಲಾ II ಅವರೊಂದಿಗೆ ಮಾತುಕತೆ ನಡೆಸಲಿದ್ದು, ಅಲ್ಲಿನ ಭಾರತೀಯ ಸಮುದಾಯದೊಂದಿಗೆ ಸಂವಾದ ನಡೆಸಲಿದ್ದಾರೆ.

ನಂತರ ಪ್ರಧಾನಿ ಇಥಿಯೋಪಿಯಾಗೆ ತೆರಳಲಿದ್ದು, ಇದು ಅವರ ಮೊದಲ ಅಧಿಕೃತ ಇಥಿಯೋಪಿಯಾ ಭೇಟಿ ಆಗಿದೆ. ಅಡಿಸ್ ಅಬಾಬಾದಲ್ಲಿರುವ ಆಫ್ರಿಕನ್

ಒಕ್ಕೂಟದ ಪ್ರಧಾನ ಕಚೇರಿಯ ಹಿನ್ನೆಲೆಯಲ್ಲಿ ಈ ಭೇಟಿ ವಿಶೇಷ ಮಹತ್ವ ಹೊಂದಿದೆ. ಇಥಿಯೋಪಿಯನ್ ಪ್ರಧಾನಿ ಡಾ. ಅಬಿಯ್ ಅಹ್ಮದ್ ಅಲಿ ಅವರೊಂದಿಗೆ ದ್ವಿಪಕ್ಷೀಯ ಸಂಬಂಧಗಳ ಕುರಿತು ವ್ಯಾಪಕ ಚರ್ಚೆ ನಡೆಸಲಿರುವ ಅವರು, ಇಥಿಯೋಪಿಯನ್ ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಈ ವೇಳೆ ಭಾರತದ ಪ್ರಜಾಪ್ರಭುತ್ವ ಪರಂಪರೆ ಮತ್ತು ಜಾಗತಿಕ ದಕ್ಷಿಣದಲ್ಲಿ ಭಾರತ–ಇಥಿಯೋಪಿಯಾ ಪಾಲುದಾರಿಕೆಯ ಪಾತ್ರದ ಕುರಿತು ಅವರು ಮಾತನಾಡಲಿದ್ದಾರೆ.

ಪ್ರವಾಸದ ಅಂತಿಮ ಹಂತವಾಗಿ ಪ್ರಧಾನಿ ಓಮನ್‌ಗೆ ಭೇಟಿ ನೀಡಲಿದ್ದಾರೆ. ಈ ಭೇಟಿ ಭಾರತ–ಓಮನ್ ರಾಜತಾಂತ್ರಿಕ ಸಂಬಂಧಗಳ 70ನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ನಡೆಯಲಿದೆ.

ಮಸ್ಕತ್‌ನಲ್ಲಿ ಅವರು ಓಮನ್ ಸುಲ್ತಾನರನ್ನು ಭೇಟಿ ಮಾಡಿ, ಕಾರ್ಯತಂತ್ರದ ಪಾಲುದಾರಿಕೆ, ವ್ಯಾಪಾರ ಹಾಗೂ ಆರ್ಥಿಕ ಸಹಕಾರ ವಿಸ್ತರಣೆಯ ಕುರಿತು ಚರ್ಚಿಸಲಿದ್ದಾರೆ. ಅಲ್ಲಿನ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಭಾಷಣ ಮಾಡುವುದೂ ಕಾರ್ಯಕ್ರಮದಲ್ಲಿದೆ.

ಈ ಮೂರು ರಾಷ್ಟ್ರಗಳ ಭೇಟಿಯು ಭಾರತದ ದ್ವಿಪಕ್ಷೀಯ ಸಂಬಂಧಗಳನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವುದರೊಂದಿಗೆ, ಜಾಗತಿಕ ವೇದಿಕೆಯಲ್ಲಿ ಭಾರತದ ಪಾತ್ರವನ್ನು ಮತ್ತಷ್ಟು ದೃಢಪಡಿಸಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande