
ಮೈಸೂರು, 27 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ರವಿ ಗೌಡ ನಿರ್ದೇಶನ, ನಿರ್ಮಾಣ ಹಾಗೂ ನಾಯಕತ್ವದಲ್ಲಿ ಮೂಡಿ ಬಂದಿರುವ ‘I am God’ ಚಿತ್ರದ ಟ್ರೇಲರ್ ಮೈಸೂರಿನಲ್ಲಿ ಬಿಡುಗಡೆಗೊಂಡಿದ್ದು, ಅದನ್ನು ರಿಯಲ್ ಸ್ಟಾರ್ ಉಪೇಂದ್ರ ಅನಾವರಣಗೊಳಿಸಿದರು.
ಈ ಕಾರ್ಯಕ್ರಮದಲ್ಲಿ ಟ್ರೇಲರ್ ವೀಕ್ಷಿಸಿದ ಉಪ್ಪೇಂದ್ರ, ತಮ್ಮ ಶಿಷ್ಯ ರವಿ ಗೌಡ ಅವರ ಪ್ರಯತ್ನವನ್ನು ಹೃತ್ಪೂರ್ವಕವಾಗಿ ಮೆಚ್ಚಿದರು. “ಉಪ್ಪಿ 2” ಸಿನಿಮಾದಲ್ಲಿ ಉಪೇಂದ್ರ ಅವರೊಂದಿಗೆ ಕೆಲಸಮಾಡಿದ ರವಿ ಗೌಡ, ಅದೇ ಸಂದರ್ಭದಲ್ಲಿ ಚಿತ್ರರಂಗದ ತಂತ್ರಗಳು ಹಾಗೂ ಕ್ರಿಯೇಟಿವಿಟಿಯನ್ನು ನೇರವಾಗಿ ಕಲಿತಿದ್ದರು. ಈಗ ಅವರು ನಿರ್ದೇಶಕ ಹಾಗೂ ನಾಯಕನಾಗಿ ಕಾಣಿಸಿಕೊಂಡು ತಮ್ಮ ಕನಸನ್ನು ನನಸಾಗಿಸಿಕೊಂಡಿದ್ದಾರೆ.
ಈ ವೇಳೆ ಮಾತನಾಡಿದ ರವಿ ಗೌಡ , “ಸಿನಿಮಾ ಕಲಿಯಲು ಯಾವುದೇ ಯೂನಿವರ್ಸಿಟಿ ಬೇಡ, ಉಪ್ಪಿ ಸರ್ ಹತ್ತಿರ ಹೋಗೋದೇ ಸಾಕು ಎಂದುಕೊಂಡು ಅವರ ಮಾರ್ಗದರ್ಶನ ಪಡೆದೆ,” ಎಂದರು. “ನಾವು ಸಿನಿಮಾ ಕಷ್ಟಪಟ್ಟು ಮಾಡಿದ್ದೇವೆ, ಬಂದು ನೋಡಿ ಅಂತ ಹೇಳೋದಿಲ್ಲ; ಆದರೆ ನಿಮ್ಮ ಗುಂಪಿನಲ್ಲಿ ಪ್ರತಿ ಶುಕ್ರವಾರ ಕನ್ನಡ ಸಿನಿಮಾ ನೋಡುವ ಒಬ್ಬರಾದರು ಇರುತ್ತಾರೆ, ಅವರನ್ನು ಕೇಳಿ ‘I am God’ ಹೇಗಿದೆ ಅಂತ ಅಷ್ಟೇ ಸಾಕು ನಮಗೆ!” ಎಂದು ಆತ್ಮವಿಶ್ವಾಸದಿಂದ ಹೇಳಿದರು.
ಈಗಾಗಲೇ ಎರಡು ಹಾಡುಗಳ ಮೂಲಕ ಪ್ರೇಕ್ಷಕರ ಗಮನ ಸೆಳೆದಿರುವ ‘I am God’ ಟ್ರೇಲರ್ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ಟ್ರೇಲರ್‌ನಲ್ಲಿ ಸಸ್ಪೆನ್ಸ್, ಥ್ರಿಲ್ಲರ್ ಮತ್ತು ಲವ್ ಸ್ಟೋರಿ ಅಂಶಗಳ ಸಂಯೋಜನೆ ಸ್ಪಷ್ಟವಾಗಿ ಗೋಚರಿಸುತ್ತದೆ. ಉಪೇಂದ್ರ ಶೈಲಿಯ ಚಿಂತನೆ ಮತ್ತು ನಿರ್ದೇಶನದ ಸ್ಪರ್ಶವೂ ಈ ಚಿತ್ರದಲ್ಲಿ ಕಂಡುಬರುತ್ತಿದೆ.
ಚಿತ್ರದಲ್ಲಿ ರವಿ ಗೌಡಗೆ ನಾಯಕಿಯಾಗಿ ವಿಜೇತಾ ಕಾಣಿಸಿಕೊಂಡಿದ್ದಾರೆ. ಜೊತೆಗೆ ರವಿಶಂಕರ್, ಅವಿನಾಶ್, ಅರುಣ ಬಾಲರಾಜ್ ಮತ್ತು ನಿರಂಜನ್ ಕುಮಾರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಸಂಗೀತವನ್ನು ಅಜನೀಶ್ ಲೋಕನಾಥ್, ಛಾಯಾಗ್ರಹಣವನ್ನು ಜಿತಿನ್ ದಾಸ್ ನಿರ್ವಹಿಸಿದ್ದಾರೆ.
ನವೆಂಬರ್ 7ರಂದು ರಾಜ್ಯಾದ್ಯಂತ ‘I am God’ ಚಿತ್ರ ತೆರೆಗೆ ಬರಲಿದ್ದು, ಉಪೇಂದ್ರ ಅಭಿಮಾನಿಗಳಿಗೂ, ಕನ್ನಡ ಪ್ರೇಕ್ಷಕರಿಗೂ ಕುತೂಹಲ ಹುಟ್ಟಿಸಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa