ಎಸ್‌ಡಿಸಿ ಕಾಲೇಜಿನಲ್ಲಿ ವಂದೇ ಮಾತರಂಗೆ ೧೫೦ರ ಸಂಭ್ರಮ
ಎಸ್‌ಡಿಸಿ ಕಾಲೇಜಿನಲ್ಲಿ ವಂದೇ ಮಾತರಂಗೆ ೧೫೦ರ ಸಂಭ್ರಮ
ಚಿತ್ರ:ಕೋಲಾರ ಜಿಲ್ಲೆಯ ಬಂಗಾರಪೇಟೆಯ ಎಸ್.ಡಿ.ಸಿ ಕಾಲೇಜಿನಲ್ಲಿ ನಾಡಗೀತೆಗೆ ನೂರು ವರ್ಷಗಳಾದ ಸಂಭ್ರಮದಲ್ಲಿ `ಶತಕಂಠಗಾಯನ'ಎಂಬ ಶೀರ್ಷಿಕೆಯೊಂದಿಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ `ವಿಕ್ರಮ' ವಾರಪತ್ರಿಕೆಯ ಗೌರವ ಸಂಪಾದಕ ನ. ನಾಗರಾಜ್ ಪಾಲ್ಗೊಂಡಿದ್ದರು.


ಕೋಲಾರ, ೦೭ ನವಂಬರ್ (ಹಿ.ಸ) :

ಆಂಕರ್ : `ಸ್ವ'ತ್ವದ ವಿವಿಧ ರೂಪಗಳಾದ ಸ್ವದೇಶಿ, ಸ್ವಭಾಷೆ, ಸ್ವಭಾಷಾ, ಸ್ವಾಭಿಮಾನಗಳ ಅಗತ್ಯತೆ ಹಾಗೂ ಮಹತ್ವದ ಕುರಿತು ವಿದ್ಯಾರ್ಥಿಗಳು ಅರಿಯಬೇಕು, ನಾಡಗೀತೆಯ ಮೂಲಕ ಕನ್ನಡಿಗರೆಲ್ಲಾ ಒಂದೇ ಎಂಬ ಸಂದೇಶವನ್ನು ಸಮಾಜಕ್ಕೆ ಸಾರಬೇಕು ಎಂದು `ವಿಕ್ರಮ' ವಾರಪತ್ರಿಕೆಯ ಗೌರವ ಸಂಪಾದಕ ನ. ನಾಗರಾಜ್ ಕರೆ ನೀಡಿದರು.

ಜಿಲ್ಲೆಯ ಬಂಗಾರಪೇಟೆಯ ಎಸ್.ಡಿ.ಸಿ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವದ ಜತೆಯಲ್ಲೇ ಈ ವರ್ಷ ರಾಷ್ಟ್ರಕವಿ ಕುವೆಂಪು ಅವರು ರಚಿಸಿದ ನಾಡಗೀತೆಗೆ ನೂರು ವರ್ಷಗಳಾದ ಸಂಭ್ರಮದಲ್ಲಿ `ಶತಕಂಠಗಾಯನ'ಎಂಬ ಶೀರ್ಷಿಕೆಯೊಂದಿಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ೧೦೦ ವಿದ್ಯಾರ್ಥಿಗಳೊಂದಿಗೆ ಏಕಕಾಲದಲ್ಲಿ-ಏಕ ಕಂಠದಲ್ಲಿ ನಾಡಗೀತೆ ಹಾಡಿದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.

ಕಾರ್ಯಕ್ರಮದಲ್ಲಿ ಕುವೆಂಪು ಅವರ ನಾಡಗೀತೆಗೆ ಶತಮಾನೋತ್ಸವದ ಸಂಭ್ರಮ ಹಾಗೂ ವಂದೇ ಮಾತರಂ ಗೀತೆಗೆ ೧೫೦ ಸಂಭ್ರಮ ಆಚರಿಸುತ್ತಿರುವ ಕುರಿತು ದಿಕ್ಸೂಚಿ ನುಡಿಗಳನ್ನಾಡಿದ ನ.ನಾಗರಾಜ್, ಅವರು ನಾಡು-ನುಡಿ-ನೆಲ-ಜಲಗಳ ರಕ್ಷಣೆಯಲ್ಲಿ ಯುವಕರ ಪಾತ್ರದ ಬಗ್ಗೆ ಅರಿವು ಮೂಡಿಸಿದರು.

ಕನ್ನಡ ನಾಡಿನ ಏಳ್ಗೆಗಾಗಿ ಶ್ರಮಿಸಿದ ಮಹನೀಯರ ಆದರ್ಶ ಪಾಲಸುವುದು ಅಗತ್ಯ, ಕನ್ನಡ ನಾಡು,ನುಡಿಗೆ ಧಕ್ಕೆ ಬರುವಂತಾದರೆ ಯಾವುದೇ ಹೋರಾಟಕ್ಕೂ ನಾವು ಸಿದ್ದರಾಗಬೇಕೆಂದರು. ಕನ್ನಡವನ್ನು ಸ್ವಷ್ಟವಾಗಿ ಓದುವ, ಬರೆಯುವ, ಮಾತನಾಡುವುದನ್ನು ಚೆನ್ನಾಗಿ ಕಲಿತರೆ ಅದೇ ನಾಡು,ನುಡಿಗೆ ನೀಡುವಂತಹ ಗೌರವವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಕನ್ನಡ ಕೇವಲ ಮಾತೃಭಾಷೆಯಾಗಿ ಮಾತ್ರವಲ್ಲದೆ ಪ್ರಾಕೃತಿಕವಾಗಿ, ಭೌಗೋಳಿಕವಾಗಿ ಹಾಗೂ ಆಡಳಿತಾತ್ಮಕವಾಗಿಯೂ ಕನ್ನಡ ಭಾಷೆಯೇ ಪ್ರಧಾನವಾಗಿರಬೇಕು ಎಂದು ಹೇಳಿದ ಅವರು, ಕನ್ನಡ ಭಾಷೆಯ ಇತಿಹಾಸ ಹಿರಿಮೆ ಗರಿಮೆಗಳಿಂದ ಕೂಡಿದ್ದು, ಯಾವುದೇ ಹಿಂಜರಿಕೆ ಮತ್ತು ಕೀಳರಿಮೆ ಇಲ್ಲದೆ ಕನ್ನಡವನ್ನು ಬಳಸಬೇಕು ಎಂದು ಹೇಳಿದರು.

ಸುಮಾರು ೨೫೦೦ ವರ್ಷಗಳ ಇತಿಹಾಸವಿರುವ ಕನ್ನಡವು ಕಲ್ಲಿನ ಮೇಲಿನ ಕೆತ್ತನೆಗಳಿಂದ ಆರಂಭಿಸಿ ತಾಳೇಗರಿಯಿಂದ ಮುಂದುವರೆದು ಇದೀಗ ಎಐ ತಂತ್ರeನದವರೆವಿಗೂ ಅಳವಡಿಕೆಯಾಗಿದೆ, ಕನ್ನಡ ಭಾಷೆಯು ಅಂಕಿ ಸಂಖ್ಯೆಗಳುಳ್ಳ ಸರ್ವಾಂಗೀಣ ಭಾಷೆಯಾಗಿದ್ದು, ಇದು ದ್ರಾವಿಡ ಭಾಷೆಗಳಲ್ಲಿ ವೈಶಿಷ್ಟ್ಯಪೂರ್ಣವಾಗಿದೆ ಎಂದರು.

ಕಾಲೇಜಿನ ಪ್ರಾಂಶುಪಾಲರಾದ ಡಾ. ಎಸ್.ಎ. ಜಗದೀಶ್ ರವರು ಕನ್ನಡ ಸಾಹಿತ್ಯವನ್ನು ಓದುವ ಹವ್ಯಾಸ ರೂಡಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಕರೆ ನೀಡಿ, ಏಕೀಕರಣದ ಕುರಿತು ಭಾಷಣ ಮಾಡಿ, ಕನ್ನಡ ಏಕೀಕರಣಕ್ಕಾಗಿ ನಡೆದ ಹೋರಾಟದ ಕುರಿತು ಮಾಹಿತಿ ನೀಡಿ, ನಾಡು ಕಟ್ಟಲು ಹೋರಾಡಿದ ಮಹನೀಯರ ಆದರ್ಶ ಪಾಲಿಸಲು ಕೋರಿದರು.

ಕನ್ನಡ ಭಾಷೆಯು ಇಂದಿಗೂ ಜನಮಾನಸದಲ್ಲಿ ನಿತ್ಯದ ಬದುಕಿನಲ್ಲಿ ಹಾಸುಹೊಕ್ಕಾಗಿರಲು ಪ್ರತಿಯೊಬ್ಬ ಕನ್ನಡಿಗನ ಪ್ರಯತ್ನ ಅಗತ್ಯವಾಗಿದೆ ಎಂದರು.

ಬಂಕಿಮ ಚಂದ್ರ ಚಟರ್ಜಿ ರವರು ರಚಿಸಿದ ರಾಷ್ಟ್ರ ಗಾನ ವಂದೇಮಾತರಂ ಗೀತೆಗೆ ೧೫೦ ವರ್ಷಗಳು ತುಂಬಿದ ಈ ವಿಶೇಷ ಸಂದರ್ಭದಲ್ಲಿ ವಿದ್ಯಾರ್ಥಿಗಳಿಲ್ಲರೂ ಒಟ್ಟಿಗೆ ವಂದೇಮಾತರಂ ಗೀತೆಯನ್ನು ಹಾಡಿ ಗೌರವ ಸಮರ್ಪಿಸಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಎಲ್ಲಾ ಉಪನ್ಯಾಸಕರು ಹಾಗೂ ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಚಿತ್ರ : ಕೋಲಾರ ಜಿಲ್ಲೆಯ ಬಂಗಾರಪೇಟೆಯ ಎಸ್.ಡಿ.ಸಿ ಕಾಲೇಜಿನಲ್ಲಿ ನಾಡಗೀತೆಗೆ ನೂರು ವರ್ಷಗಳಾದ ಸಂಭ್ರಮದಲ್ಲಿ `ಶತಕಂಠಗಾಯನ'ಎಂಬ ಶೀರ್ಷಿಕೆಯೊಂದಿಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ `ವಿಕ್ರಮ' ವಾರಪತ್ರಿಕೆಯ ಗೌರವ ಸಂಪಾದಕ ನ. ನಾಗರಾಜ್ ಪಾಲ್ಗೊಂಡಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande