
ಗದಗ, 27 ನವೆಂಬರ್ (ಹಿ.ಸ.) :
ಆ್ಯಂಕರ್ : ಗದಗ ನಗರದ ಮುಳಗುಂದ ನಾಕಾ ಬಳಿಯ ದುರ್ಗಾ ಬಾರ್ ಎದುರು, ದಾಸರ ಓಣಿಯ ಅರುಣ್ ಕುಮಾರ್ ಕೋಟೆಕಲ್ ಎಂಬ ಯುವಕನ ಮೇಲೆ ಮೂವರು ಯುವಕರು ಸೇರಿ ಮಾರಣಾಂತಿಕ ದಾಳಿ ನಡೆಸಿದ್ದಾರೆ.
ಸೆಪ್ಟೆಂಬರ್ ತಿಂಗಳಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ನಡೆದಿದ್ದ ಗಲಾಟೆಗೆ ಪ್ರತೀಕಾರವಾಗಿ ಈ ದಾಳಿ ನಡೆದಿರುವ ಮಾಹಿತಿ ಹೊರಬಿದ್ದಿದೆ. ಗುರಾಯಿಸಿದ ವಿಚಾರಕ್ಕೆ ಅರುಣಕುಮಾರ್ ಮುಸ್ತಾಕ್ ಹಾಗೂ ಇನ್ನೂ ಆರು ಜನರ ಮೇಲೆ ಹಲ್ಲೆ ನಡೆಸಿದ್ದ ಎನ್ನಲಾಗುತ್ತಿದೆ. ಇದೇ ಹಳೆಯ ವೈಮನಸ್ಯದ ಹಿನ್ನೆಲೆಯಲ್ಲಿ ಮುಸ್ತಾಕ್, ಅಭಿಷೇಕ್ ಹಾಗೂ ಸಾಹಿಲ್ ಸೇರಿ ಹಲ್ಲೆ ಮಾಡಿದ್ದಾರೆ.
ಘಟನಾ ಸ್ಥಳದಲ್ಲಿ ಬಿಯರ್ ಬಾಟಲ್ ನಿಂದ ಮನಸೋ ಇಚ್ಛೆ ಹಲ್ಲೆ ಮಾಡಿರುವ ದೃಶ್ಯ ಸ್ಥಳೀಯರ ಮೊಬೈಲ್ ನಲ್ಲಿ ಸೆರೆ ಸಿಕ್ಕಿದೆ. ನಂತರ ತಲವಾರ್ ನಿಂದಲೂ ಅರುಣ್ ಕುಮಾರ್ ಮೇಲೆಗೆ ಭೀಕರ ಹಲ್ಲೆ ನಡೆದಿದ್ದು, ಈ ದೃಶ್ಯ ನೋಡಿದ ಸಾರ್ವಜನಿಕರು ಬೆಚ್ಚಿಬಿದ್ದಿದ್ದಾರೆ.
ಈ ದಾಳಿಯಲ್ಲಿ ಅರುಣ್ ಕುಮಾರ್ ತಲೆ, ಕಿವಿ, ಭುಜ ಹಾಗೂ ಹೊಟ್ಟೆ ಭಾಗಕ್ಕೆ ಗಂಭೀರ ಗಾಯವಾಗಿದ್ದು, ಗಾಯಾಳುವನ್ನ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗೆ ಒಳಪಡಿಸಲಾಗಿದೆ.
ಗದಗ ಶಹರ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ಹಲ್ಲೆ ಮಾಡಿದ ಮುಸ್ತಾಕ್, ಅಭಿಷೇಕ್ ಹಾಗೂ ಸಾಹಿಲ್ ನನ್ನು ಬಂಧಿಸಿದ್ದಾರೆ. ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಇನ್ನೂ ಹೆಚ್ಚಿನ ತನಿಖೆಯನ್ನು ನಡೆಸಲಾಗುತ್ತಿದೆ ಎಂದು ಗದಗ ಎಸ್ಪಿ ರೋಹನ್ ಜಗದೀಶ್ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / lalita MP