
ಕೋಲಾರ, ೧೫ ನವಂಬರ್ (ಹಿ.ಸ.) :
ಆ್ಯಂಕರ್ : ಬಾಲ್ಯವಿವಾಹ ನಿಷೇಧ ಕಾಯ್ದೆ-೨೦೦೬ರ ಪ್ರಕಾರ ವಿವಾಹವನ್ನು ನಡೆಸಲು ಬಾಲಕಿಗೆ ೧೮ ವರ್ಷ ಪೂರ್ಣಗೊಂಡಿರಬೇಕು ಹಾಗೂ ಹುಡುಗನಿಗೆ ೨೧ ವರ್ಷ ಪೂರ್ಣಗೊಂಡಿರಬೇಕು. ಒಂದು ವೇಳೆ ಬಾಲಕಿಗೆ ೧೮ ಹಾಗೂ ಬಾಲಕನಿಗೆ ೨೧ ವರ್ಷ ಪೂರ್ಣಗೊಳ್ಳವ ಮೊದಲೇ ವಿವಾಹ ನಡೆಸಿದಲ್ಲಿ ಅದು ಶಿಕ್ಷಾರ್ಹ ಅಪರಾಧವಾಗಿದ್ದು, ಬಾಲ್ಯವಿವಾಹ ಮಾಡಿಕೊಳ್ಳುವ ವಯಸ್ಕರಿಗೂ, ನಡೆಸುವವರಿಗೂ, ಪ್ರೇರೇಪಿಸುವವರಿಗೂ ನಿರ್ದೇಶಿಸುವವರಿಗೂ, ಭಾಗವಹಿಸುವ ಎಲ್ಲರೂ ಈ ಕಾಯ್ದೆಯಡಿ ಕನಿಷ್ಠ ೧ ರಿಂದ ಗರಿಷ್ಠ ೨ ವರ್ಷದ ವರೆಗೂ ಜೈಲು ಶಿಕ್ಷೆ ಅಥವಾ ೧ ಲಕ್ಷ ರೂಪಾಯಿಗಳ ದಂಡ ಅಥವಾ ಎರಡನ್ನೂ ವಿಧಿಸಬಹುದು. ಬಾಲ್ಯವಿವಾಹ ಮಾಡಿಕೊಂಡ ಅಪ್ರಾಪ್ತ ಬಾಲಕ/ಬಾಲಕಿಯ ಮದುವೆಯು ಕಾನೂನು ಪ್ರಕಾರವಾಗಿ ಅನೂರ್ಜಿತ/ಅಸಿಂಧುವಾಗಿರುತ್ತದೆ. ಕೋಲಾರ ಜಿಲ್ಲೆಯಲ್ಲಿ ೨೦೨೫-೨೬ನೇ ಸಾಲಿನಲ್ಲಿ ೫೫ ಪ್ರಕರಣಗಳಲ್ಲಿ ಎಫ್.ಐ.ಆರ್. ದಾಖಲಾಗಿದ್ದು, ಸದರಿ ಕಾಯ್ದೆಯಡಿ ಶಿಕ್ಷೆಗೆ ಒಳಗಾಗಿರುತ್ತಾರೆ.
ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯ್ದೆ-೨೦೧೨, ಹಾಗೂ ತಿದ್ದುಪಡಿ ಕಾಯ್ದೆ-೨೦೧೯(ಪೋಕ್ಸೋ ಕಾಯ್ದೆ)ಯ ಪ್ರಾಕರ, ೧೮ವರ್ಷದೊಳಗಿನ ಗಂಡು ಮತ್ತು ಹೆಣ್ಣು ಮಕ್ಕಳ ಮೇಲೆ ನಡೆಯು ಲೈಂಗಿಕ ದೌರ್ಜನ್ಯಗಳನ್ನು ತಡೆಯಲು ಈ ಕಾಯ್ದೆ ಜಾರಿಗೆ ಬಂದಿರುತ್ತದೆ. ಮಕ್ಕಳನ್ನು ಬಳಸಿಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಅಪರಾಧದ ತೀವ್ರತೆಯನ್ನು ಆಧರಿಸಿ ಕನಿಷ್ಠ ೩ ರಿಂದ ೨೦ ವರ್ಷಗಳವರೆಗೂ ಶಿಕ್ಷೆ, ಜೀವಾವಧಿ ಶಿಕ್ಷೆಯಾಗುತ್ತದೆ. ಮಕ್ಕಳ ರಕ್ಷಣಾ ಜವಬ್ದಾರಿ ಹೊತ್ತ ಅಧಿಕಾರಿಗಳು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಮಾಡಿದಲ್ಲಿ ೭ ವರ್ಷಕ್ಕೆ ಕಡಿಮೆ ಇಲ್ಲದ ಹಾಗೂ ೧೦ ವರ್ಷಕ್ಕೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಬಹುದಾಗಿದೆ.
ಈ ರೀತಿ ಅಪ್ರಾಪ್ತ ವಯಸ್ಸಿನ ಗಂಡು/ಹೆಣ್ಣು ಮಕ್ಕಳಿಗೆ ಬಾಲ್ಯವಿವಾಹ ನಡೆಯುವುದು ಅಥವಾ ಲೈಂಗಿಕ ದೌರ್ಜನಕ್ಕೆ ಒಳಗಾಗುವುದು ಕಂಡುಬಂದಲ್ಲಿ ಸಾರ್ವಜನಿಕರು ಕೋಲಾರ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಕೋಲಾರ ಅಥವಾ ಮಕ್ಕಳ ಸಹಾಯವಾಣಿ ೧೦೯೮ ಅಥವಾ ಪೊಲೀಸ್ ಸಹಾಯವಾಣಿ ೧೧೨ಗೆ ಸಂಪರ್ಕಿಸಬಹುದೆಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್