
ಗದಗ, 25 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಸ್ವಾತಂತ್ರ್ಯ ಹೋರಾಟಗಾರ್ತಿ ವೀರರಾಣಿ ಕಿತ್ತೂರ ಚೆನ್ನಮ್ಮಳ ಜಯಂತ್ಯುತ್ಸವವನ್ನು ನಿರ್ಲಕ್ಷಿಸಿ ಅಪಮಾನ ಮಾಡಿದ ತಹಸೀಲ್ದಾರರನ್ನು ಕೂಡಲೇ ಅಮಾನತ್ತು ಮಾಡಬೇಕೆಂದು ಗದಗ ಜಿಲ್ಲೆಯಲ್ಲಿ ಗುರುವಾರ ಲಕ್ಷ್ಮೀಶ್ವರ ತಹಸೀಲ್ದಾರ ಕಚೇರಿಯ ಎದುರು ಪಂಚಮಸಾಲಿ ಸಮಾಜ ಬಾಂಧವರು ವಿವಿಧ ಸಂಘಟನೆ ಮತ್ತು ಸಮಾಜದವರು ಆರಂಭಿಸಿದ್ದ ಪ್ರತಿಭಟನೆ ಜಿಲ್ಲಾಧಿಕಾರಿಗಳ ಮಧ್ಯಸ್ಥಿಕೆ ಭರವಸೆಗಳೊಂದಿಗೆ ಮುಕ್ತಾಯಗೊಂಡಿತು.
ತಹಸೀಲ್ದಾರರು ಚೆನ್ನಮ್ಮನ ಜಯಂತಿ ಆಚರಣೆಯ ಪೂರ್ವಭಾವಿ ಸಭೆ ಮಾಡದೆ, ಸ್ಥಳೀಯವಾಗಿಯೇ ಇದ್ದರೂ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದೇ ಸರ್ಕಾರದ ಆದೇಶ ಧಿಕ್ಕರಿಸಿ ಅಪಮಾನ ಮಾಡಿದ್ದಾರೆ. ಕೂಡಲೇ ಅವರನ್ನು ಅಮಾನತ್ತು ಮಾಡಬೇಕು ಎಂದು ಪಂಚಮಸಾಲಿ ಸಮಾಜದ ತಾಲೂಕಾಧ್ಯಕ್ಷ ಮಂಜುನಾಥ ಮಾಗಡಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಕರ್ನಾಟಕ ರಕ್ಷಣಾ ವೇದಿಕೆ. ಕರವೇ ಸ್ವಾಭಿಮಾನಿ ಸೇನೆ, ಶ್ರೀರಾಮಸೇನೆ, ಸಂಗೊಳ್ಳಿ ರಾಯಣ್ಣ ವೇದಿಕೆ ಸೇರಿ ವಿವಿಧ ಸಮಾಜ ಮತ್ತು ಸಂಘಟನೆಯವರು. ಮಹಿಳೆಯರೂ ಸಾಥ್ ನೀಡಿದರು.
ಧರಣಿ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಸಿ.ಎನ್ ಶ್ರೀಧರ ಅವರು ನಡೆದ ಘಟನೆಯ ಸಂಪೂರ್ಣ ಮಾಹಿತಿ ಪಡೆದರು. ಈ ವೇಳೆ ಮತನಾಡಿದ
ಅವರು ಸ್ವಾತಂತ್ರ್ಯ ಹೋರಾಟಗಾರ್ತಿ, ಭಾರತದ ಪ್ರಥಮ ಸ್ವಾತಂತ್ರ್ಯ ಹೋರಾಟದ ಪೂರ್ವದಲ್ಲಿಯೇ (1824) ಬ್ರಿಟೀಷರ ವಿರುದ್ಧ ಹೋರಾಡಿ ಸ್ವತಂತ್ರ ಭಾರತದ ಬೆಳ್ಳಿಚುಕ್ಕಿ ಎನಿಸಿಕೊಂಡಿದ್ದಾರೆ. ಚೆನ್ನಮ್ಮಾಜಿ ಯಾವುದೇ ಒಂದು ಜಾತಿ ಜನಾಂಗಕ್ಕೆ ಸೀಮಿತವಲ್ಲ. ಈ ನಿಟ್ಟಿನಲ್ಲಿ ತಹಸೀಲ್ದಾರರ ನಿರ್ಲಕ್ಷ್ಯ ಮೇಲ್ನೋಟಕ್ಕೆ ಸಾಬೀತಾಗಿದೆ. ಅವರ ವಿರುದ್ಧ ಶಿಸ್ತು ಕ್ರಮಕ್ಕೆ ಬರೆಯಲಾಗುವುದು ಮತ್ತು ಕಡ್ಡಾಯ ರಜೆ ಮೇಲೆ ಕಳುಹಿಸಲಾಗಿದೆ.
ಶಿರಹಟ್ಟಿ ತಹಸೀಲ್ದಾರರಿಗೆ ಹೆಚ್ಚುವರಿ ಪ್ರಭಾರ ವಹಿಸಲಾಗುವುದು. ತಹಸೀಲ್ದಾರರಿಂದಾದ ನಿರ್ಲಕ್ಷ್ಯಕ್ಕೆ ನಾನು ಕ್ಷಮೆ ಕೇಳುತ್ತಿದ್ದು, ಧರಣಿ ಕೈಬಿಡಿ ಎಂದು ವಿನಂತಿಸಿದರಲ್ಲದೆ, ಸಮಾಜ ಬಾಂಧವರು ತಾಲೂಕು ಮಟ್ಟದ ಚೆನ್ನಮ್ಮ ಜಯಂತಿ ಆಚರಣೆಗೆ ದಿನಾಂಕ ನಿಗದಿಪಡಿಸಿದರೆ ತಪ್ಪದೇ ನಾನೂ ಪಾಲ್ಗೊಳ್ಳುವೆ ಎಂದರು.
ಜಿಲ್ಲಾಧಿಕಾರಿಗಳೇ ಕ್ಷಮೆ ಕೇಳಿದ್ದರಿಂದ ಮತ್ತು ತಹಸೀಲ್ದಾರರ ವಿರುದ್ಧ ಕ್ರಮಕ್ಕೆ ಮುಂದಾಗಿದ್ದರಿಂದ ಸಮಧಾನಗೊಂಡ ಪ್ರತಿಭಟನಾಕಾರರು ಪರಸ್ಪರ ಮಾತುಕತೆ ನಡೆಸಿ ಪ್ರತಿಭಟನೆಯಿಂದ ಹಿಂದೆ ಸರಿಯುವ ನಿರ್ಧಾರ ಕೈಗೊಂಡರು.
ಈ ವೇಳೆ ಮಾತನಾಡಿದ ಮಂಜುನಾಥ ಮಾಗಡಿ, ಇನ್ನು ಮುಂದೆ ಯಾವುದೇ ಮಹಾನ್ ನಾಯಕರ ಜಯಂತಿ ಆಚರಣೆ ವೇಳೆಯೂ ಈ ರೀತಿ ಆಗದಂತೆ ತಹಸೀಲ್ದಾರ, ತಾಲೂಕು ಹಂತದ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ನಿರ್ದೇಶನ ನೀಡಬೇಕು. ಈ ತಹಸೀಲ್ದಾರರಿಗೆ ಗದಗ ಜಿಲ್ಲೆಯಲ್ಲಿ ಸೇವೆಗೆ ಅವಕಾಶ ಕೊಡಬಾರದು ಎಂದರು. ಈ ವೇಳೆ ಹಲವರು ಭಾಗಿಯಾಗಿದ್ದರು.
ಹಿಂದೂಸ್ತಾನ್ ಸಮಾಚಾರ್ / lalita MP