
ನವದೆಹಲಿ, 29 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಬುಧವಾರ ಭಾರತೀಯ ವಾಯುಪಡೆಯ ಶಕ್ತಿಶಾಲಿ ರಫೇಲ್ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿ ಇತಿಹಾಸ ನಿರ್ಮಿಸಿದ್ದಾರೆ. ಈ ಹಾರಾಟದ ಬಳಿಕ ಅವರು, “ರಫೇಲ್ ವಿಮಾನದಲ್ಲಿ ಹಾರಾಟ ನಡೆಸಿರುವುದು ನನಗೆ ಮರೆಯಲಾಗದ ಅನುಭವ. ಇದು ದೇಶದ ರಕ್ಷಣಾ ಸಾಮರ್ಥ್ಯದ ಬಗ್ಗೆ ನನ್ನಲ್ಲಿ ಹೊಸ ಹೆಮ್ಮೆಯನ್ನು ಮೂಡಿಸಿದೆ” ಎಂದು ತಿಳಿಸಿದ್ದಾರೆ.
ರಾಷ್ಟ್ರಪತಿ ಮುರ್ಮು ಅವರು ಸುಮಾರು 30 ನಿಮಿಷಗಳ ಕಾಲ ಹಾರಾಟ ನಡೆಸಿ ಸುಮಾರು 200 ಕಿಮೀ ದೂರ ಕ್ರಮಿಸಿದರು. ಈ ವೇಳೆ ವಿಮಾನವು ಸಮುದ್ರ ಮಟ್ಟದಿಂದ 15,000 ಅಡಿ ಎತ್ತರದಲ್ಲಿ ಮತ್ತು ಗಂಟೆಗೆ 700 ಕಿಮೀ ವೇಗದಲ್ಲಿ ಹಾರಾಟ ಮಾಡಿತು. ಈ ರಫೇಲ್ ವಿಮಾನವನ್ನು 17 ಸ್ಕ್ವಾಡ್ರನ್‌ನ ಕಮಾಂಡಿಂಗ್ ಆಫೀಸರ್ ಗ್ರೂಪ್ ಕ್ಯಾಪ್ಟನ್ ಅಮಿತ್ ಗೆಹಾನಿ ಹಾರಿಸಿದರು.
ಭಾರತದ ಸಶಸ್ತ್ರ ಪಡೆಗಳ ಸುಪ್ರೀಂ ಕಮಾಂಡರ್ ಆಗಿರುವ ರಾಷ್ಟ್ರಪತಿಗಳು ಈ ಮೂಲಕ ರಫೇಲ್ ಮತ್ತು ಸುಖೋಯ್ ಎರಡೂ ಯುದ್ಧ ವಿಮಾನಗಳಲ್ಲಿ ಹಾರಾಟ ನಡೆಸಿದ ಭಾರತದ ಮೊದಲ ರಾಷ್ಟ್ರಪತಿ ಎಂಬ ಗೌರವಕ್ಕೇರಿದ್ದಾರೆ. ಅವರು 2023ರಲ್ಲಿ ಸುಖೋಯ್-30 ಎಂಕೆಐ ವಿಮಾನದಲ್ಲಿ ಹಾರಾಟ ನಡೆಸಿದ್ದರು.
ಹಾರಾಟದ ನಂತರ ಅಂಬಾಲಾ ವಾಯುಪಡೆ ನಿಲ್ದಾಣದ ಸಂದರ್ಶಕರ ಪುಸ್ತಕದಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡ ರಾಷ್ಟ್ರಪತಿ ಮುರ್ಮು , ಭಾರತೀಯ ವಾಯುಪಡೆಯ ರಫೇಲ್ ವಿಮಾನದಲ್ಲಿ ನನ್ನ ಮೊದಲ ಹಾರಾಟಕ್ಕಾಗಿ ಅಂಬಾಲಾ ವಾಯುಪಡೆ ನಿಲ್ದಾಣದಲ್ಲಿರಲು ನನಗೆ ತುಂಬಾ ಸಂತೋಷವಾಗಿದೆ. ರಫೇಲ್‌ನಲ್ಲಿ ಹಾರಾಟ ನಡೆಸಿರುವುದು ಮರೆಯಲಾಗದ ಅನುಭವ. ಬಲಿಷ್ಠ ರಫೇಲ್ ವಿಮಾನದಲ್ಲಿನ ಈ ಹಾರಾಟವು ರಾಷ್ಟ್ರದ ರಕ್ಷಣಾ ಸಾಮರ್ಥ್ಯಗಳ ಬಗ್ಗೆ ಹೆಮ್ಮೆಯನ್ನು ತುಂಬಿದೆ. ಈ ಹಾರಾಟವನ್ನು ಯಶಸ್ವಿಯಾಗಿ ನಡೆಸಿದ ಭಾರತೀಯ ವಾಯುಪಡೆ ಮತ್ತು ಅಂಬಾಲಾ ನಿಲ್ದಾಣದ ಸಂಪೂರ್ಣ ತಂಡಕ್ಕೆ ಅಭಿನಂದನೆಗಳು ಎಂದು ಬರೆದಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa