
ಸೀತಾಮರ್ಹಿ, 8 ನವೆಂಬರ್ (ಹಿ.ಸ.) :
ಆ್ಯಂಕರ್ : ಪ್ರಧಾನಿ ನರೇಂದ್ರ ಮೋದಿ ಶನಿವಾರ ಬಿಹಾರದ ಸೀತಾಮರ್ಹಿಯಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಮಹಾ ಮೈತ್ರಿಕೂಟ (ಆರ್‌ಜೆಡಿ–ಕಾಂಗ್ರೆಸ್) ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. “ಆರ್‌ಜೆಡಿ ಅಪರಾಧವನ್ನು ಉತ್ತೇಜಿಸುತ್ತದೆ, ಕಾಂಗ್ರೆಸ್ ಭ್ರಷ್ಟಾಚಾರವನ್ನು ಉತ್ತೇಜಿಸುತ್ತದೆ. ಈ ಎರಡೂ ಪಕ್ಷಗಳು ಬಿಹಾರವನ್ನು ಅಭಿವೃದ್ಧಿಗೊಳಿಸಲು ಎಂದಿಗೂ ಸಾಧ್ಯವಿಲ್ಲ,” ಎಂದು ಪ್ರಧಾನಿ ಹೇಳಿದರು.
ಎನ್‌ಡಿಎ ಅಭ್ಯರ್ಥಿಗಳಿಗೆ ಬೆಂಬಲ ನೀಡುವಂತೆ ಕೋರಿದ ಮೋದಿ, “ಬಿಹಾರದ ಅಭಿವೃದ್ಧಿಯಿಲ್ಲದೆ ಭಾರತದ ಅಭಿವೃದ್ಧಿ ಸಾಧ್ಯವಿಲ್ಲ. ಈ ಚುನಾವಣೆ ಬಿಹಾರದ ಭವಿಷ್ಯವನ್ನು ನಿರ್ಧರಿಸುವ ಚುನಾವಣೆಯಾಗಿದೆ,” ಎಂದರು.
ಪ್ರಚಾರ ಗೀತೆಗಳ ಉದಾಹರಣೆ ನೀಡಿ ಅವರು ಹಾಸ್ಯಮಿಶ್ರಿತವಾಗಿ , “ಜಂಗಲ್ ರಾಜ್ ಕಾಲದ ಪ್ರಚಾರ ಗೀತೆಗಳಲ್ಲಿ ಮಕ್ಕಳು ‘ನಾವು ದರೋಡೆಕೋರರಾಗಲು ಬಯಸುತ್ತೇವೆ’ ಎಂದು ಹಾಡುತ್ತಿದ್ದಾರೆ. ಬಿಹಾರದ ಮಕ್ಕಳು ದರೋಡೆಕೋರರಾಗಬೇಕೇ, ವೈದ್ಯರು–ಎಂಜಿನಿಯರ್‌ಗಳಾಗಬೇಕೇ? ನಾವು ಮಕ್ಕಳಿಗೆ ಲ್ಯಾಪ್‌ಟಾಪ್ ಕೊಡುತ್ತಿದ್ದೇವೆ, ಅವರು ಬಂದೂಕು ಕೊಡುತ್ತಿದ್ದಾರೆ,” ಎಂದರು.
ಭ್ರಷ್ಟಾಚಾರ ಮತ್ತು ದುರಾಡಳಿತದ ವಿರುದ್ಧ ಕಿಡಿಕಾರಿದ ಮೋದಿ, “ದುರಾಡಳಿತ ಇರುವಲ್ಲಿ ಅಭಿವೃದ್ಧಿಯ ಕುರುಹೇ ಇರುವುದಿಲ್ಲ. ಭ್ರಷ್ಟಾಚಾರ ಇರುವಲ್ಲಿ ಸಾಮಾಜಿಕ ನ್ಯಾಯವಿಲ್ಲ. ಇಂತಹ ಜನರಿಂದ ಬಿಹಾರಕ್ಕೆ ಒಳ್ಳೆಯದಾಗಲು ಸಾಧ್ಯವಿಲ್ಲ,” ಎಂದು ಹೇಳಿದರು.
ಸೀತಾಮರ್ಹಿಯ ಧಾರ್ಮಿಕ ಪಾವಿತ್ರ್ಯವನ್ನು ಸ್ಮರಿಸಿದ ಅವರು, “2019ರ ನವೆಂಬರ್ 8ರಂದು ಇದೇ ಸೀತಾ ಮಾತೆಯ ಭೂಮಿಯಲ್ಲಿ ನಾನು ರಾಮಮಂದಿರ ತೀರ್ಪಿನ ಮುನ್ನ ಪ್ರಾರ್ಥನೆ ಸಲ್ಲಿಸಿದ್ದೆ. ಸೀತಾ ಮಾತೆಯ ಭೂಮಿಯಲ್ಲಿ ಮಾಡಿದ ಪ್ರಾರ್ಥನೆ ವ್ಯರ್ಥವಾಗಲಿಲ್ಲ. ಸುಪ್ರೀಂ ಕೋರ್ಟ್ ರಾಮಲಲ್ಲಾ ಪರವಾಗಿ ತೀರ್ಪು ನೀಡಿತು,” ಎಂದು ಹೇಳಿದರು.
ಮುಖ್ಯಮಂತ್ರಿ ಮಹಿಳಾ ಉದ್ಯೋಗ ಯೋಜನೆ ಕುರಿತು ಅವರು ಉಲ್ಲೇಖಿಸಿ, “ಮಹಿಳೆಯರ ಖಾತೆಗಳಿಗೆ ₹10,000 ನೇರವಾಗಿ ಜಮಾ ಮಾಡಲಾಗಿದೆ. ಮೋದಿ ಖಾತೆ ತೆರೆದದ್ದರಿಂದ ನಿತೀಶ್‌ಜಿಗೆ ಹಣ ಹಾಕಲು ಸಾಧ್ಯವಾಯಿತು. ಕಾಡು ರಾಜ್ ಇದ್ದಿದ್ದರೆ ಆ ಹಣವೂ ಲೂಟಿಯಾಗುತ್ತಿತ್ತು,” ಎಂದು ಹೇಳಿದರು.
ಹಿಂದಿನ ಕಾಂಗ್ರೆಸ್ ಪ್ರಧಾನಿಯ ಹೇಳಿಕೆಯನ್ನು ಉಲ್ಲೇಖಿಸಿದ ಮೋದಿ, “ದೆಹಲಿಯಿಂದ ಒಂದು ರೂಪಾಯಿ ಹೊರಟರೆ ಹಳ್ಳಿಗೆ ತಲುಪುವ ಹೊತ್ತಿಗೆ 15 ಪೈಸೆ ಆಗುತ್ತದೆ ಎಂದಿದ್ದರು. ಈಗ ಪಾಟ್ನಾದಿಂದ ಒಂದು ರೂಪಾಯಿ ಕಳಿಸಿದರೆ, ಅದು ನೇರವಾಗಿ ನಿಮ್ಮ ಖಾತೆಗೆ 100 ಪೈಸೆಯಾಗಿ ತಲುಪುತ್ತಿದೆ,” ಎಂದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa