
ಕೋಲಾರ, 0೪ ನವಂಬರ್ (ಹಿ.ಸ) :
ಆ್ಯಂಕರ್ : ಕನ್ನಡನೆಲದ ಸೀಮಾತೀತ ಜಾನಪದೀಯ ವಿವೇಕವನ್ನು ತನ್ನ ತ್ರಿಪದಿಗಳ ಮೂಲಕ ಉಜ್ವಲಗೊಳಿಸಿದ ವಿಶ್ವಮತೀಯ ಜನತಾ ಕವಿ ಸರ್ವಜ್ಞ ಎಂದು ಕ್ರಿಸ್ತು ಜಯಂತಿ ಡೀಮ್ಡ್ ವಿಶ್ವವಿದ್ಯಾನಿಲಯದ ಕನ್ನಡ ಸಹಾಯಕ ಪ್ರಾಧ್ಯಾಪಕರಾದ ಡಾ.ಎಂ.ಭೈರಪ್ಪ ಅಭಿಪ್ರಾಯಪಟ್ಟರು.
ಮೈಸೂರಿನ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ವತಿಯಿಂದ ಅಂತರ್ಜಾಲದಲ್ಲಿ ಆಯೋಜಿಸಲಾಗಿದ್ದ ಕನ್ನಡ ನಿತ್ಯೋತ್ಸವ ಸರಣಿ ಉಪನ್ಯಾಸ ಕಾರ್ಯಕ್ರಮದಲ್ಲಿ 'ಸರ್ವಜ್ಞನ ತ್ರಿಪದಿಗಳು' ಕುರಿತು ಉಪನ್ಯಾಸ ನೀಡಿದರು.
ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ವಚನೋತ್ತರ ಯುಗಮಾನದಲ್ಲಿ ಮೂಡಿಬಂದ ಸರ್ವಜ್ಞ ಕವಿಯು ತನ್ನ ತ್ರಿಪದಿ ರೂಪದ ವಚನಗಳಲ್ಲಿ ತನ್ನ ಹಿಂದಣ ಪರಂಪರೆಯ ವಚನಕಾರರು ಮೊದಲಾದವರಿಂದ ಪಡೆದ ಅರಿವನ್ನು ಚಲನಶೀಲಗೊಳಿಸಿದನು. ಈತನಲ್ಲಿ ಏಕಮತೀಯತೆ ಕಾಣುವುದಿಲ್ಲ. ಬದಲಾಗಿ ಮತಾತೀತ ಮಾನವೀಯತೆ ಹಾಗೂ ಬಹುಮತಗಳ ಸಾಮರಸ್ಯ ಕಾಣುತ್ತದೆ. ಜೈನ-ಬೌದ್ಧ-ಶೈವ-ವೈಷ್ಣವ ಮತಾದಿಗಳ ಮೈತ್ರಿ ಹಾಗೂ ಶ್ರಮಣಧಾರೆಗಳ ಸರ್ವಜ್ಞಮತಿ ಕಾಣುತ್ತದೆ ಎಂದರು.
ಕವಿಯೇ ಹೇಳಿಕೊಂಡಿರುವಂತೆ ತನಗೆ ಸರ್ವಜ್ಞತನ ದಕ್ಕಿದ್ದು ಸರ್ವರೊಳಗೆ ಒಂದಾಗಿ, ಒಂದೊಂದು ನುಡಿಯ ಕಲಿತ ಕಾರಣದಿಂದ. ಸರ್ವಜನರ ಅರಿವನ್ನೂ ತನ್ನೊಳಗೆ ಅಂತಸ್ಥ ಮಾಡಿಕೊಂಡ ಸರ್ವಜ್ಞನು ಕಿಂಚಿತ್ತೂ ಅಹಂಕಾರವಿರದ ವಿದ್ಯೆ ಹಾಗೂ ವಿನಮ್ರತೆಯ ಮೇರುಶಿಖರ. ಸರ್ವಜ್ಞನ ಹೆಸರೇ ಸೂಚಿಸುವಂತೆ ಲೋಕದ ಸರ್ವಸಂಗತಿಗಳ ಒಳಹೊರಗನ್ನು ೩೬೦ ಡಿಗ್ರಿ ರೀತಿಯ ಸಮಗ್ರನೋಟದಲ್ಲಿ ಗ್ರಹಿಸಿ ಅರುಹಿದ ಬಗೆಯು ಅನುಕರಣೀಯ ಎಂದು ತಿಳಿಸಿದರು.
ಪ್ರಕೃತಿ ಮತ್ತು ಸಂಸ್ಕೃತಿಗಳನ್ನು ಬಹುಶಿಸ್ತೀಯ ನೆಲೆಯಲ್ಲಿ, ತನ್ನರಿವು ಮತ್ತು ಲೋಕದರಿವಿನಿಂದಿಗೆ ಅನುಸಂದಾನ ಮಾಡಿದ ಜನತಾಕವಿ(ಪೀಪಲ್ಸ್ ಪೊಯೆಟ್) ಸರ್ವಜ್ಞ. ಪರಂಪರೆಯನ್ನು ಮೌಲ್ಯೀಕರಣಕ್ಕೆ ಒಡ್ಡಿ ವರ್ತಮಾನ ಹಾಗೂ ಭವಿಷ್ಯಕ್ಕೆ ಬೇಕಾದ ಅರಿವನ್ನು ಬೆಳಗಿದ ದಾರ್ಶನಿಕ ಕವಿಯೂ ಹೌದು. ಮಧ್ಯಯುಗೀನ ಕರ್ನಾಟಕ ಚರಿತ್ರೆ ಕಂಡ ಸಾಂಸ್ಕೃತಿಕ ದೀಪಧಾರಿಯೂ ಹೌದು. ಯಾವುದೇ ಕೇಡಿಲ್ಲದೆ, ಮುಲಾಜಿಲ್ಲದೆ ಜೀವಮುಖಿ, ಜನಮುಖಿ ಹಾಗೂ ಜೀವನ್ಮುಖಿಯಾಗಿ ಲೋಕವನ್ನು ತಿದ್ದಿತೀಡಿದ ನೇರ ನುಡಿಕಾರ ಎಂದು ಅಭಿಪ್ರಾಯಪಟ್ಟರು.
ಬಹುಶಃ ಸರ್ವಜ್ಞ ಕವಿಯು ಜನತಾಕವಿ ಹಾಗೂ ಜನಪ್ರಿಯ ಕವಿಯಾದ್ದರಿಂದ ಸಹಜವಾಗಿಯೇ ಆತನ ಜಾನಪದರೂಪೀ ತ್ರಿಪದಿಗಳ ಮಹಾಧಾರೆಯಲ್ಲಿ ಕವಿಪರವಾದ ಅತಿಭಾವನಾತ್ಮಕ ಪ್ರೀತಿಯಿಂದ ಅನೇಕ ತ್ರಿಪದಿಗಳು ಸೇರಿದಂತೆಯೇ, ಕವಿವಿರೋಧಿಯಾದ ಅತಿಬೌದ್ಧಿಕ ಕುತಂತ್ರದಲ್ಲಿಯೂ ಅನೇಕ ತ್ರಿಪದಿಗಳು ಸೇರಿಕೊಂಡಿರುವುದನ್ನು ಕಾಣಬಹುದಾಗಿದೆ.
ವಿದ್ವಾಂಸರು ಗುರುತಿಸಿರುವಂತೆ ಸರ್ವಜ್ಞ ವಚನಗಳ ರಾಚನಿಕ, ಅಭಿವ್ಯಕ್ತಾತ್ಮಕ ಹಾಗೂ ಆಶಯಾತ್ಮಕ ಅಂತಸ್ಸತ್ವವನ್ನು ಸೂಕ್ಷ್ಮತೆಯಲ್ಲಿ ಗ್ರಹಿಸಿದರೆ ನಿಜವಚನಗಳು ದಕ್ಕುತ್ತವೆ ಎಂದರು.
ಸರ್ವಜ್ಞ ವಚನಗಳೆಂಬೋ ಸುಧಾಸಾಗರವು ಅರಿವಿನ ಅಕ್ಷಯನಿಧಿಯಾಗಿದೆ. ಸರ್ವಕಾಲಕ್ಕೂ ಸಲ್ಲಬಲ್ಲ ಸಮೃದ್ಧ ಬೆಳಕಿನ ದಿಟಪುಂಜಗಳಾಗಿವೆ. ಸರ್ವಜ್ಞ ಸುಧಾಮೃತವನ್ನುಂಡು ದಿಟದ ಬೆಳಕಿನಲ್ಲಿ ಮತಿಯರಳಿ ಸರ್ವಜನಾಂಗದೊಳಗೂ ಸದ್ವಿವೇಕ ವಿಕಾಸಗೊಳ್ಳಲಿ, ವಿಶ್ವಾತ್ಮಕಗೊಳ್ಳುವಂತಾಗಲಿ. ಜಾಗತೀಕರಣ, ಜಾತೀಕರಣ ಸಂದರ್ಭದಲ್ಲಿ ನರಳುತ್ತಿರುವ ಮತ್ತು ಅರಳಬೇಕಾಗಿರುವ ಜನಮನಂಗಳು ಸರ್ವಜ್ಞಮತಿಯಲ್ಲಿ ಜಾಗೃತಗೊಳ್ಳಲಿ ಎಂದು ತಿಳಿಸಿದರು.
ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೇಂದ್ರದ ಯೋಜನಾ ನಿರ್ದೇಶಕರಾದ ಡಾ.ನೀಲಗಿರಿ ಎಂ.ತಳವಾರ್ ಅವರು ವಹಿಸಿದ್ದರು. ಕಾರ್ಯಕ್ರಮದ ಸಂಚಾಲಕರಾದ ಅಸೋಸಿಯೇಟ್ ಫೆಲೋ ಡಾ.ರಾಧಾಮಣಿ ಎಂ.ಎ ಅವರು ನಿರ್ವಹಿಸಿದರು. ಕೇಂದ್ರದ ಹಿರಿಯ ವಿದ್ವಾಂಸರಾದ ಡಾ.ಆರ್.ಚಲಪತಿ, ಡಾ.ಸಣ್ಣಪಾಪಯ್ಯ, ಡಾ.ಮಾಲಿನಿ ಅಭ್ಯಂಕರ್, ಡಾ.ಮರಿಸ್ವಾಮಿ ಮೊದಲಾದವರು ಉಪಸ್ಥಿತರಿದ್ದರು.
ಚಿತ್ರ : ಕುಪ್ಪಳ್ಳಿ ಭೈರಪ್ಪ
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್