
ನವದೆಹಲಿ, 29 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ಬಿಹಾರದಲ್ಲಿ ತಮ್ಮ ಮೊದಲ ಚುನಾವಣಾ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದು, 2025ರ ವಿಧಾನ ಸಭಾ ಚುನಾವಣೆಗೆ ಅಧಿಕೃತವಾಗಿ ಪ್ರಚಾರ ಆರಂಭಿಸಲಿದ್ದಾರೆ.
ಆರ್‌ಜೆಡಿ ನಾಯಕ ಹಾಗೂ ಮಹಾಘಟಬಂಧನ್‌ನ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್ ಅವರೊಂದಿಗೆ ರಾಹುಲ್ ಗಾಂಧಿ ಸಕ್ರಾ (ಮುಜಾಫರ್‌ಪುರ) ಮತ್ತು ದರ್ಭಂಗಾದಲ್ಲಿ ಎರಡು ಜಂಟಿ ರ‍್ಯಾಲಿಗಳಲ್ಲಿ ಭಾಗವಹಿಸಲಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಕುಮಾರ್ ರಾಮ್ ಪರ ಸಕ್ರಾದಲ್ಲಿ ಪ್ರಚಾರ ಆರಂಭಿಸಿದ ನಂತರ, ಮಿಥಿಲಾಂಚಲ್ ಪ್ರದೇಶದ ಮೈತ್ರಿ ಅಭ್ಯರ್ಥಿಗಳ ಪರವಾಗಿ ದರ್ಭಂಗಾದಲ್ಲಿ ಬೃಹತ್ ಸಭೆ ನಡೆಯಲಿದೆ.
ಈ ರ‍್ಯಾಲಿಗಳು ಕಾಂಗ್ರೆಸ್–ಆರ್‌ಜೆಡಿ ಮೈತ್ರಿಯ ಏಕತೆಯನ್ನು ಪ್ರದರ್ಶಿಸುವ ನಿರೀಕ್ಷೆಯಿದ್ದು, ಬಿಜೆಪಿ–ಜೆಡಿ(ಯು) ನೇತೃತ್ವದ ಎನ್‌ಡಿಎ ವಿರುದ್ಧ ಒಗ್ಗಟ್ಟಿನ ಸಂಕೇತ ಎಂದು ಪಕ್ಷದ ನಾಯಕರು ಹೇಳಿದ್ದಾರೆ.
ಆಗಸ್ಟ್‌ನಲ್ಲಿ ನಡೆದ ‘ಮತದಾರ ಅಧಿಕಾರ ಯಾತ್ರೆ’ ವೇಳೆ ರಾಹುಲ್ ಗಾಂಧಿ ಬಿಹಾರದಲ್ಲಿ 16 ದಿನ ಕಳೆದಿದ್ದು, ಜನರೊಂದಿಗೆ ನೇರ ಸಂಪರ್ಕ ಬೆಳೆಸಿದ್ದರು. ಇತ್ತೀಚೆಗೆ ಛಠ್ ಹಬ್ಬದ ವೇಳೆಯ ರೈಲು ಅಸಮರ್ಪಕತೆ ಕುರಿತು ಕೇಂದ್ರ ಸರ್ಕಾರದ ವಿರುದ್ಧ ಟೀಕೆ ಮಾಡಿದ ಅವರು ಇದೀಗ ಪ್ರಚಾರದ ವೇದಿಕೆಯಿಂದ ಮತ್ತೊಮ್ಮೆ ಎನ್‌ಡಿಎ ಸರ್ಕಾರವನ್ನು ಗುರಿಯಾಗಿಸಬಹುದೆಂದು ರಾಜಕೀಯ ವಲಯದಲ್ಲಿ ಚರ್ಚೆಯಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa