
ಲಾಸ್ ಏಂಜಲೀಸ್, 30 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಮೇಜರ್ ಲೀಗ್ ಸಾಕರ್ (ಎಂಎಲ್ಎಸ್) ನ ಇತ್ತೀಚಿನ ಸಂಭಾವನೆ ಪಟ್ಟಿಯಲ್ಲಿ ಎಂಟು ಬಾರಿ ಬ್ಯಾಲನ್ ಡಿ'ಓರ್ ಪ್ರಶಸ್ತಿ ವಿಜೇತ ಲಿಯೋನೆಲ್ ಮೆಸ್ಸಿ ಅಗ್ರಸ್ಥಾನದಲ್ಲಿದ್ದಾರೆ. ಇಂಟರ್ ಮಿಯಾಮಿಯನ್ನು ಪ್ರತಿನಿಧಿಸುತ್ತಿರುವ ಮೆಸ್ಸಿ ವಾರ್ಷಿಕವಾಗಿ 20.4 ಮಿಲಿಯನ್ ಡಾಲರ್‌ಗಳು (ಸುಮಾರು ₹170 ಕೋಟಿ) ಸಂಭಾವನೆ ಪಡೆಯುತ್ತಿದ್ದಾರೆ ಎಂದು ಬುಧವಾರ ಪ್ರಕಟವಾದ ಅಧಿಕೃತ ಅಂಕಿ-ಅಂಶಗಳು ತಿಳಿಸಿವೆ.
ಈ ಮೊತ್ತವು ಕೇವಲ ವೇತನವಾಗಿದ್ದು, ಮೆಸ್ಸಿಯ ಪ್ರಾಯೋಜಕತ್ವ ಹಾಗೂ ವಾಣಿಜ್ಯ ಒಪ್ಪಂದಗಳಿಂದ ಬರುವ ಆದಾಯವನ್ನು ಒಳಗೊಂಡಿಲ್ಲ. 2023 ರ ಮಧ್ಯದಲ್ಲಿ ಇಂಟರ್ ಮಿಯಾಮಿಗೆ ಸೇರ್ಪಡೆಗೊಂಡ ಈ ಅರ್ಜೆಂಟೀನಾ ತಾರೆ, ಡಿಸೆಂಬರ್‌ನಲ್ಲಿ ಮುಕ್ತಾಯಗೊಳ್ಳಲಿರುವ ತಮ್ಮ ಪ್ರಸ್ತುತ ಒಪ್ಪಂದದ ನಂತರ ಹೊಸ ಮೂರು ವರ್ಷಗಳ ವಿಸ್ತರಣೆಗೆ ಸಹಿ ಹಾಕಲಿದ್ದಾರೆ ಎಂದು ವರದಿಯಾಗಿದೆ.
38 ವರ್ಷದ ಮೆಸ್ಸಿ ಈ ಋತುವಿನಲ್ಲಿ 28 ಪಂದ್ಯಗಳಲ್ಲಿ 29 ಗೋಲು ಗಳಿಸಿ, “ನಿಯಮಿತ ಋತುವಿನ ಅತ್ಯಧಿಕ ಗೋಲುಗಳಿಸಿದ ಆಟಗಾರ” ಎಂದು ಘೋಷಿಸಲ್ಪಟ್ಟಿದ್ದಾರೆ. ಅವರು ಈ ಬಾರಿ “ಅತ್ಯಂತ ಮೌಲ್ಯಯುತ ಆಟಗಾರ” ಪ್ರಶಸ್ತಿಗೆ ಪ್ರಮುಖ ಸ್ಪರ್ಧಿಯೆಂದು ಪರಿಗಣಿಸಲಾಗಿದೆ.
ಎರಡನೇ ಸ್ಥಾನದಲ್ಲಿ ದಕ್ಷಿಣ ಕೊರಿಯಾದ ಸನ್ ಹೆಯುಂಗ್ -ಮಿನ್ ಇದ್ದು, ಅವರು ಲಾಸ್ ಏಂಜಲೀಸ್ ಎಫ್‌ಸಿ (LAFC) ಪರವಾಗಿ ವರ್ಷಕ್ಕೆ $11.1 ಮಿಲಿಯನ್ ಸಂಭಾವನೆ ಪಡೆಯುತ್ತಿದ್ದಾರೆ. ಟೊಟೆನ್‌ಹ್ಯಾಮ್ ಹಾಟ್ಸ್‌ಪುರ್‌ನ ಮಾಜಿ ನಾಯಕನಾದ ಸನ್, ಈ ವರ್ಷದ ಆಗಸ್ಟ್‌ನಲ್ಲಿ $26 ಮಿಲಿಯನ್ ವರ್ಗಾವಣಾ ಮೊತ್ತಕ್ಕೆಎಂಎಲ್ಎಸ್ ಗೆ ಸೇರ್ಪಡೆಗೊಂಡು ಇತಿಹಾಸ ನಿರ್ಮಿಸಿದ್ದರು. ಈ ಋತುವಿನಲ್ಲಿ ಅವರು 10 ಪಂದ್ಯಗಳಲ್ಲಿ 9 ಗೋಲುಗಳನ್ನು ಗಳಿಸಿ ತಂಡದ ಪ್ಲೇಆಫ್ ಹಾದಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಮೂರನೇ ಸ್ಥಾನದಲ್ಲಿ ಮೆಸ್ಸಿಯ ಸಹ ಆಟಗಾರ ಸೆರ್ಗಿಯೊ ಬಸ್ಕ್ವೆಟ್ಸ್ ($8.7 ಮಿಲಿಯನ್) ಇದ್ದು, ಅವರು ಈ ಋತುವಿನ ಅಂತ್ಯದಲ್ಲಿ ನಿವೃತ್ತರಾಗಲಿದ್ದಾರೆ.
ಪರಾಗ್ವೆಯ ಮಿಗುಯೆಲ್ ಅಲ್ಮಿರಾನ್($7.8 ಮಿಲಿಯನ್) ನಾಲ್ಕನೇ ಸ್ಥಾನದಲ್ಲಿದ್ದು, ಮೆಕ್ಸಿಕೋದ ಹಿರ್ವಿಂಗ್ ಲೊಜಾನೊ ($7.6 ಮಿಲಿಯನ್) ಐದನೇ ಸ್ಥಾನದಲ್ಲಿ ಸ್ಥಾನ ಪಡೆದಿದ್ದಾರೆ. ಇಬ್ಬರೂ ಕ್ರಮವಾಗಿ ಅಟ್ಲಾಂಟಾ ಯುನೈಟೆಡ್ ಮತ್ತು ಸ್ಯಾನ್ ಡಿಯಾಗೋ ಎಫ್‌ಸಿ ಪರವಾಗಿ ಆಡುತ್ತಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa