

ರಾಯಚೂರು, 15 ನವೆಂಬರ್ (ಹಿ.ಸ.) :
ಆ್ಯಂಕರ್ : ಪದ್ಮಶ್ರೀ ಪುರಸ್ಕøತ ಸಾಲುಮರದ ತಿಮ್ಮಕ್ಕ ಅವರ ಆತ್ಮಕ್ಕೆ ಶಾಂತಿ ಕೋರಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯದಲ್ಲಿ ಸಂತಾಪ ಸಭೆಯನ್ನು ಶನಿವಾರ ಆಚರಿಸಲಾಯಿತು.
ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ.ಶಿವಾನಂದ ಕೆಳಗಿನಮನಿ ಅವರು, ಗಿಡ-ಮರಗಳನ್ನು ಬೆಳೆಸುವುದರೊಂದಿಗೆ ಪರಿಸರ ಸಂರಕ್ಷಣೆಗೆ ವಿಶೇಷ ಕಾಳಜಿವಹಿಸಿ ಜೀವಿಸಿದ ಸಾಲುಮರದ ತಿಮ್ಮಕ್ಕ ಅವರು ತಮ್ಮ ಜೀವಿತ ಕಾಲವನ್ನು ಹಸಿರೇ ಉಸಿರೆಂದು ಭಾವಿಸಿ ಪರಿಸರ ಸೇವೆ ಮತ್ತು ಸಂರಕ್ಷಣೆಗಾಗಿ ಮುಡಿಪಾಗಿಟ್ಟಿದ್ದರು ಎಂದರು.
ವಿಶ್ವವಿದ್ಯಾಲಯದ ಕುಲಸಚಿವರಾದ ಡಾ. ಎ. ಚನ್ನಪ್ಪ ಅವರು, ಸಾಲುಮರದ ತಿಮ್ಮಕ್ಕನವರ ಜೀವನ ಸಾಧನೆ ಸಮಾಜಕ್ಕೆ ಮಾದರಿಯಾಗಿದೆ. ಅನಕ್ಷರಸ್ಥೆಯಾಗಿದ್ದರೂ ನಿಸರ್ಗದ ಜ್ಞಾನದೊಂದಿಗೆ ಮರಗಳನ್ನೆ ಮಕ್ಕಳೆಂದು ಭಾವಿಸಿ ವೃಕ್ಷವನವನ್ನು ನಿರ್ಮಿಸಿದ್ದಾರೆ, ಇಂದು ಅವರು ನಮ್ಮನ್ನಗಲಿದರೂ ನಮ್ಮ ಮನದಾಳದಲ್ಲಿ ಅವರು ಎಂದಿಗೂ ಜೀವಂತವಾಗಿದ್ದಾರೆ. ಅವರ ತ್ಯಾಗಮಯ ಜೀವನ ಮರೆಯಲಾರದ್ದು ಎಂದು ಅವರು ಹೇಳಿದರು.
ಉಪ ಕುಲಸಚಿವರಾದ ಡಾ.ಕೆ.ವೆಂಕಟೇಶ ಅವರು, ಮಾಗಡಿ ತಾಲ್ಲೂಕಿನಲ್ಲಿ ರಸ್ತೆ ಬದಿ ಆಲದ ಮರಗಳನ್ನು ನೆಟ್ಟು ಬೆಳೆಸಿದ ಅವರು ಸಾಲುಮರದ ತಿಮ್ಮಕ್ಕ ಎಂದೇ ಚಿರಪರಿಚಿತರಾದರು. ಸಸಿಗಳನ್ನು ಮಕ್ಕಳಂತೆ ಪ್ರೀತಿಯಿಂದ ಸಾಕಿ ಸಲಹಿದ್ದಾರೆ. ಅವರು ಬದುಕಿದ ದಾರಿ ಎಲ್ಲರಿಗೂ ಮಾದರಿಯಾಗಬೇಕು, ತಾವು ನೆಟ್ಟ ಸಸಿಗಳನ್ನು ತಮ್ಮ ಮಕ್ಕಳೆಂದು ತಿಳಿದು ಅವರು ಜೀವನದ ಸಾರ್ಥಕತೆಯನ್ನು ಕಂಡುಕೊಂಡರು. ಅವರ ಅಗಲಿಕೆ ನಮ್ಮೆಲ್ಲರಿಗೂ ದುಖಃವನ್ನುಂಟು ಮಾಡಿದೆ. ಅವರನ್ನು ಮಾದರಿಯಾಗಿಟ್ಟುಕೊಂಡು ಭವಿಷ್ಯದ ದೃಷ್ಟಿಯಿಂದ ಬರುವ ಪೀಳಿಗೆಗೆ ಅವರ ಪರಿಸರ ಪ್ರೇಮ ಮತ್ತು ಬದುಕಿದ ರೀತಿಯನ್ನು ತೋರಿಸಿಕೊಡಬೇಕು ಎಂದು ಅವರು ಹೇಳಿದರು.
ಹಣಕಾಸು ಅಧಿಕಾರಿ ಡಾ.ಸುಯಮೀಂದ್ರ ಕುಲಕರ್ಣಿ, ಡೀನರಾದ ಪ್ರೊ.ಪಾರ್ವತಿ ಸಿ.ಎಸ್., ಡಾ.ಲತಾ ಎಂ.ಎಸ್., ವಿದ್ಯಾರ್ಥಿ ಕಲ್ಯಾಣಾಧಿಕಾರಿ ಡಾ.ಜಿ.ಎಸ್.ಬಿರಾದಾರ, ಉಪನ್ಯಾಸಕರು, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ತಿಮ್ಮಕ್ಕನವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಶ್ರದ್ಧಾಂಜಲಿ ಅರ್ಪಿಸಿದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್