
ವಿಜಯಪುರ, 15 ನವೆಂಬರ್ (ಹಿ.ಸ.) :
ಆ್ಯಂಕರ್ : ವಿಜಯಪುರ ಜಿಲ್ಲೆಯಲ್ಲಿರುವ ಅಲ್ಪ ಸಂಖ್ಯಾತರ ಶಾಲೆಗಳ ಅಭಿವೃದ್ಧಿ, ಮೂಲಭೂತ ಸೌಕರ್ಯ ಹಾಗೂ ಶಿಕ್ಷಣ ಗುಣಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಸೂಕ್ತ ಕ್ರಮ ವಹಿಸುವಂತೆ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಜಿಲ್ಲಾ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಪ್ರಧಾನ ಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮ ಅನುಷ್ಠಾನಗೊಳಿಸುವ ಕುರಿತು ಪರಶೀಲನಾ ಸಮಿತಿಯ ದ್ವತೀಯ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯ ಕೊಲ್ಹಾರ ಹಾಗೂ ಸಿಂದಗಿಯ ಉರ್ದು ಶಾಲೆಗಳಲ್ಲಿ ಶಾಲಾ ಮಕ್ಕಳ ದಾಖಲಾತಿ ಪ್ರಮಾಣ ಹೆಚ್ಚಳಕ್ಕಾಗಿ ಮನೆ ಮನೆಗೆ ಭೇಟಿ ನೀಡಿ ಪಾಲಕರ ಮನವೊಲಿಸಿ ಮಕ್ಕಳ ದಾಖಲಾತಿ ಹೆಚ್ಚಿಸಬೇಕು. ಮಕ್ಕಳ ದಾಖಲಾತಿ ಕುರಿತು ಆಯಾ ಸ್ಥಳಗಳಲ್ಲಿ ವ್ಯಾಪಕವಾಗಿ ಪ್ರಚಾರ ಕೈಗೊಳ್ಳಬೇಕು. ಶಿಕ್ಷಣಕ್ಕೆ ಸಂಬಂಧಿಸಿದಂತೆ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಹಾಗೂ ಶಿಕ್ಷಣ ಮಟ್ಟ ಸುಧಾರಿಸಲು ಅಗತ್ಯ ಸಹಯೋಗ ಪಡೆದುಕೊಂಡು ಶಿಕ್ಷಣ ಗುಣಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ನಾವೆಲ್ಲರೂ ಪ್ರಯತ್ನಿಸೋಣ ಎಂದು ಹೇಳಿದರು.
ಜಿಲ್ಲೆಯಲ್ಲಿ 6 ಅರೆಬಿಕ್ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ ಆ ಶಾಲೆಗಳಲ್ಲಿ ಗಂಡು ಮಕ್ಕಳ ಹಾಗೂ ಹೆಣ್ಣು ಮಕ್ಕಳ ಸಂಖ್ಯೆ ಹಾಗೂ ಆ ಶಾಲೆಗಳಲ್ಲಿ ವಿದ್ಯಾರ್ಥಿಗಳ ಯಾವುದಾದರು ಸಾಧನೆ ಮಾಡಿದ ವಿವರ ಹಾಗೂ ಸರ್ಕಾರದಿಂದ ಅನುದಾನ ನೀಡುವ ಕುರಿತು ಮಾಹಿತಿ ಒದಗಿಸಬೇಕು. ಜಿಲ್ಲೆಯಲ್ಲಿರುವ ನಗರ ಹಾಗೂ ಎಲ್ಲ ತಾಲೂಕು ಗ್ರಂಥಾಲಯಗಳಲ್ಲ ದಿನಪತ್ರಿಕೆ,ವಾರ ಪತ್ರಿಕೆ, ಮಾಸ ಪತ್ರಿಕೆಗಳ ಹಾಗೂ ಸಂಚಿಕೆಗಳನ್ನು ಒದಗಿಸುವಂತೆ ಕ್ರಮ ವಹಿಸುವಂತೆ ಗ್ರಂಥಾಲಯ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಸಂಖ್ಯಾತರ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ ಕೇಂದ್ರಗಳು, ಸ್ವಂತ ಕಟ್ಟಡಗಳ ಸ್ಥಿತಿಗತಿಗಳ ಕುರಿತು ಪರಿಶೀಲನೆ ನಡೆಸಬೇಕು. ಕೇಂದ್ರಗಳಲ್ಲಿ ದಾಖಲಾಗಿರುವ ಮಕ್ಕಳ ಸಂಖ್ಯೆ, ಗಂಡು ಹಾಗೂ ಹೆಣ್ಣು ಮಕ್ಕಳ ಸಂಖ್ಯೆ ಸಮೇತ ಸಮಗ್ರ ಮಾಹಿತಿಯನ್ನು ಒಂದು ವಾರದೊಳಗೆ ಸಮಿತಿ ಸದಸ್ಯರಿಗೆ ತಲುಪಿಸುವಂತೆ ಸಂಬಂಧಿಸಿದ ಅಧಿಕಾರಿಗಳು ಸೂಚಿಸಿದರು.
ಉರ್ದು ಶಾಲೆಗಳಲ್ಲಿ ವಿಷಯವಾರು ಶಿಕ್ಷರ ಕೊರತೆಯನ್ನು ಸರಿಪಡಿಸುವಂತೆ ಸೂಚಿಸಿದ ಅವರು ಸ್ಥಳೀಯವಾಗಿ ಲಭ್ಯವಿರುವ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಬೇಕು. ಕೊಠಡಿಗಳ ಕೊರತೆ ಹಾಗೂ ಹೊಸ ಕಟ್ಟಡಗಳ ನಿರ್ಮಾಣಕ್ಕಾಗಿ ಆದಷ್ಟು ಶೀಘ್ರವಾಗಿ ಪ್ರಸ್ತಾವನೆ ಸಲ್ಲಿಸುವಂತೆ ಅವರು ಸೂಚನೆ ನೀಡಿದರು.
ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರ ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿ ವೇತನ ವಿಳಂಬವಾಗದಂತೆ ಹಾಗೂ ಯಾವ ಒಬ್ಬ ವಿದ್ಯಾರ್ಥಿಯೂ ಕೂಡ ವಂಚಿತರಾಗದಂತೆ ಕ್ರಮ ವಹಿಸಬೇಕು. ಯೋಜನಾ ನಿರ್ದೇಶಕರು ಡಿ.ಆರ್.ಡಿ.ಎ ಕೋಶದ ಅಡಿಯಲ್ಲಿ ಅಲ್ಪ ಸಂಖ್ಯಾತರ ಇಲಾಖೆಯ ವತಿಯಿಂದ ರುಡ್ ಸೆಟ್ ಸಂಸ್ಥಯಲ್ಲಿ 39 ಯುವಕ ಯುವತಿಯರಿಗೆ ಸ್ವ- ಉದ್ಯೋಗ ಹಾಗೂ ಕೌಶಲ್ಯಾಧಾರಿತ ತರಬೇತಿಯನ್ನು ನೀಡಲಾಗಿದೆ. ಜಿಲ್ಲೆಯಲ್ಲಿರುವ ಐ.ಟಿ.ಐ ಕೇಂದ್ರಗಳಲ್ಲಿ ಕೌಶಲ್ಯಾಧಾರಿತ ಶಿಕ್ಷಣ ನೀಡುತ್ತಿದ್ದು ಈ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿ ತರಬೇತಿ ದೊರಕಿಸಿದ್ದಲ್ಲಿ ಸ್ವ ಉದ್ಯೋಗ ಹಾಗೂ ಕೌಶಲ್ಯಾಧಾರಿತ ಉದ್ಯೋಗಕ್ಕೆ ಬಹಳ ಅನುಕೂಲವಾಗಲಿದೆ ಎಂದು ಅವರು ಹೇಳಿದರು.
ಲೀಡ್ ಬ್ಯಾಂಕ್ ವತಿಯಿಂದ ಈವರೆಗೆ ಅಲ್ಪ ಸಂಖ್ಯಾತರಿಗಾಗಿ ವಿವಿಧ ಇಲಾಖೆಗಳಲ್ಲಿರುವ ವಿವಿಧ ಯೋಜನೆಗಳಲಿ ವಿತರಿಸಿರುವ ಅನುದಾನ ಹಾಗೂ ಎಷ್ಟು ಜನರಿಗೆ ಸೌಲಭ್ಯ ಒದಗಿಸಿದೆ ಎಂಬುದರ ಕುರಿತು ಸಮಗ್ರ ಮಾಹಿತಿ ಒದಗಿಸಬೇಕು. ಜಿಲ್ಲಾ ಉದ್ಯೋಗ ವಿನಿಮಯ ಇಲಾಖೆ ವತಿಯಿಂದ ಪ್ರತಿ ತಿಂಗಳು ಉದ್ಯೋಗ ಮೇಳವನ್ನು ಆಯೋಜಿಸಲಾಗುತ್ತಿದೆ. ಆ ಮೇಳದಲ್ಲಿ ಆಯ್ಕೆಯಾದ ಫಲಾನುಭವಿಗಳು ಕರ್ತವ್ಯ ನಿರ್ವಹಿಸುತ್ತಿರವ ಕಂಪನಿ ಹಾಗೂ ಅವರಿಗೆ ನಿಗದಿತ ಸಮಯದಲ್ಲಿ ಸಂಬಳ ಹಾಗೂ ಸೌಲಭ್ಯಗಳನ್ನು ಒದಗಿಸುತ್ತಿರುವುದರ ಕುರಿತು ಭೇಟಿ ನೀಡಿ ಪರಿಶೀಲಿಸಿ ವಿವರ ನೀಡುವಂತೆ ಅವರು ಸೂಚನೆ ನೀಡಿದರು.
ಜಿಲ್ಲೆಯಲ್ಲಿ ವಸತಿ ಯೋಜನೆಯಡಿ ವಾಸಿಸುತ್ತಿರುವ ಫಲಾನುಭವಿಗಳಿಗೆ ಹಕ್ಕು ಪತ್ರ ನೀಡುವುದರೊಂದಿಗೆ ಜನ ವಸತಿಗಳಲ್ಲಿ ವಿದ್ಯುತ್, ಶೌಚಾಲಯ ಹಾಗೂ ಮೂಲಭೂತ ಸೌಕರ್ಯಗಳ ಸಮರ್ಪಕವಾಗಿ ಅನುಷ್ಠಾನಗೊಳಿಸಿದ ಕುರಿತು ವರದಿ ನೀಡಬೇಕು. ಎಲ್ಲ ಸಮುದಾಯಗಳ ಮುಖಂಡರ ಸಭೆ ಕರೆದು ಶಾಂತಿ ಸಭೆಗಳನ್ನು ಏರ್ಪಡಿಸಬೇಕು. ಜಿಲ್ಲೆಯಲ್ಲಿ ವಿಫುಲವಾಗಿ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಬಹಳ ಅನುಕೂಲಕರ ವಾತಾವರಣ ಇದ್ದು ಹಲವಾರು ಯೋಜನೆಗಳಿವೆ ಆ ಯೋಜನೆಗಳ ಕುರಿತು ಜನ ಜಾಗೃತಿ ಕಾರ್ಯಕ್ರಮಗಳನ್ನು ಏರ್ಪಡಿಸಬೇಕು. ಕಾರ್ಮಿಕ ಇಲಾಖೆಯ ವತಿಯಿಂದ ವಿತರಿಸಲಾಗುತ್ತಿರುವ ಕಾರ್ಮಿಕ ಕಾರ್ಡಗಳು ಪ್ರತಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಕಾರ್ಮಿಕರನ್ನು ಗುರುತಿಸಿ ಅಂತಹ ಫಲಾನುಭವಿಗಳಿಗೆ ಕಾಡ್ರ್ಗಳನ್ನು ವಿತರಿಸಲು ಕ್ರಮ ವಹಿಸಬೇಕು ಹಾಗೂ ಈ ಕುರಿತು ಜಾಗೃತಿ ಮೂಡಿಸಬೇಕು. ಜಿಲ್ಲೆಯಲ್ಲಿ ಕಾರ್ಡ್ ವಿತರಿಸಿದ ಫಲಾನಭವಿಗಳ ಸಂಖ್ಯೆ ವರದಿ ನೀಡುವಂತೆ ಅವರು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಲೆಕ್ಕಾಧಿಕಾರಿ ರಾಮಣ್ಣ ಅಥಣಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸಂಪತ ಗುಣಾರಿ, ಜಿಲ್ಲಾ ಅಲ್ಪ ಸಂಖ್ಯಾತರ ಜಿಲ್ಲಾಧಿಕಾರಿ ಪ್ರಶಾಂತ ಪೂಜಾರಿ, ನಾಮ ನಿರ್ದೇಶಿತ ಸದಸ್ಯರುಗಳಾದ ಸೈಯದ ನೂರುಲ್ ಹಸನ್ ಎಸ್ ಬೀಳಗಿಪೀರ, ಬಶೀರ ಅಹಮ್ಮದ ಮಹಬೂಬಸಾಬ್ ರಿಸಾಲ್ದಾರ, ಎಸ್.ಎಸ್ ತಜಂತ್ರಕ್, ನೆಲ್ಸನ್ ನೂರಮನ್ ಐಝಾಕ್ಸ್, ಜ್ಯೋತೀಂದ್ರ ಹನಮಂತ ಆಯತವಾಡ, ಬಂದೇನವಾಜ್ ನಬಿಸಾಬ ಮುಲ್ಲಾ, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / jyothi deshpande