
ಬೆಂಗಳೂರು, 08 ನವೆಂಬರ್ (ಹಿ.ಸ.) :
ಆ್ಯಂಕರ್ : ಸಂಘದ ಕೆಲಸ ಮಾತಿನಲ್ಲಲ್ಲ ನಕಾರಾತ್ಮಕತೆಯಿಂದ ದೂರವಾಗಿ, ಸಕಾರಾತ್ಮಕ ಚಿಂತನೆಗಳಿಂದ ಸಮಾಜದಲ್ಲಿ ಸೌಹಾರ್ದ ಹಾಗೂ ಪರಸ್ಪರ ವಿಶ್ವಾಸವನ್ನು ಬೆಳೆಸುವುದೇ ನಮ್ಮ ಗುರಿ,” ಎಂದು ಆರ್‌ಎಸ್‌ಎಸ್ ಸರಸಂಘಚಾಲಕ ಡಾ. ಮೋಹನ್ ಭಾಗವತ್ ಹೇಳಿದ್ದಾರೆ.
ಅವರು ಶನಿವಾರ ಬೆಂಗಳೂರಿನಲ್ಲಿ ನಡೆದ ಉಪನ್ಯಾಸ ಸರಣಿಯಲ್ಲಿ ಮಾತನಾಡುತ್ತಾ, ಸತ್-ಭಾವನ-ಆಕಾರೀ ಯೋಜನೆಯ ಕುರಿತು ವಿವರಿಸಿದರು. “ಪ್ರತಿ ಅಭಿವೃದ್ಧಿ ಬ್ಲಾಕ್ ಮಟ್ಟದಲ್ಲಿ ಜಾತಿ ನಾಯಕರೂ, ಧಾರ್ಮಿಕ ಪಂಥಗಳ ಪ್ರತಿನಿಧಿಗಳೂ ತಿಂಗಳಲ್ಲಿ ಒಮ್ಮೆ ಸೇರಿ ಚಿಂತನೆ ನಡೆಸಬೇಕು. ಮೂರು ವಿಷಯಗಳಲ್ಲಿ ಅವರು ಆಲೋಚಿಸಬೇಕು: ಮೊದಲನೆಯದು, ತಮ್ಮ ಸಮಾಜದ ಆರ್ಥಿಕ, ನೈತಿಕ ಮತ್ತು ಸಾಂಸ್ಕೃತಿಕ ಉನ್ನತಿಗಾಗಿ ಮಾಡುತ್ತಿರುವ ಪ್ರಯತ್ನಗಳು ಏನು? ಎರಡನೆಯದು, ಬ್ಲಾಕ್ ಮಟ್ಟದಲ್ಲಿ ಸಾಮೂಹಿಕವಾಗಿ ಸಮಾಜದ ಹಿತಕ್ಕಾಗಿ ಮಾಡಬಹುದಾದ ಕೆಲಸಗಳು ಯಾವುವು? ಮೂರನೆಯದು, ದುರ್ಬಲ ವರ್ಗಗಳ ಸಹಾಯಕ್ಕೆ ಏನು ಮಾಡಬಹುದು?” ಎಂದು ವಿವರಿಸಿದರು.
“ಈ ರೀತಿಯ ಚಿಂತನೆಗಳು ನಿಯಮಿತವಾಗಿ ನಡೆಯುವುದರಿಂದ ಪರಸ್ಪರ ನಂಬಿಕೆ ಮತ್ತು ಒಗ್ಗಟ್ಟಿನ ಭಾವನೆ ಹೆಚ್ಚುತ್ತದೆ. ಹೊರಗಿನವರು ವೈಷಮ್ಯ ಸೃಷ್ಟಿಸಲು ಸಾಧ್ಯವಾಗುವುದಿಲ್ಲ. ಜನರಿಗೆ ತಮ್ಮ ನಾಯಕರು ಒಟ್ಟಾಗಿ ಕುಳಿತುಕೊಂಡು ಎಲ್ಲರ ಹಿತಕ್ಕಾಗಿ ಯೋಚಿಸುತ್ತಿದ್ದಾರೆ ಎಂಬ ನಂಬಿಕೆ ಬೇರೂರಬೇಕು,” ಎಂದು ಭಾಗವತ್ ಹೇಳಿದರು.
ಅವರು ಮುಂದುವರಿದು, “ಸಾಮರಸ್ಯವನ್ನು ಕೇವಲ ಭಾಷಣಗಳಿಂದ ತರಲಾಗದು. ಅದು ಪ್ರೀತಿ ಮತ್ತು ಪರಸ್ಪರ ‘ಆಪ್ತ ’ ಭಾವದಿಂದ ಮಾತ್ರ ಸಾಧ್ಯ. ಶತಮಾನಗಳಿಂದ ಹಿಂದುಳಿದ ಸಮುದಾಯಗಳು ಇವೆ. ಅವರಿಗೂ ಸಮಾನ ಅವಕಾಶ ದೊರಕಬೇಕಾದರೆ, ನಾವು ನಮ್ಮ ಅಹಂಕಾರವನ್ನು ಬಿಟ್ಟು, ಅವರನ್ನೂ ಜೊತೆಸೇರಿಸಿಕೊಳ್ಳಬೇಕಿದೆ. ನಾವೇ ಕೈ ಚಾಚಬೇಕು, ಅವರು ಮೇಲೇಳಬೇಕು ಈ ಪರಸ್ಪರ ಸಹಕಾರವೇ ಪ್ರಗತಿಯ ದಾರಿ,” ಎಂದರು.
ಭಾರತದ ಸಾಮಾಜಿಕ ಏಕತೆಯ ಇತಿಹಾಸವನ್ನು ಸ್ಮರಿಸಿಕೊಂಡ ಭಾಗವತ್ ಹೇಳಿದರು, “1857ರಲ್ಲಿ ಮುಸ್ಲಿಮರು ಮತ್ತು ಹಿಂದೂಗಳು ಬ್ರಿಟಿಷರ ವಿರುದ್ಧ ಒಟ್ಟಾಗಿ ಹೋರಾಡಿದರು. ಬಹಾದುರ್ ಶಾ ಜಫರ್ ಅವರು ಗೋಹತ್ಯೆ ನಿಷೇಧದ ಆದೇಶ ಹೊರಡಿಸಿದರು. ಈ ರೀತಿಯ ಏಕತೆ ಬ್ರಿಟಿಷರನ್ನು ಹೆದರಿಸಿತು. ಅದಕ್ಕಾಗಿಯೇ ಅವರು ನಮ್ಮ ಸಮಾಜದ ಭಿನ್ನತೆಗಳನ್ನು ಉದ್ದೇಶಪೂರ್ವಕವಾಗಿ ಹೆಚ್ಚಿಸಿದರು. ಈಗ ನಾವು ಸ್ವತಂತ್ರರಾಗಿದ್ದರೂ, ಆ ಅವಶೇಷಗಳು ಇನ್ನೂ ಪ್ರಭಾವ ಬೀರುತ್ತಿವೆ. ಅದನ್ನು ನಿವಾರಿಸಲು ನಾವು ಮತ್ತೆ ಕುಳಿತು ಚರ್ಚಿಸಬೇಕು ಹೊಸ ಅಧ್ಯಾಯ ಆರಂಭಿಸಬೇಕು,” ಎಂದರು.
ಅವರು ಸ್ಪಷ್ಟಪಡಿಸಿದರು: “ನಾವು ಒಂದೇ ಜನಾಂಗ ಹಿಂದೂ ರಾಷ್ಟ್ರ. ನಿಮಗೆ ‘ಹಿಂದೂ’ ಎಂಬ ಪದ ಅಸೌಕರ್ಯವಾದರೆ ‘ಭಾರತೀಯ ರಾಷ್ಟ್ರ’ ಎಂದಾದರೂ ಹೇಳಿ. ಆದರೆ ಅರ್ಥ ಒಂದೇ ನಮ್ಮ ಸಂಸ್ಕೃತಿ, ನಮ್ಮ ಸಂಪ್ರದಾಯವೇ ರಾಷ್ಟ್ರದ ಆಧಾರ. ರಾಷ್ಟ್ರ ಅಂದರೆ ಸರ್ಕಾರವಲ್ಲ, ಅದು ಸಂಸ್ಕೃತಿ. ರಾಜರು ಬದಲಾಗಬಹುದು, ಆದರೆ ರಾಷ್ಟ್ರ ಅಸ್ತಿತ್ವದಲ್ಲಿ ಇರುತ್ತದೆ,” ಎಂದು ಹೇಳಿದರು.
“ಭಾರತದಲ್ಲಿ ವಿಭಜನೆಗಳು ಆಗುವುದಕ್ಕೆ ಒಂದು ಮುಖ್ಯ ಕಾರಣ ಹಿಂದೂ ಭಾವದ ಕ್ಷೀಣತೆ. ಜನಸಂಖ್ಯೆಯಷ್ಟೇ ಮುಖ್ಯವಲ್ಲ, ಭಾವವೂ ಮುಖ್ಯ. ಕೆಲ ಮುಸ್ಲಿಮರು ಸಹ ಹಿಂದೂ ಭಾವವನ್ನು ಹೊಂದಿರುತ್ತಾರೆ, ಏಕೆಂದರೆ ಅದು ಜೀವನದ ದೃಷ್ಟಿಕೋನ. ನಮ್ಮ ರಾಷ್ಟ್ರಪರ ಗುರುತಿನ ಮೂಲ ಧರ್ಮದಲ್ಲಿ ಇದೆ. ಅದನ್ನು ಎಲ್ಲರಿಗೂ ತಲುಪಿಸಲು ಸಂವಾದಗಳು ನಡೆಯುತ್ತಿವೆ,” ಎಂದು ಭಾಗವತ್ ವಿವರಿಸಿದರು.
“ಧರ್ಮಾಧಾರಿತ ಗ್ರಾಮೀಣ ಅಭಿವೃದ್ಧಿ, ಆರೋಗ್ಯ, ಶಿಕ್ಷಣ ಇವುಗಳ ಮಾದರಿಗಳನ್ನು ಸೃಷ್ಟಿಸಲು ನಾವು ಕೆಲಸ ಪ್ರಾರಂಭಿಸಿದ್ದೇವೆ. ಕೆಲವೆಡೆ ಯಶಸ್ಸು ಕಂಡಿದ್ದೇವೆ. ಇನ್ನು ಹೊಸ ಹೊಸ ಪ್ರಯೋಗಗಳು ಅಗತ್ಯವಿವೆ. ಸಕಾರಾತ್ಮಕ ಚಿಂತನೆಯಿಂದ ಮತ್ತು ಪ್ರೀತಿಯಿಂದ ಮಾತ್ರ ಸಮಾಜದಲ್ಲಿ ನಿಜವಾದ ಸಾಮರಸ್ಯ ಸಾಧ್ಯ ಎಂದು ಭಾಗವತ್ ಹೇಳಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa