
ನವದೆಹಲಿ, 29 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ನವದೆಹಲಿಯ ರೋಹಿಣಿಯಲ್ಲಿ ಅಕ್ಟೋಬರ್ 31ರಂದು ನಡೆಯಲಿರುವ ಅಂತಾರಾಷ್ಟ್ರೀಯ ಆರ್ಯ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಲಿದ್ದಾರೆ. ಪ್ರಧಾನ ಮಂತ್ರಿ ಕಚೇರಿಯ ಪ್ರಕಟಣೆಯ ಪ್ರಕಾರ, ಮೋದಿ ಅವರು ಈ ಸಂದರ್ಭದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ.
ಈ ಶೃಂಗಸಭೆಯಲ್ಲಿ ಭಾರತ ಸೇರಿದಂತೆ ವಿದೇಶಗಳಿಂದಲೂ ಆರ್ಯ ಸಮಾಜದ ನಾನಾ ಶಾಖೆಗಳ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. “ಸೇವೆಯ 150 ಸುವರ್ಣ ವರ್ಷಗಳು” ಎಂಬ ಶೀರ್ಷಿಕೆಯಡಿ ವಿಶೇಷ ಪ್ರದರ್ಶನವನ್ನು ಆಯೋಜಿಸಲಾಗಿದ್ದು, ಅದರಲ್ಲಿ ಶಿಕ್ಷಣ, ಸಾಮಾಜಿಕ ಸುಧಾರಣೆ ಮತ್ತು ಆಧ್ಯಾತ್ಮಿಕ ಪ್ರಗತಿಗೆ ಆರ್ಯ ಸಮಾಜ ನೀಡಿದ ಕೊಡುಗೆಗಳನ್ನು ಪ್ರದರ್ಶಿಸಲಾಗಿದೆ.
ಆರ್ಯ ಸಮಾಜದ 150 ವರ್ಷಗಳ ಸೇವೆಯನ್ನು ಆಚರಿಸುವ ಜೊತೆಗೆ ಮಹರ್ಷಿ ದಯಾನಂದ ಸರಸ್ವತಿ ಅವರ ಸುಧಾರಣಾವಾದಿ ಹಾಗೂ ಶೈಕ್ಷಣಿಕ ಪರಂಪರೆಯನ್ನು ಗೌರವಿಸುವುದು, ವೈದಿಕ ತತ್ವಗಳು ಮತ್ತು ಭಾರತೀಯ ಮೌಲ್ಯಗಳ ಬಗ್ಗೆ ಜಾಗೃತಿ ಮೂಡಿಸುವುದು ಈ ಸಮಾವೇಶದ ಉದ್ದೇಶವಾಗಿದೆ ಎಂದು ಪಿಎಂಒ ತಿಳಿಸಿದೆ.
ಈ ಶೃಂಗಸಭೆ ಮಹರ್ಷಿ ದಯಾನಂದ ಸರಸ್ವತಿಯವರ 200ನೇ ಜನ್ಮದಿನಾಚರಣೆ ಮತ್ತು ಆರ್ಯ ಸಮಾಜದ 150 ವರ್ಷಗಳ ಸಾಮಾಜಿಕ ಸೇವೆ ಪೂರ್ಣಗೊಳಿಸಿದ ಸ್ಮರಣಾರ್ಥ ಆಯೋಜಿಸಲಾಗಿರುವ “ಜ್ಞಾನ ಜ್ಯೋತಿ ಮಹೋತ್ಸವ”ದ ಭಾಗವಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa