
ಕೋಲಾರ, 0೪ ನವಂಬರ್ (ಹಿ.ಸ.) :
ಆ್ಯಂಕರ್ : ಬಹುಮುಖ ಪ್ರತಿಭೆಯ ನಿರಂಜನ ಒಬ್ಬ ಜನಮುಖಿ ಸಾಹಿತಿಯಾಗಿದ್ದರು. ಅವರ ಚಿಂತನೆಗಳು ಪ್ರಸಕ್ತ ಸಾಮಾಜಿಕ ಪರಿಸರದಲ್ಲಿ ತುಂಬಾ ಪ್ರಸ್ತುತವಾಗಿವೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್ ಅಭಿಪ್ರಾಯ ಪಟ್ಟಿದ್ದಾರೆ.
ಕ್ರಿಯಾ ಮಾಧ್ಯಮ ಮತ್ತು ಜನ ಶಿಕ್ಷಣ ಟ್ರಸ್ಟ್ ಅಕ್ಟೋಬರ್ ೩೧ರಂದು ಬೆಂಗಳೂರಿನಲ್ಲಿ ಏರ್ಪಡಿಸಿದ್ದ ನಿರಂಜನ ಶತಮಾನ ಸಮಾರೋಪ ವಿಚಾರ ಸಂಕಿರಣ ಮತ್ತು ನಿರಂಜನ ಮರು ಓದು ಸರಣಿ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪತ್ರಕರ್ತ, ಲೇಖಕ ವಿಶ್ವ ಕುಂದಾಪುರ ಸಂಪಾದಿತ ‘ನಿರಂಜನ ಆಯ್ದ ಅಂಕಣ ಬರಹಗಳು’ ಸಹಿತ ನಾಲ್ಕು ಕೃತಿಗಳನ್ನು ಮುಕುಂದ ರಾಜ್ ಲೋಕಾರ್ಪಣೆಗೊಳಿಸಿದರು.
ನಿರಂಜನ ಬದುಕು ಬರಹಗಳ ಕತೆ (ತೇಜಸ್ವಿನಿ ನಿರಂಜನ), ನಿರಂಜನ ಆಯ್ದ ಕತೆಗಳು (ಎಂ.ಜಿ. ಹೆಗಡೆ) ಮತ್ತು ನಿರಂಜನ ಆಯ್ದ ಸಾಹಿತ್ಯಕ ಬರಹಗಳು (ಮೀನಾಕ್ಷಿ ಬಾಳಿ) ಬಿಡುಗಡೆಯಾದ ಇತರ ಕೃತಿಗಳು.
ನಿರಂಜನರ ಅಂಕಣ ಬರಹಗಳ ಪ್ರಸ್ತುತತೆಯನ್ನು ವಿಶ್ವ ಕುಂದಾಪುರ ತಮ್ಮ ಸಂಪಾದಕೀಯ ಟಿಪ್ಪಣಿಯಲ್ಲಿ ಸೂಕ್ತವಾಗಿ ಬಿಂಬಿಸಿದ್ದಾರೆ ಎಂದು ವಿಚಾರ ಸಂಕಿರಣದಲ್ಲಿ ಮಾತನಾಡಿದ ಮರು ಓದು ಸರಣಿಯ ಪ್ರಧಾನ ಸಂಪಾದಕರಾದ ಮಹಾನ್ ಬರಹಗಾರನ ಹಿರಿಯ ಪುತ್ರಿ ತೇಜಸ್ವಿನಿ ನಿರಂಜನ ಹೇಳಿದರು.
ಆಯ್ದ ಅಂಕಣ ಬರಹ ಪುಸ್ತಕ ಪರಿಚಯಿಸಿದ ಪತ್ರಕರ್ತ ನವೀನ್ ಸೂರಿಂಜೆ, ಪ್ರಸ್ತುತ ಕಾಲಘಟ್ಟದಲ್ಲಿ ಇದೊಂದು ಮಹತ್ವದ ಕೃತಿಯಾಗಿದೆ ಹಿರಿಯ ವಿಮರ್ಶಕ ರಾಜೇಂದ್ರ ಚೆನ್ನಿ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಆಶಯ ಮಾಡಿದರು.
ಬಹು ಪ್ರಗತಿಶೀಲರಾದ ನಿರಂಜನ ಅವರು ಚಿರಸ್ಮರಣೀಯರೂ ಹೌದು ಮೃತ್ಯುಂಜಯರೂ ಹೌದು ಎಂದು ಚೆನ್ನಿ ವಿಶ್ಲೇಷಿಸಿದರು.
ವಿಮರ್ಶಕ ಎಂ.ಜಿ. ಹೆಗಡೆ ಜ್ಞಾನ ಸಾಹಿತ್ಯಕ್ಕೆ ನಿರಂಜನರ ಕೊಡುಗೆ ಮತ್ತು ನಿರಂಜನರ ಕಥನ ಸಾಹಿತ್ಯದಲ್ಲಿ ಮಹಿಳಾ ಪ್ರಶ್ನೆ ಕುರಿತು ಲೇಖಕಿ ಎನ್. ಗಾಯತ್ರಿ ಪ್ರಬಂಧ ಮಂಡಿಸಿದರು. ರಂಗನಾಥ ಕಂಟನಕುಂಟೆ, ಅನಂತ ಶಾಂದ್ರೇಯ ಮತ್ತು ಪ್ರತಿಭಾ ಭಟ್ ಇತರ ಪುಸ್ತಕಗಳನ್ನು ಪರಿಚಯಿಸಿದರು.
ಉಭಯ ಸಂಸ್ಥೆಗಳ ಪ್ರಮುಖರಾದ ಎನ್.ಕೆ. ವಸಂತರಾಜ್, ಕೆ.ಎಸ್. ವಿಮಲಾ, ಛಾಯಾ, ಎನ್.ಕೆ. ವೇದರಾಜ್ ಮೊದಲಾದವರು ಇದ್ದರು.
ಚಿತ್ರ : ಪತ್ರಕರ್ತ, ಲೇಖಕ ವಿಶ್ವ ಕುಂದಾಪುರ ಸಂಪಾದಿತ ‘ನಿರಂಜನ ಆಯ್ದ ಅಂಕಣ ಬರಹಗಳು’ ಸಹಿತ ನಾಲ್ಕು ಕೃತಿಗಳನ್ನು ಬೆಂಗಳೂರಿನಲ್ಲಿ ಮುಕುಂದ ರಾಜ್ ಲೋಕಾರ್ಪಣೆಗೊಳಿಸಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್