
ಕೋಲಾರ, ೧೩ ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಜೆ.ಎಚ್.ಪಟೇಲ್ ರಾಜಕಾರಣಿಯಾಗಿ, ಮುಖ್ಯಮಂತ್ರಿಯಾಗಿ ರಾಜ್ಯಕ್ಕೆ ಕೊಡುಗೆ ಅಪಾರವಾದದ್ದು ಅವರ ತತ್ವ ಸಿದ್ದಾಂತಗಳ ಹಾದಿಯಲ್ಲಿ ಇವತ್ತಿನ ಯುವ ರಾಜಕಾರಣಿಗಳು ನಡೆಯಬೇಕಾಗಿದೆ ವಿಧಾನಸಭೆ ಮಾಜಿ ಅಧ್ಯಕ್ಷ ಕೆ.ಆರ್.ರಮೇಶ್ ಕುಮಾರ್ ಬಣ್ಣಿಸಿದರು.
ಕೋಲಾರ ನಗರದ ಕನ್ನಡ ಭವನದಲ್ಲಿ ಜೆ.ಎಚ್.ಪಟೇಲ್ ಪ್ರತಿಷ್ಠಾನದಿಂದ ಹಮ್ಮಿಕೊಂಡಿದ್ದ ಮಾಜಿ ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಅವರ ೨೫ನೇ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹಲವಾರು ಒಳ್ಳೆಯ ಕೆಲಸ ಮಾಡಿದ್ದಾರೆ. ಅವುಗಳು ಹೆಚ್ಚಾಗಿ ಪ್ರಚಾರ ಮಾಡಲಿಲ್ಲ. ಆದರೆ, ಮದ್ಯ ಹಾಗೂ ಹೆಣ್ಣಿನ ವಿಚಾರಗಳು ಮುಂಚೂಣಿಗೆ ಬಂದವು. ವ್ಯಕ್ತಿಯನ್ನು ಕೊಲ್ಲಲು ಬಾಂಬ್ ಹಾಕುವುದು, ಶೂಟ್ ಮಾಡುವುದಕ್ಕಿಂತ ಚಾರಿತ್ರ್ಯವಧೆ ಮಾಡಿದರೆ ಬೇಗನೇ ಸಾಯಿಸಬಹುದು ಎಂದರು.
ಈಗಿನ ಪರಿಸ್ಥಿತಿಯಲ್ಲಿ ವೋಟ್ ಹಾಕುವವರು, ವೋಟ್ ಹಾಕಿಸಿ ಕೊಳ್ಳುವವರು ಸೇರಿದಂತೆ ಯಾರಿಗೂ ನಿಷ್ಠೆ ಇಲ್ಲವಾಗಿದೆ. ಆದರೆ, ಜವಾಬ್ದಾರಿ ಇಲ್ಲದವರು ಗೆಲ್ಲುವುದು ಅಚ್ಚರಿಯಾಗಿ ಉಳಿದಿದೆ ಎಂದು ಬೇಸರ ವ್ಯಕ್ತಪಡಿಸಿದರು.
ವಿಧಾನ ಸೌಧದಲ್ಲಿ ಅಧಿವೇಶನ ನಡೆಯುವಾಗ ಮಾತ್ರ ಕೆಲ ಮಹಿಳೆಯರು ಕಸ ಗುಡಿಸುವ, ಸ್ವಚ್ಛತೆಗೊಳಿಸುವ ಕೆಲಸ ಮಾಡುತ್ತಿದ್ದರು. ಅಧಿವೇಶನ ಮುಗಿದರೆ ಅವರಿಗೆ ಕೆಲಸ ಇರುತ್ತಿರಲಿಲ್ಲ. ಹೀಗಾಗಿ, ಅವರನ್ನು ಕಾಯಂಗೊಳಿಸುವ ಸಂಬಂಧ ನಾನು ಅಧಿಕಾರಿಗಳ ಜೊತೆ ಚರ್ಚಿಸಿ ಜೆ.ಎಚ್.ಪಟೇಲ್ ಗಮನಕ್ಕೆ ತಂದೆ. ಅದಕ್ಕೆ ಹಸಿರು ನಿಶಾನೆ ನೀಡಿದರು. ೩೭ ಮಹಿಳೆಯರಿಗೆ ಕೆಲಸ ಸಿಕ್ಕಿತ್ತು. ಇಂಥ ಹತ್ತಾರು ಉತ್ತಮ ಕೆಲಸಕ್ಕೆ ಅವರು ಕಾರಣರಾಗಿದ್ದಾರೆ ಎಂದು ನೆನಪಿಸಿಕೊಂಡರು.
ರಾಜಕಾರಣಿಗಳಿಗೆ ಹೃದಯ ತಲೆಯಲ್ಲಿ ಇರಬೇಕು, ಜನಪರವಾಗಿರಬೇಕು ಎಂದು ಪಟೇಲ್ ಹೇಳುತ್ತಿದ್ದರು ಎಂದು ಸ್ಮರಿಸಿದರು.
ಆಗಿನ ಘಟಾನುಘಟಿ ಹಲವು ನಾಯಕರು ತಮ್ಮನ್ನು ಮುಖ್ಯಮಂತ್ರಿ ಮಾಡಿ ಎಂದು ಯಾರನ್ನೂ ಗೋಗರೆಯಲಿಲ್ಲ. ಅಧಿಕಾರ ವ್ಯಾಮೋಹ ಇರಲಿಲ್ಲ. ಆದರೆ, ಅಧಿಕಾರ ಪಡೆದುಕೊಳ್ಳಲು ಈಗ ಪಲ್ಟಿ ಹೊಡೆಯುತ್ತಾರೆ ಎಂದು ಸೂಕ್ಷ್ಮವಾಗಿ ಹೇಳಿದರು.
ಅಕ್ಷರಸ್ಥರಲ್ಲಿ ಇರುವಷ್ಟು ಭ್ರಷ್ಟಾಚಾರ, ಅನ್ಯಾಯ ಬೇರೆಲ್ಲೂ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ಮಾತನಾಡಿ, ಜೆ.ಎಚ್.ಪಟೇಲ್ ರಾಜಕೀಯ ಮುತ್ಸದ್ಧಿ. ಸಮಾಜವಾದದ ಪಥದಲ್ಲಿ ಆಡಳಿತ ನಡೆಸಲು ಪ್ರಾಮಾಣಿಕ ಪ್ರಯತ್ನ ಮಾಡಿದರು. ಅವರ ಚಿಂತನೆ ಪ್ರಸ್ತುತ ಕಾಲಕ್ಕೆ ಅಗತ್ಯವಾಗಿದೆ. ಅಂಥ ನಾಯಕರನ್ನು ಸೃಷ್ಟಿಸಬೇಕಿದೆ. ಅವರೊಬ್ಬ ಮಾದರಿ ನಾಯಕ’ ಎಂದು ಬಣ್ಣಿಸಿದರು.
ಸದ್ಯ ಸಂಸದೀಯ ಪ್ರಜಾಪ್ರಭುತ್ವ ವಿಫಲವಾಗಿದೆ. ಇದರಿಂದ ಸಮಾಜದಲ್ಲಿ ಅವ್ಯವಸ್ಥೆ ನಿರ್ಮಾಣವಾಗಿದೆ. ರಾಜಕೀಯ ಅಪರಾಧೀಕರಣವಾಗಿದೆ ಎಂದು ವೇದಿಕೆಯಲ್ಲಿದ್ದ ಗಣ್ಯರು ಹೇಳಿದ್ದನ್ನು ಅವರು ಅನುಮೋದಿಸಿದರು.
ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಸ್ವಾಮೀಜಿಯೊಬ್ಬರು ಖುಲಾಸೆಗೊಂಡರು. ಆದರೆ, ರಾಜ್ಯ ಸರ್ಕಾರ ಮೇಲ್ಮನವಿ ಸಲ್ಲಿಸಲಿಲ್ಲ. ಬದಲಾಗಿ ಸಂತ್ರಸ್ತ ಬಾಲಕಿಯರು ಮೇಲ್ಮನವಿ ಸಲ್ಲಿಸಿದ್ದಾರೆ. ಶ್ರೀಮಂತರಿಗೆ ಒಂದು ನ್ಯಾಯ, ಬಡವರಿಗೆ ಒಂದು ನ್ಯಾಯ, ಧರ್ಮದರ್ಶಿಗಳಿಗೆ ಒಂದು ನ್ಯಾಯ. ಇದೆಂಥಾ ಆಡಳಿತ ವ್ಯವಸ್ಥೆ, ಇದೆಂಥಾ ಸಮಾಜ ಎಂದು ಪ್ರಶ್ನಿಸಿದರು.
ದೇಶದಲ್ಲಿ ಶೇ ೫೦ರಷ್ಟು ಅವಿದ್ಯಾವಂತರಿದ್ದಾರೆ. ಅವರಿಂದಲೇ ಈ ದೇಶ ಇನ್ನೂ ಉಳಿದಿದೆ. ರಾಜಕಾರಣಿಗಳು ಹಾಗೂ ಅಧಿಕಾರಿಗಳಿಂದಲೇ ಹೆಚ್ಚು ಅವ್ಯವಸ್ಥೆ ಉಂಟಾಗಿದೆ ಎಂದು ಟೀಕಿಸಿದರು.
ನಾಗಲಾಪುರ ಮಠದ ತೇಜೇಶಲಿಂಗ ಸ್ವಾಮೀಜಿ ಮಾತನಾಡಿ, ‘ಬಸವಣ್ಣನವರ ಮಾತಿನಂತೆ ನುಡಿದು, ನಡೆದುಕೊಂಡವರು ಜೆ.ಎಚ್.ಪಟೇಲ್. ಅವರೊಬ್ಬ ಉತ್ತಮ ಆಡಳಿತಗಾರ. ಅವರ ನಾಯಕರು ಅಗತ್ಯವಿದೆ. ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣ ಮಾಡಬೇಕಿದೆ’ ಎಂದು ಸಲಹೆ ನೀಡಿದರು.
ಪ್ರತಿಷ್ಠಾನದ ವ್ಯವಸ್ಥಾಪಕ ಧರ್ಮದರ್ಶಿ ಮಹಿಮ ಪಟೇಲ್ ಮಾತನಾಡಿ, ‘ಶಿಕ್ಷಣ ಕ್ಷೇತ್ರ ಮಾರಾಟದ ವಸ್ತುವಾಗಿದ್ದು, ದಾರಿ ತಪ್ಪಿದೆ. ಆರೋಗ್ಯ ಕ್ಷೇತ್ರ ಎಂಬುದು ಹಣದ ಹಿಂದೆ ಬಿದ್ದಿದೆ. ಲಾಭ ಹಾಗೂ ಹಣಕಾಸಿನದ್ದು ಮಾತ್ರ ಸಂಬಂಧ ಎಂಬತಾಗಿದೆ. ಪರಿಸರ ಹಾಗೂ ರೈತರ ಸಮಸ್ಯೆಗಳನ್ನು ಆಲಿಸುವವರೇ ಇಲ್ಲ. ಪ್ರಸ್ತುತ ರೈತ ಸಂಘಗಳ ಪರಿಸ್ಥಿತಿ ಏನು ಎಂಬುದು ಎಲ್ಲರಿಗೂ ಗೊತ್ತಿದೆ’ ಎಂದರು.
ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಹಾಗೂ ವಕೀಲ ಸಿ.ಎಸ್.ದ್ವಾರಕನಾಥ್ ಹಾಗೂ ಮಾಜಿ ಶಾಸಕ ಎಂ.ನಾರಾಯಣಸ್ವಾಮಿ ಮಾತನಾಡಿದರು.
ಜೆಡಿಯು ಯುವ ಘಟಕದ ರಾಜ್ಯ ಅಧ್ಯಕ್ಷ ಕಲ್ಲಂಡೂರು ಡಾ.ಕೆ.ನಾಗರಾಜ್ ಕಾರ್ಯಕ್ರಮ ನಿರೂಪಿಸಿದರು.
ಪ್ರತಿಷ್ಠಾನದ ಅಧ್ಯಕ್ಷ ತ್ರಿಶೂಲಪಾಣಿ ಪಟೇಲ್, ಧರ್ಮದರ್ಶಿ ಟಿ.ಪ್ರಭಾಕರ್, ತೇಜಸ್ವಿ ಪಟೇಲ್ ಹಾಗೂ ಜೆ.ಎಚ್.ಪಟೇಲ್ ಅಭಿಮಾನಿಗಳು ಭಾಗವಹಿಸಿದ್ದರು.
ಚಿತ್ರ : ಕೋಲಾರ ನಗರದ ಕನ್ನಡ ಭವನದಲ್ಲಿ ಜೆ.ಎಚ್.ಪಟೇಲ್ ಪ್ರತಿಷ್ಠಾನದಿಂದ ಹಮ್ಮಿಕೊಂಡಿದ್ದ ಮಾಜಿ ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಅವರ ೨೫ನೇ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮವನ್ನು ವಿಧಾನಸಭೆ ಮಾಜಿ ಅಧ್ಯಕ್ಷ ಕೆ.ಆರ್.ರಮೇಶ್ ಕುಮಾರ್ ಉದ್ಘಾಟಿಸಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್