
ಮುಂಬಯಿ, 01 ಡಿಸೆಂಬರ್ (ಹಿ.ಸ.) :
ಆ್ಯಂಕರ್ : 1995ರಲ್ಲಿ ಬಿಡುಗಡೆಯಾಗಿ ದೇಶದ ಸಿನಿಪ್ರೇಮಿಗಳನ್ನು ಮಂತ್ರಮುಗ್ಧಗೊಳಿಸಿದ್ದ ಆಮಿರ್ ಖಾನ್–ಊರ್ಮಿಳಾ ಮಾತೋಂಡ್ಕರ್ ಅಭಿನಯದ ಕಲ್ಟ್ ಕ್ಲಾಸಿಕ್ ‘ರಂಗೀಲಾ’ ಮತ್ತೆ ದೊಡ್ಡ ಪರದೆಗೆ ಮರಳಿ ಬರಲು ಸಜ್ಜಾಗಿದೆ. ಮೂರು ದಶಕಗಳ ಬಳಿಕ ಚಿತ್ರಮಂದಿರಗಳಲ್ಲಿ ಮರುಬಿಡುಗಡೆಯಾಗುತ್ತಿರುವ ಈ ಐಕಾನಿಕ್ ಚಿತ್ರದ ಸಂದರ್ಭವಾಗಿ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಹಿಂದೂಸ್ತಾನ್ ಸಮಾಚಾರ ಸುದ್ದಿ ಸಂಸ್ಥೆಗೆ ವಿಶೇಷ ಸಂದರ್ಶನ ನೀಡಿದ್ದಾರೆ.
ಸಂದರ್ಶನದ ಸಂಪೂರ್ಣ ವಿವರ ಇಲ್ಲಿದೆ...
‘ರಂಗೀಲಾ’ನನ್ನ ವೃತ್ತಿಜೀವನದಲ್ಲಿ ಅಮರಸ್ಥಾನ ಹೊಂದಿದ ಚಿತ್ರ
‘ರಂಗೀಲಾ’ ಕುರಿತು ಮಾತನಾಡಿದ ಅವರು, “ಕೆಲವು ಚಿತ್ರಗಳು ಕಾಲಾತೀತ. ಅವನ್ನು ಯಾವ ಯುಗದಲ್ಲೇ ನೋಡಿದರೂ ಒಂದೇ ಆತ್ಮ, ಒಂದೇ ಮನರಂಜನೆ — ರಂಗೀಲಾ ಅಂತಹ ಚಿತ್ರ. ಕಥೆ, ಪಾತ್ರಗಳು, ಸಂಗೀತ—ಇವೆಲ್ಲವೂ ತನ್ನ ಕಾಲದಲ್ಲೂ ಜನರ ಮನ ಗೆದ್ದಿತ್ತು; ಈಗಲೂ ಅದೇ ಶಕ್ತಿ ಹೊಂದಿದೆ ಎಂದರು.
ಆರ್.ಡಿ. ಬರ್ಮನ್ ಅವರ ಸಂಗೀತ ಸಂಯೋಜನೆ, ಎ.ಆರ್. ರೆಹಮಾನ್ ನೀಡಿದ ಹಿನ್ನೆಲೆ ಸಂಗೀತ ಹಾಗೂ ನಾಯಕ–ನಾಯಕಿಯ ಪರದೆಯ ಮೇಲಿನ ರಸಾಯನಶಾಸ್ತ್ರ ಎಲ್ಲಾ ಒಗ್ಗೂಡಿ 90ರ ದಶಕದ ಚಲನಚಿತ್ರರಂಗದಲ್ಲಿ ಹೊಸ ಮಾನದಂಡವನ್ನು ಸ್ಥಾಪಿಸಿತು ಎಂದು ವರ್ಮಾ ನೆನಪು ಹಂಚಿಕೊಂಡರು.
ರೆಹಮಾನ್ ಆಯ್ಕೆ ಹೇಗೆ?
ಸಂಗೀತದ ಕುರಿತು ಮಾತನಾಡಿದ ಅವರು, “ರೆಹಮಾನ್ ಅವರ ಕೆಲಸವನ್ನು ನಾನು ಮೊದಲೇ ಗಮನಿಸುತ್ತಿದ್ದೆ. ಅವರ ಕಂಪೊಸಿಷನ್‌ಗಳಲ್ಲಿ ಇರುವ ತಾಜಾತನ, ಧ್ವನಿಯ ಪ್ರಾಯೋಗಿಕತೆ—ಇವು ಯಾರಿಗೂ ಹೋಲಿಕೆಯಾಗದು. ‘ರಂಗೀಲಾ’ಗೆ ಅವರೇ ಸಂಗೀತ ನೀಡಬೇಕು ಎಂದು ಆರಂಭದಲ್ಲೇ ನಿರ್ಧರಿಸಿದ್ದೆ. ಅವರು ಏನೇ ಸೃಷ್ಟಿಸಿದರೂ ಅದನ್ನು ಹಸ್ತಕ್ಷೇಪವಿಲ್ಲದೆ ಪೂರ್ಣವಾಗಿ ನಂಬಿದ್ದೆ,” ಎಂದು ಸ್ಪಷ್ಟಪಡಿಸಿದರು.
“ರೆಹಮಾನ್ ಮಾಡಿದ್ದ ಸಂಗೀತದ ಮ್ಯಾಜಿಕ್ ಮತ್ತೆ ಯಾವತ್ತೂ ಪುನರಾವರ್ತಿಸಲಾಗುವುದು ಎಂಬುದು ನನಗೆ ಶಂಕೆ,” ಎಂದು ಅವರು ನಗೆ ಚಟಾಕಿ ಹಾರಿಸಿದರು.
ಇಂದಿನ ಯುಗಕ್ಕೆ ‘ರಂಗೀಲಾ’ ಬದಲಾಗಬೇಕೆ?
ಇಂದಿನ ಸಿನಿಮೀಯ ವಾತಾವರಣಕ್ಕೆ ಈ ಕಥೆಯನ್ನು ಮರುಹೊಂದಿಸಬೇಕಾದರೆ ಏನು ಬದಲಾವಣೆ ಬೇಕು ಎಂಬ ಪ್ರಶ್ನೆಗೆ ಅವರು, “ಈ ಕಥೆಯು ಎಲ್ಲಾ ಯುಗಗಳಿಗೂ ಪುಷ್ಠಿಯಾಗುವಷ್ಟು ಸಾಮಾನ್ಯ ಮತ್ತು ಶಾಶ್ವತ. ಇದನ್ನು ರೀಮೇಕ್ ಮಾಡುವುದರಿಂದ ಅದರ ಮೂಲ ಆತ್ಮವೇ ನಶಿಸಬಹುದು. ಅದಕ್ಕಾಗಿ ನಾನು ಮುಂದುವರಿದ ಭಾಗವನ್ನೂ ಬಯಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಅಪಾಯವಲ್ಲ, ಆತ್ಮವಿಶ್ವಾಸವೇ ಸಿನಿಮಾದ ನಿಜವಾದ ಶಕ್ತಿ:
ಇಂದಿನ ನಿರ್ಮಾಪಕರು ಹೊಸ ಪ್ರಯೋಗಗಳಿಗೆ ಹಿಂಜರಿಯುವ ಬಗ್ಗೆ ಕೇಳಿದಾಗ ಅವರು, “ನಾನು ಯಾವುದೇ ಸಿನಿಮಾವನ್ನೂ ರಿಸ್ಕ್ ಎಂದು ನೋಡಿಲ್ಲ. ಅದು ಕಥೆ ಮತ್ತು ತಂಡದ ಮೇಲೆ ಇರುವ ನನ್ನ ವಿಶ್ವಾಸದ ಪರೀಕ್ಷೆ. ಒಂದೇ ರೀತಿಯ ಸಿನಿಮಾವನ್ನು ಮರುಮರು ಮಾಡುವವರೇ ದೊಡ್ಡ ಅಪಾಯ ತೆಗೆದುಕೊಳ್ಳುತ್ತಾರೆ. ಇಂದಿನ ಪ್ರೇಕ್ಷಕರು ಜಾಗೃತರು. 90 ಪ್ರತಿಶತ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ವಿಫಲವಾಗುತ್ತಿರುವುದೂ ಅದಕ್ಕೆ ಸಾಕ್ಷಿ ಎಂದು ಅಭಿಪ್ರಾಯಪಟ್ಟರು.
ದಕ್ಷಿಣ–ಬಾಲಿವುಡ್ ಚರ್ಚೆ: ಪ್ರಭಾವ ದೊಡ್ಡದು, ಆದರೆ ಅದನ್ನೇ ಸತ್ಯವೆಂದು ತೆಗೆದುಕೊಳ್ಳಬಾರದು;
‘ಕಾಂತಾರ’ ಯಶಸ್ಸಿನ ಬಳಿಕ ದಕ್ಷಿಣ ಚಿತ್ರರಂಗ ಮಾದರಿಯಾಗುತ್ತಿದೆ ಎಂಬ ಅಭಿಪ್ರಾಯಕ್ಕೆ ಪ್ರತಿಕ್ರಿಯಿಸಿದ ಅವರು, “ದಕ್ಷಿಣದಲ್ಲಿ ಅನೇಕ ಚಿತ್ರಗಳು ತಯಾರಾಗುತ್ತವೆ, ಎಲ್ಲವೂ ಯಶಸ್ವಿಯಾಗುವುದಿಲ್ಲ. ಕೆಲವೇ ನಿರ್ದೇಶಕರು—ರಿಷಬ್ ಶೆಟ್ಟಿ ಅಥವಾ ಸಂದೀಪ್ ವಂಗಾ ರೆಡ್ಡಿಯಂತಹವರು ಮೂಲ ಮತ್ತು ಶಕ್ತಿಶಾಲಿ ವಿಷಯ ನೀಡುತ್ತಿದ್ದಾರೆ. ಆದರೆ ಅದನ್ನು ಸಮಗ್ರ ದಕ್ಷಿಣ ಚಿತ್ರರಂಗದ ಪ್ರಮಾಣಪತ್ರವೆಂದು ಹೇಳಲು ಸಾಧ್ಯವಿಲ್ಲ” ಎಂದರು.
ಮುಂಬೈನ ಕಾರ್ಪೊರೇಟ್ ನಿರ್ಮಾಣ ಮಾದರಿಯ ಬಗ್ಗೆ ವಿರೋಧ ವ್ಯಕ್ತಪಡಿಸಿದ ವರ್ಮಾ, “ಅಲ್ಲಿ ಹತ್ತು ಜನರು ಸೇರಿ ಸಿನಿಮಾದ ಪ್ರತಿಯೊಂದು ಅಂಶ ನಿರ್ಧರಿಸುತ್ತಾರೆ—ಇದು ಸೃಜನಶೀಲತೆಯನ್ನು ಕೊಲ್ಲುತ್ತದೆ. ಒಬ್ಬ ಪ್ರತಿಭಾನ್ವಿತ ನಿರ್ದೇಶಕ ಸಣ್ಣ ತಂಡದೊಂದಿಗೆ ಸ್ವಾತಂತ್ರ್ಯದಿಂದ ಕೆಲಸ ಮಾಡಿದಾಗ ಮಾತ್ರ ವಿಶಿಷ್ಟ ಚಿತ್ರ ಹುಟ್ಟುತ್ತದೆ” ಎಂದು ಹೇಳಿದರು.
‘ಸೃಜನಶೀಲ ಸ್ವಾತಂತ್ರ್ಯ + ವ್ಯವಹಾರಿಕ ಮಾರ್ಗದರ್ಶನ = ಉತ್ತಮ ಸಿನಿಮಾ’
ನಿರ್ದೇಶಕರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿ, ನಂತರ ನಿರ್ಮಾಪಕರು ವ್ಯವಹಾರ–ಮಾರ್ಕೆಟಿಂಗ್ ಸಲಹೆ ನೀಡುವ ಮಾದರಿ ಉತ್ತಮ ಫಲಿತಾಂಶ ನೀಡುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa