ವಿಶಾಖಪಟ್ಟಣಂ, 06 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಭಾರತೀಯ ನೌಕಾಪಡೆ ತನ್ನ ಕಡಲ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸಿಕೊಂಡಿದೆ. ಸೋಮವಾರ ಆಳವಿಲ್ಲದ ನೀರಿನ ಜಲಾಂತರ್ಗಾಮಿ ವಿರೋಧಿ ಯುದ್ಧ ಹಡಗು ಐಎನ್ಎಸ್ ಆಂಡ್ರೋತ್ ಅಧಿಕೃತವಾಗಿ ನೌಕಾಪಡೆಗೆ ಸೇರಿತು.
ವಿಶಾಖಪಟ್ಟಣಂ ನೌಕಾ ಡಾಕ್‌ಯಾರ್ಡ್‌ನಲ್ಲಿ ನಡೆದ ಕಾರ್ಯಾರಂಭ ಸಮಾರಂಭದಲ್ಲಿ ಪೂರ್ವ ನೌಕಾ ಕಮಾಂಡ್‌ನ ಫ್ಲ್ಯಾಗ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ವೈಸ್ ಅಡ್ಮಿರಲ್ ರಾಜೇಶ್ ಪೆಂಧಾರ್ಕರ್ ಅವರು ಹಡಗಿನ ಪರಿಶೀಲನೆ ನಡೆಸಿ ಕಾರ್ಯಾರಂಭ ಘೋಷಿಸಿದರು.
ಐಎನ್ಎಸ್ ಆಂಡ್ರೋತ್ ಭಾರತದ ಕಡಲ ಸ್ವಾವಲಂಬನೆಯ ಸಂಕೇತವೆಂದು ನೌಕಾಪಡೆ ಬಣ್ಣಿಸಿದ್ದು, ಇದರ ನಿರ್ಮಾಣದಲ್ಲಿ ಶೇಕಡಾ 80 ಕ್ಕೂ ಹೆಚ್ಚು ಸ್ಥಳೀಯ ಸಾಮಗ್ರಿಗಳನ್ನು ಬಳಸಲಾಗಿದೆ. ಕೋಲ್ಕತ್ತಾದ ಗಾರ್ಡನ್ ರೀಚ್ ಶಿಪ್‌ಬಿಲ್ಡರ್ಸ್ ಅಂಡ್ ಎಂಜಿನಿಯರ್ಸ್ ಕಂಪನಿಯು ಈ ಹಡಗನ್ನು ವಿನ್ಯಾಸಗೊಳಿಸಿ ನಿರ್ಮಿಸಿದೆ.
77 ಮೀಟರ್ ಉದ್ದ ಮತ್ತು ಸುಮಾರು 1500 ಟನ್ ಸ್ಥಳಾಂತರ ಸಾಮರ್ಥ್ಯ ಹೊಂದಿರುವ ಈ ಹಡಗನ್ನು ಕರಾವಳಿ ಹಾಗೂ ಆಳವಿಲ್ಲದ ನೀರಿನಲ್ಲಿ ಜಲಾಂತರ್ಗಾಮಿ ವಿರೋಧಿ ಕಾರ್ಯಾಚರಣೆಗಳಿಗಾಗಿ ರೂಪಿಸಲಾಗಿದೆ. ಇದರಲ್ಲಿರುವ ಅತ್ಯಾಧುನಿಕ ಶಸ್ತ್ರಾಸ್ತ್ರಗಳು, ಸಂವೇದಕಗಳು ಮತ್ತು ಸಂವಹನ ವ್ಯವಸ್ಥೆಗಳು ಭೂಗತ ಬೆದರಿಕೆಗಳನ್ನು ನಿಖರವಾಗಿ ಪತ್ತೆಹಚ್ಚಿ ತಟಸ್ಥಗೊಳಿಸಲು ಸಹಕಾರಿ.
ಸಾಗರ ಡೀಸೆಲ್ ಎಂಜಿನ್‌ಗಳಿಂದ ಚಾಲಿತವಾಗಿರುವ ಈ ಹಡಗು ಕಡಲ ಕಣ್ಗಾವಲು, ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳು, ಕರಾವಳಿ ರಕ್ಷಣಾ ಹಾಗೂ ಕಡಿಮೆ ತೀವ್ರತೆಯ ಕಡಲ ಕಾರ್ಯಾಚರಣೆಗಳಲ್ಲಿ ಭಾಗವಹಿಸಲಿದೆ. ತಾಂತ್ರಿಕವಾಗಿ ಮುಂದುವರಿದ ನಿಯಂತ್ರಣ ವ್ಯವಸ್ಥೆಗಳಿಂದ ಸಜ್ಜುಗೊಂಡಿರುವುದರಿಂದ ಇದು ಆಳವಿಲ್ಲದ ನೀರಿನಲ್ಲಿ ದೀರ್ಘಾವಧಿ ಕಾರ್ಯನಿರ್ವಹಿಸಬಲ್ಲದು.
ನೌಕಾಪಡೆ ಅಧಿಕಾರಿಗಳ ಪ್ರಕಾರ, ಐಎನ್ಎಸ್ ಆಂಡ್ರೋತ್ ಸೇರ್ಪಡೆಯಿಂದ ಕರಾವಳಿ ವಲಯದಲ್ಲಿ ಶತ್ರುಗಳ ಚಟುವಟಿಕೆಗಳನ್ನು ಎದುರಿಸಲು ಭಾರತೀಯ ನೌಕಾಪಡೆಗೆ ದೊಡ್ಡ ಬಲ ಸಿಕ್ಕಿದೆ. ಈ ಹಡಗಿಗೆ ಲಕ್ಷದ್ವೀಪದ ಆಂಡ್ರೋತ್ ದ್ವೀಪದ ಹೆಸರನ್ನು ನೀಡಲಾಗಿದೆ ಇದು ಭಾರತದ ಕಡಲ ವಲಯದಲ್ಲಿ ಐತಿಹಾಸಿಕ ಮತ್ತು ಕಾರ್ಯತಂತ್ರದ ಪ್ರಾಮುಖ್ಯತೆಯುಳ್ಳ ದ್ವೀಪವಾಗಿದೆ.
ವೈಸ್ ಅಡ್ಮಿರಲ್ ಪೆಂಧಾರ್ಕರ್ ಅವರು GRSE ಮತ್ತು ನೌಕಾಪಡೆ ಸಿಬ್ಬಂದಿಯ ಶ್ರಮವನ್ನು ಮೆಚ್ಚಿ, ಐಎನ್ಎಸ್ ಆಂಡ್ರೋತ್ ಭಾರತೀಯ ನೌಕಾಪಡೆಯ ಸ್ವದೇಶೀ ಸಾಮರ್ಥ್ಯ ಮತ್ತು ನಾವೀನ್ಯತೆಯ ಜೀವಂತ ಸಾಕ್ಷಿಯಾಗಿದೆ ಎಂದು ಹೇಳಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa