
ಕುಕನೂರು, 26 ನವೆಂಬರ್ (ಹಿ.ಸ.) :
ಆ್ಯಂಕರ್ : ಹತ್ತನೇ ತರಗತಿಯ ವಿದ್ಯಾಭ್ಯಾಸಕ್ಕಾಗಿ ಹಾಸ್ಟಲ್‍ನಲ್ಲಿದ್ದ ವಿದ್ಯಾರ್ಥಿನಿಯು ಬುಧವಾರ ನಸುಕಿನಲ್ಲಿ ನವಜಾತ ಗಂಡು ಶಿಶುವಿಗೆ ಜನ್ಮ ನೀಡಿರುವ ಘಟನೆ ಕುಕನೂರು ತಾಲೂಕಿನ ವಸತಿನಿಲಯದಲ್ಲಿ ನಡೆದಿದೆ.
ಕುಕನೂರು ತಾಲೂಕಿನ ವಸತಿ ಶಾಲೆಯಲ್ಲಿದ್ದ 10ನೇ ತರಗತಿಯ ವಿದ್ಯಾರ್ಥಿನಿ ದಿಢೀರ್ ಹೊಟ್ಟೆನೋವಿನಿಂದ ನರಳಾಡಿದ ಕಾರಣ ಆಕೆಯನ್ನು ತಕ್ಷಣ ಕೊಪ್ಪಳದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಯ ಸಂದರ್ಭದಲ್ಲಿ ಆಕೆ ಗರ್ಭಿಣಿ ಎಂದು ತಿಳಿದು, ವೈದ್ಯರು ಸುರಕ್ಷಿತ ಹೆರಿಗೆಗೆ ಸೂಕ್ತ ಕ್ರಮ ಕೈಗೊಂಡರು.
ಈ ಘಟನೆಯ ಮಾಹಿತಿ ಪಡೆದ ಜಿಲ್ಲಾಧಿಕಾರಿ ಸುರೇಶ್ ಇಟ್ನಾಳ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ದಿ ಅವರು ತಕ್ಷಣವೇ ಆಸ್ಪತ್ರೆಗೆ ಭೇಟಿ ನೀಡಿ, ಬಾಲಕಿಯ ಆರೋಗ್ಯ ವಿಚಾರಿಸಿದ್ದಾರೆ. ಅಲ್ಲದೇ ಕುಕನೂರು ಪೊಲೀಸರು ತ್ವರಿತ ಕಾರ್ಯಾಚರಣೆ ನಡೆಸಿ, ಬಾಲಕಿಯ ಈ ಸ್ಥಿತಿಗೆ ಕಾರಣನಾದ ಯುವಕನನ್ನು ಬಂಧಿಸಿ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿಸಿ ತನಿಖೆ ಪ್ರಾರಂಭಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಬಾಲಕಿ 9 ತಿಂಗಳು ಗರ್ಭಿಣಿಯಾಗಿದ್ದರೂ ಅಲ್ಲಿನ ವಾರ್ಡನ್ ಅಥವಾ ಸಿಬ್ಬಂದಿಯ ಗಮನಕ್ಕೆ ಬಾರದೇ ಇರುವ ಕುರಿತು ಪಾಲಕರು ಮತ್ತು ಗ್ರಾಮಸ್ಥರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ವಾರ್ಡನ್ ಮತ್ತು ಸಿಬ್ಬಂದಿಯ ವಿರುದ್ಧ ಕಠಿಣವಾದ ಶಿಸ್ತು ಕ್ರಮ ಕೈಗೊಳ್ಳಬೇಕು. ಹೆಣ್ಣುಮಕ್ಕಳ ರಕ್ಷಣೆಗಾಗಿ ಇರುವ ಹಾಸ್ಟೆಲ್‍ನಲ್ಲಿ ಈ ಘಟನೆ ನಡೆದಿರುವುದು ಬಾಲಕಿಯರ ಸುರಕ್ಷತೆ ಮತ್ತು ಭದ್ರತೆ ಕುರಿತು ಅನೇಕ ಪ್ರಶ್ನೆಗಳು ಮೂಡುತ್ತಿವೆ ಎಂದು ಪೋಷಕರು ಮತ್ತು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್