ಕನ್ನಡ ನಾಡು ಹಬ್ಬದ ಮೆರಗು, ರಾಜ್ಯೋತ್ಸವದ ಸಂಭ್ರಮದಲ್ಲಿ ಕರ್ನಾಟಕ
ಕನ್ನಡಿಗರ ಹೃದಯದಲ್ಲಿ ಹೆಮ್ಮೆಯ ದಿನ. ಈ ದಿನ ಕನ್ನಡ ನಾಡಿನ ಆತ್ಮವು ಹೊಸ ಜೀವವನ್ನು ಪಡೆದುಕೊಳ್ಳುತ್ತದೆ. 1956ರ ನವೆಂಬರ್ ೧ರಂದು, ಕನ್ನಡ ಮಾತನಾಡುವ ಎಲ್ಲಾ ಪ್ರದೇಶಗಳನ್ನು ಒಂದೇ ರಾಜ್ಯವಾಗಿ ಏಕೀಕರಿಸಲಾಯಿತು. ಹೀಗೆ ಹುಟ್ಟಿತು ನಮ್ಮ ಪ್ರಿಯ ನಾಡು ಕರ್ನಾಟಕ ಸಾಹಿತ್ಯ, ಕಲೆ, ಸಂಸ್ಕೃತಿ, ವಿಜ್ಞಾನ, ಕೃಷಿ
ಫೋಟೋ


ಕನ್ನಡಿಗರ ಹೃದಯದಲ್ಲಿ ಹೆಮ್ಮೆಯ ದಿನ. ಈ ದಿನ ಕನ್ನಡ ನಾಡಿನ ಆತ್ಮವು ಹೊಸ ಜೀವವನ್ನು ಪಡೆದುಕೊಳ್ಳುತ್ತದೆ. 1956ರ ನವೆಂಬರ್ ೧ರಂದು, ಕನ್ನಡ ಮಾತನಾಡುವ ಎಲ್ಲಾ ಪ್ರದೇಶಗಳನ್ನು ಒಂದೇ ರಾಜ್ಯವಾಗಿ ಏಕೀಕರಿಸಲಾಯಿತು. ಹೀಗೆ ಹುಟ್ಟಿತು ನಮ್ಮ ಪ್ರಿಯ ನಾಡು ಕರ್ನಾಟಕ ಸಾಹಿತ್ಯ, ಕಲೆ, ಸಂಸ್ಕೃತಿ, ವಿಜ್ಞಾನ, ಕೃಷಿ ಹಾಗೂ ತಂತ್ರಜ್ಞಾನದಲ್ಲಿ ದೇಶದ ಮುಂಚೂಣಿಯ ರಾಜ್ಯವಾದ ಕರ್ನಾಟಕ, ನುಡಿಯ ಏಕತೆಯ ಮತ್ತು ಸಂಸ್ಕೃತಿಯ ಶ್ರೀಮಂತಿಕೆಯ ಪ್ರತೀಕವಾಗಿದೆ.

ಕನ್ನಡ ರಾಜ್ಯೋತ್ಸವ ಕೇವಲ ಹಬ್ಬವಲ್ಲ ಅದು ಕನ್ನಡಿಗರ ಅಸ್ತಿತ್ವದ ಗುರುತು. ಈ ದಿನ ರಾಜ್ಯದಾದ್ಯಂತ ಕೆಂಪು-ಹಳದಿ ಧ್ವಜಗಳು ಹಾರಾಡುತ್ತವೆ, ಕನ್ನಡ ಗೀತೆಗಳು ಮೊಳಗುತ್ತವೆ, “ಜೈ ಕರ್ನಾಟಕ ಮಾತೆ” ಎಂಬ ಘೋಷಣೆ ಎಲ್ಲೆಡೆ ಪ್ರತಿಧ್ವನಿಸುತ್ತದೆ. ಪ್ರತಿಯೊಂದು ಜಿಲ್ಲೆಗಳಲ್ಲಿ ಧ್ವಜಾರೋಹಣ, ರಾಜ್ಯೋತ್ಸವ ಪ್ರಶಸ್ತಿ ವಿತರಣೆ, ಕಲಾ ಪ್ರದರ್ಶನ, ಕಾವ್ಯ ವಾಚನ ಹಾಗೂ ಜನಪದ ನೃತ್ಯಗಳ ಸೊಬಗು ರಾಜ್ಯದ ವೈವಿಧ್ಯತೆಯ ಸೌಂದರ್ಯವನ್ನು ತೋರಿಸುತ್ತದೆ.

ಕನ್ನಡ – ನಮ್ಮ ಆತ್ಮ, ನಮ್ಮ ಗುರುತು :

ಕನ್ನಡ ಭಾಷೆ ಕೇವಲ ಮಾತಿನ ಮಾಧ್ಯಮವಲ್ಲ, ಅದು ನಾಡಿನ ಹೃದಯದ ಧ್ವನಿ. ಪಂಪ, ರನ್ನ, ಕುಮಾರವ್ಯಾಸ, ದ.ರಾ. ಬೇಂದ್ರೆ, ಕುವೆಂಪು, ಗೋಪಾಲಕೃಷ್ಣ ಅಡಿಗ, ಚನ್ನವೀರ ಕಣವಿ ಮುಂತಾದ ಮಹನೀಯರು ಕನ್ನಡ ಸಾಹಿತ್ಯದ ಆಕಾಶದಲ್ಲಿ ಶಾಶ್ವತ ನಕ್ಷತ್ರಗಳಾಗಿ ಕಂಗೊಳಿಸುತ್ತಿದ್ದಾರೆ. “ನಮ್ಮ ನುಡಿ, ನಮ್ಮ ನಾಡು” ಎಂಬ ಘೋಷಣೆ ಪ್ರತಿಯೊಬ್ಬ ಕನ್ನಡಿಗನ ಜೀವದ ಘೋಷಣೆಯಾಗಿದೆ.

ಬೆಂಗಳೂರು, ಮೈಸೂರು, ಹಂಪಿ, ಧಾರವಾಡ, ಬಿಜಾಪುರ, ಗದಗ ಇವುಗಳೆಲ್ಲಾ ಕನ್ನಡ ನಾಡಿನ ಜೀವಂತ ಚಿಹ್ನೆಗಳು. ಹಂಪಿಯ ಶಿಲ್ಪಗಳಲ್ಲಿ ಬರೆದ ಕಥೆಗಳು, ಮೈಸೂರಿನ ರಾಜಮನೆತನದ ಕಲಾ ವೈಭವ, ಧಾರವಾಡದ ಸಾಹಿತ್ಯ ಪರಂಪರೆ, ಗದಗಿನ ಸಂಗೀತ, ಸಾಹಿತ್ಯ ಹಾಗೂ ಬೆಂಗಳೂರಿನ ತಂತ್ರಜ್ಞಾನ ಇವೆಲ್ಲ ಕನ್ನಡ ನಾಡಿನ ನವೀನತೆ ಮತ್ತು ಪರಂಪರೆಯ ಸಮತೋಲನದ ಸಾಕ್ಷ್ಯಗಳು.

ಗದಗ- ನಾಮಕರಣ ಹೋರಾಟದ ನಾದಭೂಮಿ :

ಕರ್ನಾಟಕ ಎಂಬ ಹೆಸರಿನ ಗೌರವಯುತ ಹುಟ್ಟಿಗೆ ಗದಗ ನಾಡು ನೀಡಿದ ಕೊಡುಗೆ ಅಜರಾಮರ. 1956ರಲ್ಲಿ ರಾಜ್ಯ ನಿರ್ಮಾಣವಾದಾಗ ಅದನ್ನು “ಮೈಸೂರು ರಾಜ್ಯ” ಎಂದು ಕರೆಯಲಾಯಿತು. ಆದರೆ ಆ ಹೆಸರು ಸಮಗ್ರ ಕನ್ನಡ ನಾಡಿನ ಆತ್ಮವನ್ನು ಪ್ರತಿನಿಧಿಸಲಿಲ್ಲ. ಹೀಗಾಗಿ ನಾಡು ತುಂಬ “ಮೈಸೂರು ಅಲ್ಲ – ಕರ್ನಾಟಕ ಬೇಕು!” ಎಂಬ ಘೋಷಣೆ ಮೊಳಗಿತು.

ಈ ಹೋರಾಟಕ್ಕೆ ಜೀವ ತುಂಬಿದ ನಾಡುಗಳಲ್ಲಿ ಗದಗ ಪ್ರಮುಖ. ಇಲ್ಲಿ ಸಾಹಿತ್ಯಪರರು, ವಿದ್ಯಾರ್ಥಿಗಳು, ಯುವಕರು ಮತ್ತು ನಾಯಕರಿಂದ ಕನ್ನಡ ನುಡಿಯ ಗೌರವಕ್ಕಾಗಿ ಅಸಾಧಾರಣ ಚಳುವಳಿ ನಡೆಯಿತು. ಅಲೂರ ವೇಂಕಟರಾವ್ ಅವರ ಕನಸು “ಕನ್ನಡನಾಡು ಒಂದಾಗಬೇಕು, ಅದರ ಹೆಸರು ಕರ್ನಾಟಕವಾಗಬೇಕು” — ಗದಗದ ವೇದಿಕೆಗಳಲ್ಲಿ ಘೋಷಣೆಯಾಗಿ ಮೊಳಗಿತು. ಕವಿ ಗುರೂರಾಜ ಭಟ್ಟ, ಪಂಡಿತ ನರಸಿಂಹಾಚಾರ್ಯರು ಮತ್ತು ಶರಣ ಪರಂಪರೆಯ ಚಿಂತಕರು ಈ ಹೋರಾಟಕ್ಕೆ ವೈಚಾರಿಕ ಶಕ್ತಿ ನೀಡಿದರು.

ಗದಗ, ಧಾರವಾಡ, ಹುಬ್ಬಳ್ಳಿ, ಬಳ್ಳಾರಿ ಭಾಗಗಳಲ್ಲಿ ನಡೆದ ಜನಸಮಾವೇಶಗಳು ರಾಜ್ಯ ಸರ್ಕಾರದ ಗಮನ ಸೆಳೆಯುವಲ್ಲಿ ಮಹತ್ವದ ಪಾತ್ರವಹಿಸಿದವು. ಈ ಧ್ವನಿ ಬಲಿಷ್ಠ ಚಳುವಳಿಯಾಗಿ ಬೆಳೆಯಿತು. ಅಂತೂ 1973ರ ನವೆಂಬರ್ ೧ರಂದು “ಮೈಸೂರು ರಾಜ್ಯ” ಎಂಬ ಹೆಸರನ್ನು ಅಧಿಕೃತವಾಗಿ “ಕರ್ನಾಟಕ ರಾಜ್ಯ” ಎಂದು ಬದಲಾಯಿಸಲಾಯಿತು. ಆ ದಿನ ಕನ್ನಡ ನಾಡಿನ ಹೋರಾಟಗಾರರ ಕಣ್ಣೀರು ಹೆಮ್ಮೆಯ ಕಿರಣವಾಗಿ ಪರಿವರ್ತಿತವಾಯಿತು.

ಗದಗದ ಶಾಶ್ವತ ಹೆಮ್ಮೆ :

ಇಂದಿನ ಗದಗ, ಕರ್ನಾಟಕದ ನಾಮಕರಣ ಚಳುವಳಿಯ ಇತಿಹಾಸವನ್ನು ಹೆಮ್ಮೆಯಿಂದ ನೆನೆಸಿಕೊಳ್ಳುತ್ತದೆ. ಬಸವೇಶ್ವರರ ಶರಣ ತತ್ವ, ವಾಚನ ಸಾಹಿತ್ಯದ ಪರಂಪರೆ, ವೀರನಾರಾಯಣ ದೇವಾಲಯ, ಸೂಡಿ ಲಕ್ಕುಂಡಿಯ ವಾಸ್ತುಶಿಲ್ಪ ಸಾಂಸ್ಕೃತಿಕ ಸೌಂದರ್ಯ — ಇವೆಲ್ಲವೂ ನುಡಿಯ ನೆಲೆಗಟ್ಟಾಗಿವೆ. ಗದಗದ ನಾದ, ನುಡಿ ಮತ್ತು ನಿಷ್ಠೆ ಕರ್ನಾಟಕದ ನಾಮದಲ್ಲಿ ಅಚ್ಚಳಿಯದ ಗುರುತು ಬರೆದಿವೆ.

ನಮ್ಮ ಕರ್ತವ್ಯ – ಕನ್ನಡದ ನಾಳೆ ನಮ್ಮ ಕೈಯಲ್ಲಿ :

ರಾಜ್ಯೋತ್ಸವದ ದಿನ ನಾವು ಕೇವಲ ಹಬ್ಬವನ್ನು ಆಚರಿಸುವುದಕ್ಕಿಂತ ಕನ್ನಡದ ಸಂರಕ್ಷಣೆಯ ಪ್ರತಿಜ್ಞೆ ಮಾಡೋಣ. ಕನ್ನಡ ಮಾಧ್ಯಮ ಶಿಕ್ಷಣವನ್ನು ಉತ್ತೇಜಿಸುವುದು, ಸ್ಥಳೀಯ ಯುವಕರಿಗೆ ಉದ್ಯೋಗ ಸೌಲಭ್ಯ ಕಲ್ಪಿಸುವುದು, ಮತ್ತು ನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಮುಂದಿನ ಪೀಳಿಗೆಗೆ ಸಾರುವುದು ಪ್ರತಿಯೊಬ್ಬ ಕನ್ನಡಿಗನ ಜವಾಬ್ದಾರಿ.

ಕರ್ನಾಟಕ ರಾಜ್ಯೋತ್ಸವವು ನಾಡಿನ ಗೌರವ, ನುಡಿಯ ಶಕ್ತಿ ಮತ್ತು ಸಂಸ್ಕೃತಿಯ ವೈಭವವನ್ನು ಪ್ರತಿಬಿಂಬಿಸುವ ದಿನ. ಇದು ಗದಗದ ಹೋರಾಟದಿಂದ ಹುಟ್ಟಿದ ನಾಡಿನ ಕಥೆ, ಕನ್ನಡಿಗರ ಒಗ್ಗಟ್ಟಿನ ಪ್ರತೀಕ. ನಮ್ಮ ನುಡಿ, ನಾಡು ಮತ್ತು ಸಂಸ್ಕೃತಿಯನ್ನು ಕಾಪಾಡಿ ಬೆಳೆಸುವುದು ನಮ್ಮ ಧರ್ಮ. ಕನ್ನಡದ ಬೆಳಕು ಯಾವತ್ತೂ ನಂದದಿರಲಿ ಎಲ್ಲಿ ಕನ್ನಡ, ಅಲ್ಲಿ ಜೀವ!

ಕನ್ನಡಕ್ಕಾಗಿ ಪ್ರತಿಜ್ಞೆ :

ಕನ್ನಡದ ಬಗ್ಗೆ ಹೆಮ್ಮೆ ಇರಲಿ.

ಕನ್ನಡದಲ್ಲಿ ಮಾತನಾಡಿ, ಕನ್ನಡದಲ್ಲಿ ಕನಸು ಕಾಣಿ, ಕನ್ನಡದಲ್ಲಿ ಸಾಧನೆ ಮಾಡಿ.

ಇಂಗ್ಲಿಷ್ ಕಲಿಯುವುದು ಅಗತ್ಯ, ಆದರೆ ಕನ್ನಡವನ್ನು ಮರೆಯುವುದು ಅಪರಾಧ.

ನಮ್ಮ ಭಾಷೆ ನಮ್ಮ ಗುರುತು — ಅದು ನಶಿಸದಂತೆ ನೋಡಿಕೊಳ್ಳೋಣ.

ಮಕ್ಕಳ ಶಿಕ್ಷಣದಲ್ಲಿ ಕನ್ನಡದ ಪ್ರಾಮುಖ್ಯತೆ ಇರಬೇಕು. ಮಾಧ್ಯಮ, ವ್ಯವಹಾರ, ಆಡಳಿತ — ಎಲ್ಲೆಡೆ ಕನ್ನಡಕ್ಕೆ ಆದ್ಯತೆ ಕೊಡಬೇಕು.

ಈ ಹಬ್ಬ ನಮ್ಮೆಲ್ಲರಿಗೂ ಕನ್ನಡಕ್ಕಾಗಿ ನಿಜವಾದ ಬದ್ಧತೆಯ ಪ್ರಮಾಣವಾಗಿ ಇರಲಿ.

ವಸಂತ ಬಿ. ಮಡ್ಲೂರ, ಸಹಾಯಕ ನಿರ್ದೇಶಕ

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಗದಗ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande