
ನವದೆಹಲಿ, 15 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ದೆಹಲಿಯ ರಾಮಲೀಲಾ ಮೈದಾನದಲ್ಲಿ ಭಾನುವಾರ ನಡೆದ ಕಾಂಗ್ರೆಸ್‌ನ “ವೋಟ್ ಚೋರ್, ಗಡ್ಡಿ ಛೋಡ್” ರ‍್ಯಾಲಿಯ ವೇಳೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆಕ್ಷೇಪಾರ್ಹ ಘೋಷಣೆಗಳು ಕೇಳಿ ಬಂದಿರುವುದಕ್ಕೆ ಸಂಬಂಧಿಸಿ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕ ಸಭೆಯ ಪ್ರತಿ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಸಂಸತ್ತಿನಲ್ಲಿ ದೇಶಕ್ಕೆ ಕ್ಷಮೆಯಾಚಿಸಬೇಕು ಎಂದು ಅವರು ಒತ್ತಾಯಿಸಿದರು.
ನವದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಿಜಿಜು, ಖರ್ಗೆ ಅವರು ರಾಜ್ಯ ಸಭೆಯ ಪ್ರತಿ ಪಕ್ಷದ ನಾಯಕ ಮತ್ತು ರಾಹುಲ್ ಗಾಂಧಿ ಅವರು ಲೋಕ ಸಭೆಯ ಪ್ರತಿ ಪಕ್ಷದ ನಾಯಕರಾಗಿದ್ದಾರೆ. ಆದ್ದರಿಂದ ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತು ಸಂಸದೀಯ ಶಿಷ್ಟಾಚಾರವನ್ನು ಕಾಪಾಡುವುದು ಇವರಿಬ್ಬರ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದ ಸಿದ್ಧಾಂತ ಅಥವಾ ರಾಜಕೀಯ ನಿಲುವಿನ ಬಗ್ಗೆ ತಮಗೆ ಯಾವುದೇ ಆಕ್ಷೇಪವಿಲ್ಲ ಎಂದು ಸ್ಪಷ್ಟಪಡಿಸಿದ ರಿಜಿಜು, ಆದರೆ ರ‍್ಯಾಲಿಯಲ್ಲಿ ಪ್ರಧಾನಿಯವರ ವಿರುದ್ಧ ಬಳಸಲಾದ ಭಾಷೆ ಭಾರತೀಯ ರಾಜಕೀಯ ಇತಿಹಾಸದಲ್ಲೇ ಅತ್ಯಂತ ದುರದೃಷ್ಟಕರ ಎಂದು ಟೀಕಿಸಿದರು. ರಾಜಕೀಯ ಪಕ್ಷಗಳು ಪರಸ್ಪರ ಪ್ರತಿಸ್ಪರ್ಧಿಗಳಾಗಿರಬಹುದು, ಆದರೆ ಶತ್ರುಗಳಲ್ಲ ಎಂದು ಅವರು ಹೇಳಿದರು.
2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತ ನಿರ್ಮಿಸುವ ಗುರಿ ಎಲ್ಲರಿಗೂ ಸಾಮಾನ್ಯವಾಗಿರಬೇಕು ಎಂದು ತಿಳಿಸಿದ ರಿಜಿಜು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಸದಾ ಪ್ರತಿ ಪಕ್ಷಗಳನ್ನು ರಾಜಕೀಯ ಪ್ರತಿಸ್ಪರ್ಧಿಗಳಂತೆ ಮಾತ್ರ ನೋಡಬೇಕೆಂದು ಬೋಧಿಸುತ್ತಾರೆ ಎಂದರು. ಆದರೆ ಪ್ರಧಾನಿಯನ್ನು ಕೊಲ್ಲುವುದು ಅಥವಾ ಸಮಾಧಿ ಅಗೆಯುವುದು ಎಂಬಂತಹ ಘೋಷಣೆಗಳು ಪ್ರಜಾಪ್ರಭುತ್ವಕ್ಕೆ ತೀವ್ರ ಹಾನಿಕಾರಕವಾಗಿವೆ ಎಂದು ಅವರು ಎಚ್ಚರಿಸಿದರು.
ರಾಜಕೀಯ ಭಾಷಣಕ್ಕೂ ಮಿತಿಗಳಿರಬೇಕು ಎಂದು ಹೇಳಿದ ರಿಜಿಜು, ಬಿಜೆಪಿ ಹಾಗೂ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟವು ಯಾರ ವಿರುದ್ಧವೂ ಇಂತಹ ಹಿಂಸಾತ್ಮಕ ಅಥವಾ ಅವಮಾನಕಾರಿ ಭಾಷೆಯನ್ನು ಬಳಸಿಲ್ಲ ಎಂದು ಸ್ಪಷ್ಟಪಡಿಸಿದರು. ಭಿನ್ನಾಭಿಪ್ರಾಯಗಳು ಇರಬಹುದು, ಆದರೆ ಪ್ರಜಾಸತ್ತಾತ್ಮಕ ಶಿಷ್ಟಾಚಾರವನ್ನು ಎಲ್ಲರೂ ಪಾಲಿಸಬೇಕು ಎಂದರು.
ಸಂಸತ್ತು ಅಧಿವೇಶನದಲ್ಲಿರುವ ಈ ಸಂದರ್ಭದಲ್ಲಿ, ಕಾಂಗ್ರೆಸ್ ಅಧ್ಯಕ್ಷರು ಹಾಗೂ ಎರಡೂ ಸದನಗಳ ಪ್ರತಿ ಪಕ್ಷದ ನಾಯಕರು ಸದನದೊಳಗೆ ಬಂದು ರಾಷ್ಟ್ರದ ಕ್ಷಮೆಯಾಚಿಸಬೇಕು ಎಂದು ಕಿರಣ್ ರಿಜಿಜು ಆಗ್ರಹಿಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa