
ಬೆಂಗಳೂರು, 07 ನವೆಂಬರ್ (ಹಿ.ಸ.) :
ಆ್ಯಂಕರ್ : ಕಬ್ಬು ಬೆಳೆಗಾರರ ಸಮಸ್ಯೆ ಮತ್ತು ಸಕ್ಕರೆ ಕಾರ್ಖಾನೆಗಳ ಅಸಮಾಧಾನ ಕುರಿತಂತೆ ಇಂದು ವಿಧಾನ ಸೌಧ ಸಭಾಂಗಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಪಾತ್ರ, ಎಫ್ ಆರ್ ಪಿ ದರ, ಸಕ್ಕರೆ ರಫ್ತು ನಿರ್ಬಂಧ ಮತ್ತು ವಿದ್ಯುತ್ ತೆರಿಗೆ ಕುರಿತಂತೆ ವಿಶ್ಲೇಷಣಾತ್ಮಕ ಚರ್ಚೆ ನಡೆಯಿತು.
“ಸಕ್ಕರೆ ಉತ್ಪಾದನೆ ಮತ್ತು ಮಾರಾಟ, ಎಥೆನಾಲ್ ಉತ್ಪಾದನೆ ಹಾಗೂ ಬೆಲೆ ನಿಗಧಿ, ಸಕ್ಕರೆ ರಫ್ತು ಎಲ್ಲವೂ ಕೇಂದ್ರ ಸರ್ಕಾರದ ಕೈಯಲ್ಲಿದೆ. ಕೇಂದ್ರದ ನೀತಿಗಳು ದಕ್ಷಿಣ ಭಾರತದ ಕಾರ್ಖಾನೆಗಳಿಗೆ ತೊಂದರೆಯಾಗುತ್ತಿದ್ದು, ಉತ್ತರ ಭಾರತಕ್ಕೆ ಅನುಕೂಲವಾಗಿವೆ ಸಭೆಯಲ್ಲಿ ಕಾರ್ಖಾನೆ ಮಾಲೀಕರು ಹೇಳಿದರು
ಈ ಸಂದರ್ಭ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ “ರೈತರ ಬೇಡಿಕೆ ಈಡೇರಿಸುವ ಜವಾಬ್ದಾರಿ ಕೇಂದ್ರದ ಮೇಲಿದ್ದು, ಕಾರ್ಖಾನೆಗಳಿಗೂ ತಮ್ಮ ಪಾತ್ರವಿದೆ. ನಾವು ರೈತರ ಪರ ನಿಂತಿದ್ದೇವೆ. ರೈತರ ಸಮಸ್ಯೆ ಬಗೆಹರಿಸಲು ನೀವೂ ಸಹ ಸಿದ್ದರಾಗಬೇಕು,” ಎಂದು ಕಾರ್ಖಾನೆ ಮಾಲೀಕರಿಗೆ ಕರೆ ನೀಡಿದರು.
ಸಿದ್ದರಾಮಯ್ಯ ಅವರು ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುವ ಸಮಸ್ಯೆಗಳನ್ನು ಬಗೆಹರಿಸಲು ಮರುಪರಿಶೀಲನೆ ಮಾಡುವುದಾಗಿ ಭರವಸೆ ನೀಡಿದರು.
ಸಭೆಯ ಪ್ರಮುಖ ಅಂಶಗಳು:
ಕಬ್ಬು ಬೆಳೆಗಾರರಿಗೆ ನೆರವಾಗುವುದು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಸಂಯುಕ್ತ ಜವಾಬ್ದಾರಿ.
ಕೇಂದ್ರ ಸರ್ಕಾರವು ಮೇ 6, 2025ರಂದು ಎಫ್ಆರ್ಪಿ ನಿಗದಿಪಡಿಸಿದ್ದು, ಅದರಲ್ಲೇ ಸಾಗಾಟ ಮತ್ತು ಕಟಾವು ವೆಚ್ಚ ಸೇರಿದೆ.
ಸಕ್ಕರೆಯ ಎಂಎಸ್ಪಿ ಹೆಚ್ಚಳಕ್ಕಾಗಿ ರಾಜ್ಯ ಸರ್ಕಾರ ಈಗಾಗಲೇ ಕೇಂದ್ರಕ್ಕೆ ಮನವಿ ಸಲ್ಲಿಸಿದೆ. ಸಕ್ಕರೆ ಕಾರ್ಖಾನೆಗಳು ಮಾರಾಟ ಮಾಡುವ ವಿದ್ಯುತ್ ಮೇಲೆ ವಿಧಿಸಿರುವ ಪ್ರತಿ ಯುನಿಟ್ಗೆ 60 ಪೈಸೆ ತೆರಿಗೆ ಮರುಪರಿಶೀಲನೆಗೆ ಒಳಪಡಲಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ಮುರುಗೇಶ್ ನಿರಾಣಿ ಅವರು ಕಾರ್ಖಾನೆ ಮಾಲೀಕರ ಪರವಾಗಿ ಮಾತನಾಡಿ, “ಸಕ್ಕರೆ ಕಾರ್ಖಾನೆಗಳಿಂದ ಖರೀದಿಸಲಾಗುವ ವಿದ್ಯುತ್ ಒಪ್ಪಂದವನ್ನು ರಾಜ್ಯ ಸರ್ಕಾರ ನವೀಕರಿಸಬೇಕು. ಮಹಾರಾಷ್ಟ್ರದಲ್ಲಿ ಪ್ರತಿ ಯುನಿಟ್ಗೆ ರೂ.6 ಪಾವತಿಸಲಾಗುತ್ತಿದೆ. ಇದೇ ಮಾದರಿಯನ್ನು ಕರ್ನಾಟಕದಲ್ಲೂ ಅನುಸರಿಸಬೇಕು,” ಎಂದು ಮನವಿ ಮಾಡಿದರು.
ಕಾರ್ಖಾನೆಗಳ ನಡುವಿನ ಅಂತರ ಕನಿಷ್ಠ 25 ಕಿಮೀ ಇರಬೇಕು. ಏವಿಯೇಷನ್ ಇಂಧನಕ್ಕೆ ಎಥೆನಾಲ್ ಮಿಶ್ರಣ ಅನುಮತಿಯನ್ನು ಬೇಗನೆ ನೀಡುವಂತೆ ಪ್ರಧಾನಿ ಅವರಿಗೆ ಮನವಿ ಮಾಡಬೇಕು. ಪ್ರಸ್ತುತ ರೈತರಿಗೆ ಎಫ್ಆರ್ಪಿ ಪ್ರಕಾರ ಪಾವತಿ ನೀಡುತ್ತಿದ್ದು, ಹೆಚ್ಚುವರಿ ಆದಾಯ ಬಂದರೆ ಸೀಸನ್ ಮುಗಿದ ಬಳಿಕ ಹಂಚಲು ಸಿದ್ಧರಿದ್ದೇವೆ,” ಎಂದು ತಿಳಿಸಿದರು.
ಕಾರ್ಖಾನೆ ಮಾಲೀಕರ ಸಂಘದ ಅಧ್ಯಕ್ಷರು ಮಾತನಾಡಿ “ಎಥೆನಾಲ್ ಎಂಎಸ್ಪಿ ಹೆಚ್ಚಳಕ್ಕಾಗಿ ರಾಜ್ಯದ ಮನವಿಗೂ ಕೇಂದ್ರದಿಂದ ಸ್ಪಂದನೆ ಇಲ್ಲ. ಸಕ್ಕರೆ ರಫ್ತಿನ ಮೇಲೆ ನಿರ್ಬಂಧದಿಂದ ಕಾರ್ಖಾನೆಗಳು ನಷ್ಟ ಅನುಭವಿಸುತ್ತಿವೆ. ಕಳೆದ ಆರು ವರ್ಷಗಳಿಂದ ಸಕ್ಕರೆ ದರ ಪರಿಷ್ಕೃತವಾಗಿಲ್ಲ, ಆದರೆ ಕಬ್ಬಿನ ದರ ವರ್ಷದಿಂದ ವರ್ಷಕ್ಕೆ ಏರುತ್ತಿದೆ. ಈ ಪರಿಸ್ಥಿತಿಯಲ್ಲಿ ಎಫ್ಆರ್ಪಿ ಪ್ರಕಾರ ಪಾವತಿಸಲು ಕಷ್ಟವಾದರೂ ಕಾನೂನಾತ್ಮಕ ಬದ್ಧತೆಯಿಂದ ರೈತರಿಗೆ ಪಾವತಿಸಲಾಗುತ್ತಿದೆ ಎಂದರು.
ಸಭೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೃಷಿ ಸಚಿವರು, ಹಣಕಾಸು ಅಧಿಕಾರಿಗಳು, ಕಾರ್ಖಾನೆ ಮಾಲೀಕರ ಸಂಘದ ಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa