
ಕೋಲಾರ, ೧೩ ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಸಂವಿಧಾನದ ಅಡಿಯಲ್ಲಿ ಪ್ರತಿಯೊಬ್ಬರಿಗೂ ನ್ಯಾಯಸಿಗಬೇಕೇಂಬ ಉದ್ದೇಶ ಹಾಗೂ ಸಾರ್ವಜನಿಕ ಆಡಳಿತದಲ್ಲಿ ಪಾರದರ್ಶಕತೆ, ಸಮಗ್ರತೆ ಮತ್ತು ಪ್ರಾಮಾಣಿಕತೆಯನ್ನು ತರುವುದು ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ಪ್ರಮುಖ ಉದ್ದೇಶವಾಗಿದೆ ಎಂದು ಉಪಲೋಕಾಯುಕ್ತ, ನ್ಯಾಯಮೂರ್ತಿ ಬಿ.ವೀರಪ್ಪ ತಿಳಿಸಿದರು.
ಮುಳಬಾಗಲು ನಗರದ ಇಂಡಿಯನ್ ಪ್ಯಾಲೇಸ್ ಕಲ್ಯಾಣ ಮಂಟಪದಲ್ಲಿ ಲೋಕಾಯುಕ್ತ ಸಂಸ್ಥೆಯ ವತಿಯಿಂದ ಬಾಕಿ ಇರುವ ದೂರುಗಳ ವಿಚಾರಣೆ ಹಾಗೂ ಪ್ರಕರಣಗಳ ವಿಲೇವಾರಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ನಾನು ಉಪಲೋಕಾಯುಕ್ತರಾಗಿ ೧ ವರ್ಷ ೫ತಿಂಗಳು ಕಳೆದಿದ್ದು ನನ್ನ ವ್ಯಾಪ್ತಿಗೆ ೧೬ ಜಿಲ್ಲೆಗಳು ಬರುತ್ತವೆ. ಸಮಾಜ ಸೇವೆಯೇ ನನ್ನ ಗುರಿಯಾಗಿದ್ದು ಜತೆಗೆ ದುಷ್ಟರ ಸಂಹಾರಕ್ಕೆ ನನ್ನ ಮೊದಲ ಅದ್ಯತೆ ನೀಡುತ್ತಿದ್ದೇನೆ ಎಂದು ತಿಳಿಸಿದರು. ಸರ್ಕಾರಿ ನೌಕರರು ದಕ್ಷತೆಯಿಂದ ಕೆಲಸ ಮಾಡುವುದರ ಜತೆಗೆ ಸಾರ್ವಜನಿಕರ ಕೆಲಸಗಳನ್ನು ನಿಗಧಿತ ಸಮಯಕ್ಕೆ ಮಾಡಿಕೊಡಬೇಕು ಜತೆಗೆ ಭ್ರಷ್ಟಾಚಾರ ರಹಿತವಾಗಿರಬೇಕು ಇಲ್ಲದಿದ್ದ ಪಕ್ಷದಲ್ಲಿ ಮುಲಾಜಿಲ್ಲದೆ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಸರ್ಕಾರಿ ನೌಕರರು ಬದ್ದತೆಯಿಂದ ಹಾಗೂ ದಕ್ಷತೆಯಿಂದ ಕೆಲಸ ಮಾಡುವ ಮೂಲಕ ಯಾರಿಗೂ ಹೆದರಬೇಕಾಗಿಲ್ಲ. ಸರ್ಕಾರ ನೀಡುವ ಸಂಬಳ ಪಡೆದುಕೊಂಡು ಉತ್ತಮ ಜೀವನ ನಡೆಸಬೇಕು ಅದು ಬಿಟ್ಟು ಸಾರ್ವಜನಿಕರಿಂದ ಗಿಂಬಳ ಪಡೆದುಕೊಂಡರೇ ಭವಿಷ್ಯದಲ್ಲಿ ಹೆಚ್ಚು ತೊಂದರೆ ಅನುಭವಿಸ ಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ನಾನು ರಾಜ್ಯದಲ್ಲೆಡೆ ಪ್ರವಾಸ ಕೈಗೊಂಡಾಗ ಬಹುತೇಕ ಆಸ್ಪತ್ರೆಗಳು, ತಾಲೂಕು ಕಚೇರಿ, ಉಪನೊಂದಣಾಧಿಕಾರಿ ಕಚೇರಿ, ತಾ.ಪಂ ಕಚೇರಿ, ನಗರಸಭೆ, ಗ್ರಾ.ಪಂ ಕಚೇರಿ ಸೇರಿದಂತೆ ಇತರೆ ಕಚೇರಿಗಳಿಗೆ ಬೇಟಿ ನೀಡಿದಾಗ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ ಬಹುತೇಕ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಲಂಚವಿಲ್ಲದೆ ಕೆಲಸ ಮಾಡಿಕೊಡುತ್ತಿಲ್ಲ ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಗಂಭೀರವಾಗಿ ಇದನ್ನು ಪರಿಗಣಿಸಿ ಸಾರ್ವಜನಿಕರಿಂದ ಬಂಧ ದೂರುಗಳನ್ನು ಅತಿಶೀಘ್ರವಾಗಿ ವಿಲೇವಾರಿ ಮಾಡಲಾಗುತ್ತಿದೆ ತಪ್ಪು ಮಾಡಿದವರಿಗೆ ಕಾನೂನು ಶಿಕ್ಷೆ ಕೊಡಲಾಗುತ್ತಿದೆ ಎಂದು ತಿಳಿಸಿದರು.
ಲೋಕಾಯುಕ್ತ ಕಚೇರಿಯಲ್ಲಿ ೨೫ ಸಾವಿರ ಕಡತಗಳು ವಿಲೇವಾರಿಯಾಗಿಲ್ಲ ಇದರಲ್ಲಿ ೮ ಸಾವಿರ ಕಡತಗಳು ಕೆಲವರು ಬೇಕಂತಲೇ ಸುಳ್ಳುಕೇಸು ಹಾಕಿದ್ದಾರೆ ಇದು ಸರಿಯಲ್ಲ ಎಂದರಲ್ಲದೆ ಬಹುತೇಕ ಕಡತಗಳಿಗೆ ಸೂಕ್ತ ದಾಖಲೆಗಳು ಲಭ್ಯವಾಗುತ್ತಿಲ್ಲ. ಕೆಲವರು ಆರ್ಟಿಐ ಕಾರ್ಯಕರ್ತರು, ಪತ್ರಕರ್ತರು ಎಂದು ಹೇಳಿಕೊಂಡು ಬೇಕಂತಲೇ ಹಣಕ್ಕಾಗಿ ಅಧಿಕಾರಿಗಳ ವಿರುದ್ದ ದೂರು ಕೊಡುವುದು ಸಾಮಾನ್ಯವಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿದ್ದು ಆರ್ಟಿಐ ಕಾಯ್ದೆಯನ್ನು ದುರ್ಬಳಿಕೆ ಮಾಡುವವರ ವಿರುದ್ದ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.
ರಾಜ್ಯದಲ್ಲಿ ಅಕ್ರಮವಾಗಿ ಕೆರೆ, ಕುಂಟೆ ಕಾಲುವೆಗಳು ಒತ್ತುವರಿಯಾಗಿದ್ದು ಇವುಗಳನ್ನು ತೆರವುಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದ್ದರೂ ಸಹ ಇದುವರೆಗೂ ಆ ಕಾರ್ಯ ನಡೆದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ, ಕೋಲಾರ ಜಿಲ್ಲೆ ನನ್ನ ಜನ್ಮಭೂಮಿಯಾಗಿದ್ದು ಇಲ್ಲಿಂದಲೇ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕೆಂಬ ಉದ್ದೇಶದಿಂದ ಜಿಲ್ಲೆಯ ಪ್ರತಿ ತಾಲೂಕು ಕೇಂದ್ರಕ್ಕೂ ಬೇಟಿ ನೀಡಿ ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸುತ್ತಿದ್ದೇನೆ.
ನನಗೆ ೬೫ ವರ್ಷ ವಯಸ್ಸಾಗಿದ್ದರೂ ಸಹ ಜನರ ಒಳತಿಗಾಗಿ ಕೆಲಸ ಮಾಡುತ್ತಿದ್ದು ನನ್ನ ಅವಧಿಯಲ್ಲಿ ಸಾರ್ವಜನಿಕರಿಗೆ ಒಳ್ಳೆಯದಾಗ ಬೇಕು ಎಂಬ ಭಾವನೆಯನ್ನು ಇಟ್ಟಿಕೊಂಡಿದ್ದೇನೆ. ಕಳೆದ ಏಪ್ರಿಲ್ ತಿಂಗಳಿನಲ್ಲಿ ತಾಲೂಕಿಗೆ ಬೇಟಿ ನೀಡಿ ಸ್ವಯಂ ಪ್ರೇರಿತ ಕೇಸು ದಾಖಲಿಸಿ ಕೊಂಡಿದ್ದ ಹಾಗೂ ಲೋಕಾಯುಕ್ತ ಕಚೇರಿಗೆ ಸಾರ್ವಜನಿಕರು ನೀಡಿದ್ದ ಅರ್ಜಿಗಳಿಗೆ ಪರಿಹಾರ ಸಿಕ್ಕಿರುವ ಬಗ್ಗೆ ದೂರುದಾರರಿಂದ ಹಾಗೂ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಕೆಲ ಅಧಿಕಾರಿಗಳು ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡದೇ ಇರುವುದನ್ನು ಕಂಡು ತೀವ್ರ ತರಾಟೆಗೆ ತೆಗೆದುಕೊಂಡರು. ಕೆಲವರಿಗೆ ಎಚ್ಚರಿಕೆಯನ್ನು ನೀಡಿ ಕಳುಹಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ, ನ್ಯಾಯಾದೀಶರಾದ ಅರವಿಂದ್, ನಟೇಶ್, ಜಿ.ಪಂ ಸಿಇಓ ಪ್ರವೀಣ್ ಬಾಗೇವಾಡಿ, ಲೋಕಾಯುಕ್ತ ಎಸ್.ಪಿ. ಅಂಟೋನಿಜಾನ್, ಎಸ್ಪಿ ಬಿ.ನಿಖಿಲ್, ಎ.ಸಿ. ಡಾ.ಮೈತ್ರಿ, ಎಎಸ್ಪಿ ಮನಿಷಾ, ಜಿ.ಪಂ ಉಪಕಾರ್ಯದರ್ಶಿ ರಮೇಶ್, ತಹಸೀಲ್ದಾರ್ ವಿ.ಗೀತಾ, ತಾ.ಪಂ ಇಓ ಆರ್.ರವಿಚಂದ್ರ, ನಗರಸಭೆ ಆಯುಕ್ತ ವಿ.ಶ್ರೀಧರ್, ತಾಲೂಕು ಆರೋಗ್ಯ ಅಧಿಕಾರಿ ಡಾ.ಸುಗುಣ, ನಗರಠಾಣೆ ಸಿಪಿಐ ಸಂಗನಾಥ್ ಸೇರಿದಂತೆ ಇಲಾಖೆ ಗಳ ಅಧಿಕಾರಿಗಳು, ಗ್ರಾ.ಪಂ ಪಿಡಿಓಗಳು ಇದ್ದರು.
ಚಿತ್ರ : ಕೋಲಾರ ಜಿಲ್ಲೆಯ ಮುಳಬಾಗಲು ನಗರದ ಇಂಡಿಯನ್ ಪ್ಯಾಲೇಸ್ ಕಲ್ಯಾಣ ಮಂಟಪದಲ್ಲಿ ಲೋಕಾಯುಕ್ತ ಸಂಸ್ಥೆಯ ವತಿಯಿಂದ ಬಾಕಿ ಇರುವ ದೂರುಗಳ ವಿಚಾರಣೆ ಹಾಗೂ ಪ್ರಕರಣಗಳ ವಿಲೇವಾರಿ ಸಭೆಯನ್ನು ಉಪಲೋಕಾಯುಕ್ತ, ನ್ಯಾಯಮೂರ್ತಿ ಬಿ.ವೀರಪ್ಪ ಉದ್ಘಾಟಿಸಿ ಮಾತನಾಡಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್