
ಗದಗ, 26 ನವೆಂಬರ್ (ಹಿ.ಸ.) :
ಆ್ಯಂಕರ್ : ಪ್ರಜಾಪ್ರಭುತ್ವದ ವ್ಯವಸ್ಥೆ ಭದ್ರವಾಗಿಸಲು ಎಲ್ಲರೂ ನಮ್ಮ ದೇಶದ ಸಂವಿಧಾನ ಓದಿ ಅರ್ಥಮಾಡಿಕೊಳ್ಳಬೇಕು. ಜಗತ್ತಿನಲ್ಲೇ ನಮ್ಮ ಭಾರತ ದೇಶದ ಸಂವಿಧಾನ ಶ್ರೇಷ್ಠ ವಾಗಿದೆ ಎಂದು ವಿಧಾನ ಪರಿಷತ್ ಶಾಸಕ ಎಸ್ ವಿ ಸಂಕನೂರ ಹೇಳಿದರು.
ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ಹಾಗೂ ವಿವಿಧ ಇಲಾಖೆಗಳ ವತಿಯಿಂದ ಗದಗ ನಗರದ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿಂದು ಆಯೋಜಿಸಿದ್ದ ಭಾರತ ಸಂವಿಧಾನ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನ ಭಾರತೀಯರ ಬದುಕಿನ ಅವಿಭಾಜ್ಯ ಅಂಗವಾಗಿದೆ. ಸಂವಿಧಾನದ ಆಶಯಗಳಿಗನುಗುಣವಾಗಿ ಎಲ್ಲರೂ ಬದುಕು ಕಟ್ಟಿಕೊಳ್ಳಬೇಕು. ಭಾರತೀಯ ನಾಗರೀಕರ ರಕ್ಷಣೆಯನ್ನು ಸಂವಿಧಾನ ಮಾಡುತ್ತಿದೆ ಅದರಂತೆ ನಾವು ಸಹ ಮುಂದಿನ ಪೀಳಿಗೆಗೆ ಸಂವಿಧಾನದ ಆಶಯ, ಮಹತ್ವವನ್ನು ಸಾರುವ ಮೂಲಕ ಸಂವಿಧಾನವನ್ನು ರಕ್ಷಣೆ ಮಾಡಬೇಕು ಎಂದರು.
ಜಗತ್ತಿನಲ್ಲಿ ಅತೀ ಹೆಚ್ಚು ಯುವ ಜನರು ಭಾರತ ದೇಶದಲ್ಲಿದ್ದಾರೆ. ಯುವಕರು ಸಂವಿಧಾನವನ್ನು ತಿಳಿದುಕೊಂಡು ಅರ್ಥೈಸಿಕೊಳ್ಳಬೇಕು. ಸಂವಿಧಾನವನ್ನು ಅರ್ಥೈಸಿಕೊಳ್ಳಲು ಹೃದಯ ವೈಶಾಲ್ಯತೆ ಅಗತ್ಯ. ಜಗತ್ತಿನ ಅತಿ ದೊಡ್ಡ ಸಂವಿಧಾನವನ್ನು ಭಾರತ ರತ್ನ ಡಾ. ಅಂಬೇಡ್ಕರ್ ಅವರು ಭಾರತೀಯರಿಗೆ ನೀಡಿದ್ದಾರೆ ಎಂದು ಹೇಳಿದರು.
ಭಾರತ ದೇಶಕ್ಕೆ ಸಂವಿಧಾನವನ್ನು ರಚಿಸಲು ಅನೇಕರ ಶ್ರಮವಿದೆ. ಡಾ.ಬಿ.ಆರ್. ಅಂಬೇಡ್ಕರ್ ಸಂವಿಧಾನ ಕರಡು ರಚನಾ ಸಮಿತಿಯ ಅಧ್ಯಕ್ಷತೆ ವಹಿಸಿ ಪ್ರಪಂಚದ ಎಲ್ಲಾ ಸಂವಿಧಾನಗಳನ್ನು ಅಧ್ಯಯನ ಮಾಡಿ ನಮ್ಮ ದೇಶದ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗೆ ಹೊಂದುವಂತೆ ಒಂದು ಸಮಗ್ರವಾದ ಸಂವಿಧಾನವನ್ನು ಸಿದ್ಧಪಡಿಸಿದ್ದಾರೆ.
ಎಲ್ಲರೂ ಸಂವಿಧಾನದ ಮೂಲಭೂತ ಹಕ್ಕುಗಳು ಎಂದಾಗ ಧ್ವನಿ ಎತ್ತುತ್ತಾರೆ ಆದರೆ ಮೂಲಭೂತ ಕರ್ತವ್ಯಗಳನ್ನು ಪಾಲಿಸಲು ಮುಂದೆ ಬರುವುದಿಲ್ಲ. ಮೂಲಭೂತ ಹಕ್ಕುಗಳನ್ನು ಕೇಳುವುದರ ಜೊತೆಗೆ ಮೂಲಭೂತ ಕರ್ತವ್ಯಗಳನ್ನು ನಿಭಾಯಿಸೋಣ ಎಂದು ಶಾಸಕ ಎಸ್ ವಿ ಸಂಕನೂರ ಕರೆ ನೀಡಿದರು.
ಸಂವಿಧಾನ ಆಶಯಗಳನ್ನು ಎಲ್ಲರಿಗೂ ತಿಳಿಸುವ ಸದುದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿಯವರು 2015 ರಿಂದ ಸಂವಿಧಾನ ದಿನಾಚರಣೆ ಆಚರಣೆಗೆ ಮುಂದಾಗಿದ್ದಾರೆ. ನಾವೆಲ್ಲರೂ ರಾಷ್ಟ್ರಧ್ವಜ, ಗೀತೆ ಸಂವಿಧಾನಕ್ಕೆ ಗೌರವ ನೀಡೋಣ. ಸಾರ್ವಜನಿಕ ಆಸ್ತಿ, ಸಂಪತ್ತು, ನೈಸರ್ಗಿಕ ಸಂಪನ್ಮೂಲಗಳ ರಕ್ಷಣೆ ಹೋಣೆ ನಮ್ಮದು ಎಂದರು.
ಜಿಲ್ಲಾ ಮಟ್ಟದ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಬಿ ಬಿ ಅಸೂಟಿ ಮಾತನಾಡಿ, ಡಾ. ಅಂಬೇಡ್ಕರ್ ಸಂವಿಧಾನ ಅರಿತರೆ ಎಲ್ಲರೂ ಸಂವಿಧಾನವನ್ನು ಗೌರವದಿಂದ ಕಾಣುತ್ತಾರೆ. ದೇಶದ ಸಂವಿಧಾನ ಅತ್ಯಂತ ಪ್ರಭುದ್ಧವಾಗಿದೆ. ಸಂವಿಧಾನ ಆಶಯಕ್ಕೆ ಅನುಗುಣವಾಗಿ ನಾವೇಲ್ಲರೂ ಮುನ್ನಡೆಯೋಣ ಎಂದರು.
ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ ಆರ್ ಅವರು ನೆರೆದಿದ್ದ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ಸಂವಿಧಾನ ಪ್ರತಿಜ್ಞಾ ವಿಧಿ ಬೋಧಿಸಿದರು.
ಹುಲಕೋಟಿ ಜಿ ಸಿ ಟಿ ಎಂ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಡಾ. ಅರ್ಜುನ ಗೊಳಸಂಗಿ ಅವರು ಉಪನ್ಯಾಸದಲ್ಲಿ ಮಾತನಾಡಿ, 1949 ನವೆಂಬರ್ 26 ರಂದು ಸಂವಿಧಾನವನ್ನು ಜಾರಿಗೆ ತರಲಾಯಿತು. 1950 ಜನವರಿ 26 ರಂದು ಭಾರತೀಯ ಸಂವಿಧಾನವನ್ನು ಅಂಗೀಕರಿಸಲಾಯಿತು. ಭಾರತೀಯ ಸಂವಿಧಾನ ಸರ್ಕಾರವನ್ನು ಹೇಗೆ ರಚಿಸಬೇಕು. ಸಮಾಜದ ಕರ್ತವ್ಯಗಳು ಏನು ಎಂಬುದನ್ನು ತಿಳಿಸುತ್ತದೆ. ಭಾರತೀಯ ಸಂವಿಧಾನದಲ್ಲಿ 395 ಅನುಚ್ಛೇದಗಳು, 28 ಭಾಗಗಳು ಹಾಗೂ 8 ಷೆಡ್ಯೂಲ್ ಗಳು ಇವೆ. ವಿಶ್ವದಲ್ಲೇ ಅತಿ ದೊಡ್ಡ ಲಿಖಿತ ಸಂವಿಧಾನವಾಗಿ ಭಾರತ ಸಂವಿಧಾನ ಇದೆ. ಇದರ ಸಂಪೂರ್ಣ ರಚನೆಯ ಜವಾಬ್ದಾರಿ ಡಾ. ಬಿ.ಆರ್ ಅಂಬೇಡ್ಕರ್ ಅವರದ್ದು ಹಾಗಾಗಿಯೇ ಅವರನ್ನು ಭಾರತ ಸಂವಿಧಾನದ ಪಿತಾಮಹ ಎಂದು ಕರೆಯಲಾಗುತ್ತದೆ ಎಂದರು.
ಭಾರತೀಯರಾದ ನಮ್ಮೆಲ್ಲರ ಮನೆಗಳಲ್ಲೂ ಸಂವಿಧಾನದ ಪ್ರತಿ ಇರಬೇಕು ಅದನ್ನು ಓದುವ ಅರ್ಥೈಸಿಕೊಳ್ಳುವ ಹವ್ಯಾಸವನ್ನು ರೂಡಿಸಿಕೊಳ್ಳಬೇಕು ಎಂದು ಹೇಳಿದರು.
ಸಂವಿಧಾನ ರಕ್ಷಣೆ ನಾವು ಮಾಡಿದರೇ, ಸಂವಿಧಾನ ನಮ್ಮನ್ನು ರಕ್ಷಣೆ ಮಾಡುತ್ತದೆ ಎಂಬುದನ್ನು ನಾವೆಲ್ಲ ಅರಿಯಬೇಕು. ಸಮಾಜ ಕಲ್ಯಾಣ ಸಚಿವ ಡಾ. ಎಚ್ ಸಿ ಮಹಾದೇವಪ್ಪ ಅವರು ರಾಜ್ಯದ ಎಲ್ಲರಿಗೂ ಸಂವಿಧಾನ ಪೀಠಿಕೆ ಓದಿಸಿ ಅರಿವು ಮೂಡಿಸಿದ್ದಾರೆ ಎಂದರು.
ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಸಮ್ಮಾನ ಮಾಡುವ ಮೂಲಕ ಅವರನ್ನು ಗೌರವಿಸಲಾಯಿತು.
ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಡಾ. ನಂದಾ ಹಣಬರಟ್ಟಿ ಸರ್ವರನ್ನು ಸ್ವಾಗತಿಸಿದರು. ಪ್ರೊ.ಬಾಹುಬಲಿ ಜೈನರ ನಿರ್ವಹಿಸಿದರು.
ವೇದಿಕೆಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಅಕ್ಬರ್ ಸಾಬ ಬಬರ್ಚಿ, ಡಿವೈಎಸ್ಪಿ ವಿಧ್ಯಾನಂದ ನಾಯ್ಕ, ಜಿಪಂ ಉಪಕಾರ್ಯದರ್ಶಿ ಸಿ ಆರ್ ಮುಂಡರಗಿ, ಡಾ. ಬಸವರಾಜ ಬಳ್ಳಾರಿ, ಡಾ. ಎಸ್ ಎಸ್ ನೀಲಗುಂದ, ಆರ್ ಎಸ್ ಬುರಡಿ, ರಾಜಾರಾಮ ಪವಾರ ಇದ್ದರು.
ಸಂವಿಧಾನ ದಿನಾಚರಣೆ ಅಂಗವಾಗಿ ಅದ್ಧೂರಿ ಮೆರವಣಿಗೆ
ಸಂವಿಧಾನ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ಹಾಗೂ ವಿವಿಧ ಇಲಾಖೆಯ ವತಿಯಿಂದ ನಗರಸಭೆ ಆವರಣದಿಂದ ಜಿಲ್ಲಾಡಳಿತ ಭವನದ ವರೆಗೆ ಅದ್ಧೂರಿ ಮೆರವಣಿಗೆ ಆಯೋಜಿಸಲಾಗಿತ್ತು. ಮೆರವಣಿಗೆಯಲ್ಲಿ ವಿದ್ಯಾರ್ಥಿಗಳು ಸಂವಿಧಾನದ ಕುರಿತಾಗಿ ನಾಮಫಲಕಗಳನ್ನು ಪ್ರದರ್ಶಿಸುವ ಮೂಲಕ ಜನರಿಗೆ ಜಾಗೃತಿ ಮೂಡಿಸಲಾಯಿತು.
ಮೇರವಣಿಗೆಗೆ ವಿ.ಪ. ಶಾಸಕ ಎಸ್ ವಿ ಸಂಕನೂರ ಚಾಲನೆ ನೀಡಿದರು. ಈ ವೇಳೆ ಕೃಷ್ಣಗೌಡ ಪಾಟೀಲ, ಅಶೋಕ ಮಂದಾಲಿ, ಎಸ್ ಎನ್ ಬಳ್ಳಾರಿ, ಬಸವರಾಜ ಕಡೆಮನಿ, ಮುರ್ತುಜಾ ಖಾದ್ರಿ, ನಂದಾ ಹಣಬರಟ್ಟಿ, ಡಾ. ಬಸವರಾಜ ಬಳ್ಳಾರಿ, ಗಂಗಪ್ಪ ಎಂ ಇದ್ದರು.
ಹಿಂದೂಸ್ತಾನ್ ಸಮಾಚಾರ್ / lalita MP